ಮುಂಬೈ: ಮುಂಬೈನಲ್ಲಿ ಬುಧವಾರ ನಿಧನರಾದ ಟಾಟಾ ಗ್ರೂಪ್‌ನ ಅಧ್ಯಕ್ಷ ರತನ್ ಟಾಟಾ ಭಾರತದ ಅತ್ಯಂತ ಗೌರವಾನ್ವಿತ ಉದ್ಯಮಿ. ಅವರು ದೇಶದ ವ್ಯಾಪಾರೋದ್ಯಮದ ಜಗತ್ತಿಗೆ ನೀಡಿದ ಕೊಡುಗೆಗಳಿಗೆ ಮಾತ್ರವಲ್ಲ, ಲೋಕೋಪಕಾರಕ್ಕೂ ರತನ್ ಹೆಸರುವಾಸಿಯಾಗಿದ್ದರು. ಸೋಮವಾರವೇ ರತನ್ ಟಾಟಾ ಆಸ್ಪತ್ರೆಗೆ ದಾಖಲಾಗಿದ್ದರು ಎಂಬ ಸುದ್ದಿ ಹರಿದಾಡಿತ್ತು. ಅಕ್ಟೋಬರ್ 7 ರಂದು ಟ್ವೀಟ್ ಮಾಡಿದ್ದ ಅವರು 'ಯಾವುದೇ ಆತಂಕಕ್ಕೆ ಕಾರಣವಿಲ್ಲ' ಎಂದು ಭರವಸೆ ಕೂಡಾ ನೀಡಿದ್ದರು. ಅವರ ವಯಸ್ಸು ಮತ್ತು ವೈದ್ಯಕೀಯ ಸಂಬಂಧಿತ ಪರಿಸ್ಥಿತಿಗಳಿಂದಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದೇನೆ ಎಂದು ಅವರು ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದರು.
ಆದರೆ, ಅಂತಿಮವಾಗಿ ಅವರು ಇಹಕೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಇಡೀ ವಿಶ್ವದ ಉದ್ಯಮ ವಲಯ ಸಂತಾಪ ಸೂಚಿಸುತ್ತಿದೆ.
ಅವರ ಜೀವನದ ಎಂಟು ಪ್ರಮುಖ ಸಂಗತಿಗಳು ಹೀಗಿವೆ
- ರತನ್ ಟಾಟಾ ಅವರು ಡಿಸೆಂಬರ್ 28, 1937 ರಂದು ಜನಿಸಿದರು. ರತನ್ ಟಾಟಾ ಅವರ ತಂದೆ ನೇವಲ್ ಟಾಟಾ. ಭಾರತದ ಅತಿದೊಡ್ಡ ಸಂಘಟಿತ ಟಾಟಾ ಗ್ರೂಪ್‌ನ ಸ್ಥಾಪಕ ಪಿತಾಮಹ ಜಮ್‌ಸೆಡ್ ಜಿ ಟಾಟಾ ಅವರ ಪುತ್ರ ರತನ್‌ಜಿ ಟಾಟಾ ಅವರು, ರತನ್ ಅವರನ್ನು ದತ್ತು ಪಡೆದರು.
- ರತನ್ ಅವರು 1961 ರಲ್ಲಿ ಟಾಟಾ ಗ್ರೂಪ್‌ಗೆ ಸೇರ್ಪಡೆಗೊಂಡರು. ಕಾರ್ನೆಲ್ ಯೂನಿವರ್ಸಿಟಿ ಕಾಲೇಜ್ ಆಫ್ ಆರ್ಕಿಟೆಕ್ಚರ್‌ನಿಂದ ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದ ನಂತರ ಟಾಟಾ ಸ್ಟೀಲ್‌ನಲ್ಲಿ ತಮ್ಮ ಮೊದಲ ಕೆಲಸವನ್ನು ಆರಂಭಿಸಿದರು.
- 1991 ರಲ್ಲಿ ಜೆಆರ್‌ಡಿ ಟಾಟಾ ಅವರು ನಿವೃತ್ತಿ ಪಡೆದ ಬಳಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ರತನ್ ಟಾಟಾ ಅವರು ಕ್ರಮೇಣ ಖ್ಯಾತಿಗಳಿಸಲಾರಂಭಿಸಿದರು. ಟಾಟಾ ಗ್ರೂಪ್ ಆಫ್ ಕಂಪನಿಗಳ ಮೂಲಕ ಲೋಕೋಪಕಾರಿ ಚಟುವಟಿಕೆಗಳ ಮೂಲಕ ಹೆಸರುವಾಸಿಯಾದರು.
- ಟಾಟಾದಲ್ಲಿ ರತನ್ ಟಾಟಾ ಅವರು 1990 ರಿಂದ 2012 ರವರೆಗೆ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅಕ್ಟೋಬರ್ 2016 ರಿಂದ ಫೆಬ್ರವರಿ 2017 ರವರೆಗೆ ಹಂಗಾಮಿ ಅಧ್ಯಕ್ಷರ ಪಾತ್ರವನ್ನೂ ನಿರ್ವಹಿಸಿದರು.
- ಟಾಟಾ ಗ್ರೂಪ್ ಟೆಟ್ಲಿ, ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಕೋರಸ್ ಸ್ವಾಧೀನಪಡಿಸಿಕೊಂಡಿತು, ಟಾಟಾ ಹೆಚ್ಚಾಗಿ ಭಾರತ - ಕೇಂದ್ರಿತ ಗುಂಪಿನಿಂದ ಜಾಗತಿಕ ಉದ್ಯಮವಾಗಿ ಪರಿವರ್ತಿಸುವಲ್ಲಿ ರತನ್ ಟಾಟಾ ಅವರ ಪಾತ್ರ ಪ್ರಮುಖವಾಗಿದೆ.
- ಟಾಟಾ ಸಮೂಹ ತಮ್ಮ ಆದಾಯದ ಸುಮಾರು ಶೇ 60-65 ರಷ್ಟು ದಾನ ಮಾಡುವ ಮೂಲಕ ವಿಶ್ವದ ಅತಿದೊಡ್ಡ ದಾನಿಗಳಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ. 21 ವರ್ಷಗಳ ಕಾಲ ಅವರು ಟಾಟಾ ಗ್ರೂಪ್ ಮುನ್ನಡೆಸಿದ್ದರು.
- ರತನ್ ಟಾಟಾ, ಗ್ರೂಪ್‌ನ ಚಾರಿಟಬಲ್ ಟ್ರಸ್ಟ್‌ಗಳ ಮುಖ್ಯಸ್ಥರಾಗಿ ಮುಂದುವರೆದಿದ್ದರು. ಅವರು 2000 ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. 2008 ರಲ್ಲಿ ಭಾರತದಲ್ಲಿ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ವಿಭೂಷಣದಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಅವರಿಗೆ ನೀಡಲಾಗಿತ್ತು.
- ರತನ್ ಟಾಟಾ ಅವರು ತಮ್ಮ ವೈಯಕ್ತಿಕ ಸಾಮರ್ಥ್ಯದ ಮೂಲಕ ಮತ್ತು ಕೆಲವು ಹೂಡಿಕೆ ಕಂಪನಿಗಳ ಮೂಲಕ ಸುಮಾರು 30 ಸ್ಟಾರ್ಟ್ ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.