How To Apply Minor PAN Card: ಪ್ರಸ್ತುತ ಹಣಕಾಸಿನ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಐಟಿ ರಿಟರ್ನ್ಸ್ ಸಲ್ಲಿಸುವವರೆಗೆ ಎಲ್ಲದಕ್ಕೂ ಪ್ಯಾನ್ ಅತ್ಯಗತ್ಯ. ಅದಲ್ಲದೇ, ಇದನ್ನು ಗುರುತಿನ ಚೀಟಿಯಾಗಿಯೂ ಬಳಸಬಹುದು. ತೆರಿಗೆ ಪಾವತಿ ಮಾಡುವವರು ಪ್ಯಾನ್ ಕಾರ್ಡ್ ಹೊಂದುವುದು ಕಡ್ಡಾಯ. ಹೀಗಾಗಿ 18 ವರ್ಷಗಳ ನಂತರವಷ್ಟೇ ಪ್ಯಾನ್ ಕಾರ್ಡ್ ಮಾಡಬಹುದು ಎಂಬ ಭಾವನೆ ನಿಮ್ಮಲ್ಲಿದ್ದರೆ, ಅದು ಖಂಡಿತಾ ತಪ್ಪು. ಏಕೆಂದರೆ ಪ್ಯಾನ್ ಕಾರ್ಡ್ ಕೋರಿ ಅರ್ಜಿ ಸಲ್ಲಿಕೆಗೆ ಆದಾಯ ತೆರಿಗೆ ಇಲಾಖೆ ಯಾವುದೇ ವಯೋಮಿತಿ ನಿಗದಿಪಡಿಸಿಲ್ಲ. ಮಕ್ಕಳೂ ಸಹ ಪ್ಯಾನ್ ಕಾರ್ಡ್ ಹೊಂದಬಹುದು. ಹಾಗಾದರೆ ಅಪ್ರಾಪ್ತ ವಯಸ್ಕರು ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸೋದು ಹೇಗೆ? ಅದನ್ನು ಪಡೆಯುವ ಮಾರ್ಗಗಳು ಏನು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಭಾರತದಲ್ಲಿರುವ ಎಲ್ಲ ತೆರಿಗೆದಾರರು ಪ್ಯಾನ್ ಕಾರ್ಡ್ ಹೊಂದಿರಬೇಕು. ಮಕ್ಕಳೂ ಸಹ ಪಾನ್ ಕಾರ್ಡ್ ಪಡೆಯಲು ಅರ್ಹರು ಎಂಬುದು ನಿಮಗೆ ಗೊತ್ತಾ? ಆದಾಯ ತೆರಿಗೆ ಸೆಕ್ಷನ್ 160 ಪ್ರಕಾರ ಪ್ಯಾನ್ ಕಾರ್ಡ್ ಪಡೆಯಲು ಯಾವುದೇ ವಯಸ್ಸಿನ ಅವಶ್ಯಕತೆ ಇಲ್ಲ. ಹಾಗಾಗಿ, ಅಪ್ರಾಪ್ತರು ಕೂಡ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಆದರೆ, ಮಕ್ಕಳು ಸ್ವಂತವಾಗಿ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಂತಿಲ್ಲ. ಅವರ ಪರವಾಗಿ ಪೋಷಕರು ಅಥವಾ ಪಾಲಕರು ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಹಾಗಾದರೆ ಅರ್ಜಿಯನ್ನು ಎಲ್ಲಿ ಸಲ್ಲಿಸಬಹುದು? ಅಗತ್ಯವಿರುವ ದಾಖಲೆಗಳು ಯಾವುವು? ಅರ್ಜಿ ಸಲ್ಲಿಸುವುದು ಹೇಗೆ? ಮಕ್ಕಳು ಯಾವಾಗ ಪ್ಯಾನ್ ಕಾರ್ಡ್ ಪಡೆಯಬಹುದು? ಎಲ್ಲದರ ವಿವರ ಇಲ್ಲಿದೆ.
