ಮುಂಬೈ: ದೇಶದಲ್ಲಿ ಈ ವರ್ಷ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯು ವಿವಿಧ ವಲಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ತಾತ್ಕಾಲಿಕ ಉದ್ಯೋಗಾವಕಾಶ ಸೃಷ್ಟಿಸುತ್ತಿದೆ. ಮತಗಟ್ಟೆಗಳ ಸಂಖ್ಯೆ ಮತ್ತು ಚುನಾವಣಾ ಸಂಬಂಧಿ ವಿವಿಧ ಚಟುವಟಿಕೆಗಳಿಗೆ ಅವಶ್ಯಕತೆ ಸೇರಿದಂತೆ ಹಲವು ವಿಷಯಾಧಾರಿತವಾಗಿ ಸುಮಾರು 9 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದು ವರ್ಕ್ ಇಂಡಿಯಾ ಸಿಇಒ ಮತ್ತು ಸಹ ಸಂಸ್ಥಾಪಕ ನಿಲೇಸ್ ದುಂಗರ್ವಾಲ್ ತಿಳಿಸಿದ್ದಾರೆ.
ಚುನಾವಣೆಯ ಪಾರದರ್ಶಕ ನಿರ್ವಹಣೆ ಮತ್ತು ಚುನಾವಣಾ ಪ್ರಕ್ರಿಯೆಯ ಸುಲಭ ಕಾರ್ಯಾಚರಣೆಗೆ ಮತಗಟ್ಟೆ ಅಧಿಕಾರಿಗಳು, ಚುನಾವಣಾ ಕ್ಲರ್ಕ್, ಭದ್ರತಾ ಸಿಬ್ಬಂದಿ, ಡೇಟಾ ಎಂಟ್ರಿ ಆಪರೇಟರ್ಸ್, ಸಾರಿಗೆ ಸಂಯೋಜಕರು ಮತ್ತು ಆಡಳಿತಾತ್ಮಕ ಸಿಬ್ಬಂದಿಯ ಕಾರ್ಯ ಚುನಾವಣಾ ಪ್ರಕ್ರಿಯೆಯ ಕಾರ್ಯನಿರ್ವಹಣೆಯಲ್ಲಿ ನಿರ್ಣಾಯಕರಾಗಿರುತ್ತಾರೆ.
2019ರ ಲೋಕಸಭಾ ಚುನಾವಣೆ ಕೂಡ ಅನೇಕ ಉದ್ಯೋಗಗಳನ್ನು ಸೃಷ್ಟಿಸಿತ್ತು. ಅಕೌಂಟಿಂಗ್ನಲ್ಲಿ ಶೇ.80, ಡೇಟಾ ಎಂಟ್ರಿ ಶೇ.64, ಭದ್ರತಾ ಸಿಬ್ಬಂದಿ ಶೇ.86, ಬ್ಯಾಕ್ ಆಫೀಸ್ ಶೇ.7, ಡೆಲಿವರಿ, ಡ್ರೈವರ್, ಫೀಲ್ಡ್ ಸೇಲ್ಸ್ ಮತ್ತು ಚಿಲ್ಲರೆ ಕ್ಷೇತ್ರದಲ್ಲಿ ಶೇ.65, ಕಂಟೆಂಟ್ ರೈಟಿಂಗ್ ಶೇ 67ರಷ್ಟು ಉದ್ಯೋಗ ಸೃಷ್ಟಿಸಿದೆ ಎಂಬ ಮಾಹಿತಿ ದೊರೆತಿದೆ.
ಕಳೆದ ಆರು ತಿಂಗಳ ಹಿಂದೆ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧ ವಲಯಗಳಲ್ಲಿ ತಾತ್ಕಾಲಿಕವಾಗಿ 2 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿತ್ತು ಎಂದು ಸಿಐಇಎಲ್ ಎಚ್‌ಆರ್ ನಿರ್ದೇಶಕ ಮತ್ತು ಸಿಇಒ ಆದಿತ್ಯ ನಾರಾಯಣ ಮಿಶ್ರಾ ಮಾಹಿತಿ ನೀಡಿದ್ದಾರೆ.
ಈ ಎಲ್ಲಾ ಉದ್ಯೋಗಗಳು ಚುನಾವಣಾ ದತ್ತಾಂಶ ವಿಶ್ಲೇಷಣೆ, ಯೋಜನೆ, ಸಾರ್ವಜನಿಕ ಸಂಪರ್ಕ, ಮಾರುಕಟ್ಟೆ ಸಮೀಕ್ಷೆ, ಮಾಧ್ಯಮ ಸಂಬಂಧ, ಕಂಟೆಂಟ್ ಡಿಸೈನ್, ಕಂಟೆಂಟ್ ಮಾರ್ಕೆಟಿಂಗ್, ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಎಐ ಸ್ಟ್ರಾಟಜಿ ಮತ್ತು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ನಂತಹ ಅನೇಕ ಪ್ರಮುಖ ವಲಯಗಳಲ್ಲಿ ಉದ್ಯೋಗ ಸೃಷ್ಟಿಸಿದೆ.
ಚುನಾವಣಾ ಪ್ರಚಾರ ಸಕ್ರಿಯವಾಗಿ ಆರಂಭವಾದ ಬಳಿಕ 8-13 ವಾರದಲ್ಲಿ ಈವೆಂಟ್ ಮ್ಯಾನೇಜ್ಮೆಂಟ್, ಪ್ರಿಂಟಿಂಗ್, ಸಾರಿಗೆ, ಆಹಾರ ಮತ್ತು ಪಾನೀಯ, ಕ್ಯಾಟರಿಂಗ್, ಭದ್ರತೆ, ಐಟಿ ನೆಟ್ವರ್ಕ್ ಮ್ಯಾನೇಜ್ಮೆಂಟ್ ಮತ್ತು ವಿಶ್ಲೇಷಣೆ ಕ್ಷೇತ್ರ ಹೆಚ್ಚು ಸಕ್ರಿಯ ಉದ್ಯೋಗ ಸೃಷ್ಟಿಸಿವೆ.
ಈ ಎಲ್ಲಾ ಉದ್ಯೋಗಗಳು ಕೇವಲ ಚುನಾವಣೆಗಾಗಿ ಮಾತ್ರ. ಇದು ತಾತ್ಕಾಲಿಕ ಉದ್ಯೋಗಾವಕಾಶವಾಗಿದೆ. ಇದು ಪ್ರಸ್ತುತದ ಉದ್ಯೋಗ ಮಾರುಕಟ್ಟೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂಬುದು ಗಮನಾರ್ಹ.
ಇದನ್ನೂ ಓದಿ: ನೀವು ನಿವೃತ್ತಿ ಬಗ್ಗೆ ಯೋಚಿಸುತ್ತಿದ್ದೀರಾ?: ಈ ಸಲಹೆಗಳನ್ನು ಪಾಲಿಸಿದರೆ ಹೆಚ್ಚುವರಿ ಪಿಂಚಣಿ ಗ್ಯಾರಂಟಿ