ನವದೆಹಲಿ: ದೇಶಾದ್ಯಂತ ಬೇಸಿಗೆಯ ವಾತಾವರಣ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ವಿದ್ಯುತ್ ಬೇಡಿಕೆಯೂ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ನೆರವಾಗುವ ನಿಟ್ಟಿನಲ್ಲಿ ಅನಿಲ ಆಧಾರಿತ ವಿದ್ಯುತ್ ಸ್ಥಾವರಗಳನ್ನು ಕಾರ್ಯಗತಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ವಿದ್ಯುತ್ ಸಚಿವಾಲಯ ಶನಿವಾರ ತಿಳಿಸಿದೆ.
"ಅನಿಲ ಆಧಾರಿತ ಉತ್ಪಾದನಾ ಕೇಂದ್ರಗಳಿಂದ ಗರಿಷ್ಠ ವಿದ್ಯುತ್ ಉತ್ಪಾದನೆ ಮಾಡಲು ವಿದ್ಯುತ್ ಕಾಯ್ದೆ, 2003 ರ ಸೆಕ್ಷನ್ 11 ರ ಅಡಿಯಲ್ಲಿ ಸರ್ಕಾರವು ಎಲ್ಲಾ ಅನಿಲ ಆಧಾರಿತ ಉತ್ಪಾದನಾ ಕೇಂದ್ರಗಳಿಗೆ ನಿರ್ದೇಶನಗಳನ್ನು ನೀಡಿದೆ. ಈ ಸೆಕ್ಷನ್ ಅಡಿಯಲ್ಲಿ, ಉತ್ಪಾದನಾ ಕಂಪನಿಯು ಅಸಾಧಾರಣ ಸಂದರ್ಭಗಳಲ್ಲಿ ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ಯಾವುದೇ ಉತ್ಪಾದನಾ ಕೇಂದ್ರವನ್ನು ನಿರ್ವಹಿಸಬೇಕು ಎಂದು ರಾಜ್ಯ ಅಥವಾ ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಬಹುದು" ಎಂದು ಇಂಧನ ಸಚಿವಾಲಯ ತಿಳಿಸಿದೆ.
ಮುಖ್ಯವಾಗಿ ವಾಣಿಜ್ಯ ಕಾರಣಗಳಿಂದಾಗಿ ಅನಿಲ ಆಧಾರಿತ ಉತ್ಪಾದನಾ ಕೇಂದ್ರಗಳ (ಜಿಬಿಎಸ್) ಸಾಮರ್ಥ್ಯವು ಪ್ರಸ್ತುತ ಗಮನಾರ್ಹ ಮಟ್ಟದಲ್ಲಿ ಬಳಕೆಯಾಗುತ್ತಿಲ್ಲ. ಆಮದು ಮಾಡಿಕೊಂಡ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ಅನ್ವಯವಾಗುವಂತೆ ಸೆಕ್ಷನ್ 11 ರ ಅಡಿಯಲ್ಲಿನ ಆದೇಶವು ಮುಂಬರುವ ಹೆಚ್ಚಿನ ಬೇಡಿಕೆಯ ಅವಧಿಯಲ್ಲಿ ಅನಿಲ ಆಧಾರಿತ ಉತ್ಪಾದನಾ ಕೇಂದ್ರಗಳಿಂದ ವಿದ್ಯುತ್ ಲಭ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಈ ಆದೇಶವು ಮೇ 1, 2024 ರಿಂದ ಜೂನ್ 30, 2024 ರವರೆಗೆ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆಗೆ ಮಾನ್ಯವಾಗಿರುತ್ತದೆ ಎಂದು ಇಂಧನ ಸಚಿವಾಲಯ ತಿಳಿಸಿದೆ. ಅನಿಲ ಆಧಾರಿತ ವಿದ್ಯುತ್ ಅಗತ್ಯವಿರುವ ದಿನಗಳ ಸಂಖ್ಯೆಯನ್ನು ಗ್ರಿಡ್-ಇಂಡಿಯಾ ಅನಿಲ ಆಧಾರಿತ ಉತ್ಪಾದನಾ ಕೇಂದ್ರಗಳಿಗೆ ಮುಂಚಿತವಾಗಿ ತಿಳಿಸಲಿದೆ ಎಂದು ಸಚಿವಾಲಯ ಹೇಳಿದೆ.
ವಿತರಣಾ ಪರವಾನಗಿದಾರರೊಂದಿಗೆ ವಿದ್ಯುತ್ ಖರೀದಿ ಒಪ್ಪಂದಗಳನ್ನು (ಪಿಪಿಎ) ಹೊಂದಿರುವ ಅನಿಲ ಆಧಾರಿತ ಉತ್ಪಾದನಾ ಕೇಂದ್ರಗಳು ಮೊದಲು ತಮ್ಮ ವಿದ್ಯುತ್ ಅನ್ನು ಪಿಪಿಎ ಹೊಂದಿರುವವರಿಗೆ ನೀಡುತ್ತವೆ. ನೀಡಲಾಗುವ ವಿದ್ಯುತ್ ಅನ್ನು ಯಾವುದೇ ಪಿಪಿಎ ಹೊಂದಿರುವವರು ಬಳಸದಿದ್ದರೆ, ಅದನ್ನು ವಿದ್ಯುತ್ ಮಾರುಕಟ್ಟೆಯಲ್ಲಿ ನೀಡಲಾಗುವುದು. ಪಿಪಿಎಗಳಿಗೆ ಸಂಬಂಧಿಸಿರದ ಅನಿಲ ಆಧಾರಿತ ಉತ್ಪಾದನಾ ಕೇಂದ್ರಗಳು ವಿದ್ಯುತ್ ಮಾರುಕಟ್ಟೆಯಲ್ಲಿ ತಾವು ಉತ್ಪಾದಿಸಿದ ವಿದ್ಯುತ್ ಅನ್ನು ಮಾರಾಟ ಮಾಡಬಹುದು.
ಈ ನಿರ್ದೇಶನವನ್ನು ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಕೇಂದ್ರ ವಿದ್ಯುತ್ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಬೇಸಿಗೆಯಲ್ಲಿ ಬೇಡಿಕೆ ಇರುವಷ್ಟು ವಿದ್ಯುತ್ ಪೂರೈಸಲು ಅನಿಲ ಆಧಾರಿತ ಉತ್ಪಾದನಾ ಕೇಂದ್ರಗಳನ್ನು ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ : ಫಿನ್ಟೆಕ್ ಫಂಡಿಂಗ್ ಶೇ 59ರಷ್ಟು ಹೆಚ್ಚಳ: ಜಾಗತಿಕವಾಗಿ 3ನೇ ಸ್ಥಾನದಲ್ಲಿ ಭಾರತ - Fintech