ಮಗುವಿನ ಪ್ಯಾನ್ ಕಾರ್ಡ್ ಯಾವಾಗ ಬೇಕು? ಪೋಷಕರು ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡುವಾಗ ಯಾವುದೇ ಮಗುವಿಗೂ ಪ್ಯಾನ್ ಕಾರ್ಡ್ ಅಗತ್ಯ. ಇದರ ಹೊರತಾಗಿ, ನಿಮ್ಮ ಮಗುವನ್ನು ನಿಮ್ಮ ಹೂಡಿಕೆಯ ನಾಮಿನಿಯನ್ನಾಗಿ ಮಾಡಿದಾಗ, ಪ್ಯಾನ್ ಕಾರ್ಡ್ ಅಗತ್ಯವಿರುತ್ತದೆ. ಮಗುವಿನ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಲು, ಅಥವಾ ಅಪ್ರಾಪ್ತ ಮಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ (SSY) ಅನ್ನು ತೆರೆದಾಗ, ನೀವು ಮಗುವಿನ ಪ್ಯಾನ್ ಕಾರ್ಡ್ ವಿವರಗಳನ್ನು ಒದಗಿಸಬೇಕಾಗುತ್ತದೆ. ಅಪ್ರಾಪ್ತ ವಯಸ್ಕನು ಕೆಲಸ ಮಾಡುತ್ತಿದ್ದರೆ ಮತ್ತು ITR ಅನ್ನು ಸಲ್ಲಿಸಬೇಕಾದರೆ ಅವನು ಪ್ಯಾನ್ ಕಾರ್ಡ್ ಪಡೆಯಬಹುದು. ಐಟಿಆರ್ ಸಲ್ಲಿಸಲು ಪ್ಯಾನ್ ಕಾರ್ಡ್ ಹೊಂದಿರುವುದು ಸಹ ಅಗತ್ಯ.
ಎಲ್ಲಿ ಸಲ್ಲಿಸಬಹುದು: ಆನ್‌ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಈ ಮೊದಲೇ ಹೇಳಿದಂತೆ ಅಪ್ರಾಪ್ತ ವಯಸ್ಕರು ತಮ್ಮ ಸ್ವಂತ ಪಾನ್ ಕಾರ್ಡ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅವರ ಹೆತ್ತವರು ಅಥವಾ ಪೋಷಕರು ಮಾತ್ರ ಅವರಿಗೆ ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. ಪ್ಯಾನ್ ಕಾರ್ಡ್‌ಗಾಗಿ ಅರ್ಜಿಯನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಾಡಬಹುದು.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು: ಅಪ್ರಾಪ್ತ ವಯಸ್ಕರ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅಗತ್ಯ ಇರುವ ದಾಖಲೆಗಳು ಹೀಗಿವೆ. ಇಲ್ಲಿ ನೀಡಿರುವ ಅಗತ್ಯವಿರುವ ದಾಖಲೆಗಳೊಂದಿಗೆ ನೀವು ನಿಮ್ಮ ಮಗುವಿನ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.
- ಪೋಷಕರ ವಿಳಾಸ ಮತ್ತು ಗುರುತಿನ ಪುರಾವೆ
- ಅರ್ಜಿದಾರರ ಗುರುತಿನ ಪುರಾವೆ (ಆಧಾರ್ ಕಾರ್ಡ್/ರೇಷನ್ ಕಾರ್ಡ್/ಪಾಸ್‌ಪೋರ್ಟ್/ಡ್ರೈವಿಂಗ್ ಲೈಸೆನ್ಸ್/ಮತದಾರರ ಗುರುತಿನ ಚೀಟಿ)
- ವಿಳಾಸದ ಪುರಾವೆ (ಆಧಾರ್) ಕಾರ್ಡ್/ಪೋಸ್ಟ್ ಆಫೀಸ್ ಪಾಸ್‌ಬುಕ್/ಆಸ್ತಿ ನೋಂದಣಿ ದಾಖಲೆ ಇತ್ಯಾದಿ)
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?: ಪ್ಯಾನ್ ಕಾರ್ಡ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರು ಮೊದಲು ಅಧಿಕೃತ NSDL (National Securities Depository Limited) ವೆಬ್‌ಸೈಟ್‌ಗೆ ತೆರಳಬೇಕು. ಬಳಿಕ ಅಲ್ಲಿ ಫಾರ್ಮ್ 49A ಅನ್ನು ಡೌನ್‌ಲೋಡ್ ಮಾಡಬೇಕು. ನಂತರ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿಕೊಂಡು ವರ್ಗವನ್ನು ಆಯ್ಕೆ ಮಾಡಬೇಕು. ಅದರ ನಂತರ ವೈಯಕ್ತಿಕ ಮಾಹಿತಿಯನ್ನು ನಮೂದಿಸಬೇಕು. ಆ ಬಳಿಕ ಮಕ್ಕಳ ವಯಸ್ಸಿನ ಪುರಾವೆ ದಾಖಲೆ, ಇತರ ಅಗತ್ಯ ದಾಖಲೆಗಳು ಮತ್ತು ಪೋಷಕರ ಫೋಟೋವನ್ನು ಅಪ್ಲೋಡ್ ಮಾಡಬೇಕು. ಅದೇ ರೀತಿ ಅಲ್ಲಿ ನಮೂದಿಸಿರುವ ಮಾಹಿತಿ ಪ್ರಕಾರ ಪೋಷಕರ ಸಹಿಯನ್ನೂ ಅಪ್ಲೋಡ್ ಮಾಡಬೇಕು. ನಂತರ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಡಿಮ್ಯಾಂಡ್ ಡ್ರಾಫ್ಟ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಿ. ಆ ಬಳಿಕ ‘Submit’ಮೇಲೆ ಕ್ಲಿಕ್ ಮಾಡಿ. ಈ ಮೇಲಿನ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಸ್ವೀಕೃತಿ ಸಂಖ್ಯೆ ನೀಡಲಾಗುತ್ತದೆ. ಇದನ್ನು ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು ಬಳಸಬಹುದು. ಪರಿಶೀಲನೆ ಯಶಸ್ವಿಯಾದ ಬಳಿಕ ನಿಮ್ಮ ವಿಳಾಸಕ್ಕೆ ಪ್ಯಾನ್ ಕಾರ್ಡ್ ಕಳುಹಿಸಲಾಗುತ್ತದೆ.
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?: ಪ್ಯಾನ್ ಕಾರ್ಡ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರು ಮೊದಲು ಅಧಿಕೃತ ವೆಬ್‌ಸೈಟ್ ಅಥವಾ NSDL ಕಚೇರಿಯಿಂದ ಫಾರ್ಮ್ 49A ಪಡೆಯಬೇಕು. ನಂತರ ಸೂಚನೆಗಳನ್ನು ಓದಿ ಮತ್ತು ಅದಕ್ಕೆ ಅನುಗುಣವಾಗಿ ಎಲ್ಲಾ ವಿವರಗಳನ್ನು ನಮೂದಿಸಬೇಕು. ಬಳಿಕ ಮಗುವಿನ ಎರಡು ಭಾವಚಿತ್ರಗಳು ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು. ಅದಾದ ಬಳಿಕ ಹತ್ತಿರದ NSDL ಕಚೇರಿಗೆ ಸಲ್ಲಿಸಬೇಕು. ಅಲ್ಲದೆ ಪ್ರಕ್ರಿಯೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಮೈನರ್ ಪ್ಯಾನ್ ಅನ್ನು ಆಯಾ ವಿಳಾಸಕ್ಕೆ ಕಳುಹಿಸಲಾಗುತ್ತದೆ.
ಇದನ್ನು ಮರೆಯಬೇಡಿ: ಅಪ್ರಾಪ್ತ ವಯಸ್ಕರಿಗೆ ನೀಡಲಾದ ಪ್ಯಾನ್ ಕಾರ್ಡ್‌ನಲ್ಲಿ ಅವರ ಭಾವಚಿತ್ರ ಅಥವಾ ಸಹಿ ಇರುವುದಿಲ್ಲ. ಹಾಗಾಗಿ ಅದನ್ನು ಗುರುತಿನ ಸರಿಯಾದ ಪುರಾವೆಯಾಗಿ ಬಳಸಲಾಗುವುದಿಲ್ಲ. ಆದ್ದರಿಂದ, ಮಕ್ಕಳು 18 ವರ್ಷ ವಯಸ್ಸಾದಾಗ, ಅವರು ತಮ್ಮ ಪ್ಯಾನ್ ಕಾರ್ಡ್ ಅನ್ನು ನವೀಕರಿಸಲು ಅರ್ಜಿ ಸಲ್ಲಿಸಬೇಕು.