ನವದೆಹಲಿ: 2023-24ರ ಹಣಕಾಸು ವರ್ಷದ ನಿವ್ವಳ ನೇರ ತೆರಿಗೆ ಸಂಗ್ರಹವು ಕೇಂದ್ರ ಬಜೆಟ್ ಅಂದಾಜುಗಳನ್ನು ಮೀರಿ 1.35 ಲಕ್ಷ ಕೋಟಿ ರೂ. ಅಥವಾ ಶೇಕಡಾ 7.4 ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಭಾನುವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.
ಕಾರ್ಪೊರೇಟ್ ತೆರಿಗೆ ಮತ್ತು ವೈಯಕ್ತಿಕ ಆದಾಯ ತೆರಿಗೆಯನ್ನು ಒಳಗೊಂಡ ನಿವ್ವಳ ನೇರ ತೆರಿಗೆ ಸಂಗ್ರಹವು 2023-24ರಲ್ಲಿ 19.58 ಲಕ್ಷ ಕೋಟಿ ರೂ.ಗೆ ಅಂದರೆ ಶೇಕಡಾ 17.7 ರಷ್ಟು ಏರಿಕೆಯಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಇದು 16.64 ಲಕ್ಷ ಕೋಟಿ ರೂ. ಆಗಿತ್ತು.
2023-24ರ ಕೇಂದ್ರ ಬಜೆಟ್ನಲ್ಲಿ ನೇರ ತೆರಿಗೆ ಸಂಗ್ರಹದ ಗುರಿಯನ್ನು 18.23 ಲಕ್ಷ ಕೋಟಿ ರೂ.ಗೆ ನಿಗದಿಪಡಿಸಲಾಗಿತ್ತು ಮತ್ತು ನಂತರ ಪರಿಷ್ಕೃತ ಅಂದಾಜುಗಳಲ್ಲಿ ಇದನ್ನು 19.45 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿತ್ತು. ತಾತ್ಕಾಲಿಕ ನೇರ ತೆರಿಗೆ ಸಂಗ್ರಹ (ಮರುಪಾವತಿಯ ನಿವ್ವಳ)ವು ಬಜೆಟ್ ಅಂದಾಜಿಗಿಂತ ಶೇಕಡಾ 7.40 ರಷ್ಟು ಮತ್ತು ಪರಿಷ್ಕೃತ ಅಂದಾಜಿಗಿಂತ ಶೇಕಡಾ 0.67 ರಷ್ಟು ಹೆಚ್ಚಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.
2023-24ರ ಹಣಕಾಸು ವರ್ಷದಲ್ಲಿ ನೇರ ತೆರಿಗೆಗಳ ಒಟ್ಟು ಸಂಗ್ರಹ (ತಾತ್ಕಾಲಿಕ) 23.37 ಲಕ್ಷ ಕೋಟಿ ರೂ.ಗಳಾಗಿದ್ದು, ಇದು 2022-23ರ ಹಣಕಾಸು ವರ್ಷದಲ್ಲಿ ಒಟ್ಟು ಸಂಗ್ರಹವಾದ 19.72 ಲಕ್ಷ ಕೋಟಿ ರೂ.ಗಿಂತ ಶೇ 18.48 ರಷ್ಟು ಹೆಚ್ಚಾಗಿದೆ.
2023-24ರ ಹಣಕಾಸು ವರ್ಷದಲ್ಲಿ ಒಟ್ಟು ಕಾರ್ಪೊರೇಟ್ ತೆರಿಗೆ ಸಂಗ್ರಹ (ತಾತ್ಕಾಲಿಕ) 11.32 ಲಕ್ಷ ಕೋಟಿ ರೂ.ಗಳಾಗಿದ್ದು, ಇದು ಹಿಂದಿನ ವರ್ಷದ ಒಟ್ಟು ಕಾರ್ಪೊರೇಟ್ ತೆರಿಗೆ ಸಂಗ್ರಹವಾದ 10 ಲಕ್ಷ ಕೋಟಿ ರೂ.ಗಳಿಗೆ ಹೋಲಿಸಿದರೆ ಶೇಕಡಾ 13.06 ರಷ್ಟು ಬೆಳವಣಿಗೆಯಾಗಿದೆ. 2023-24ರ ಹಣಕಾಸು ವರ್ಷದಲ್ಲಿ ನಿವ್ವಳ ಕಾರ್ಪೊರೇಟ್ ತೆರಿಗೆ ಸಂಗ್ರಹ (ತಾತ್ಕಾಲಿಕ) 9.11 ಲಕ್ಷ ಕೋಟಿ ರೂ.ಗಳಾಗಿದ್ದು, ಹಿಂದಿನ ವರ್ಷದಲ್ಲಿ ಸಂಗ್ರಹವಾಗಿದ್ದ ನಿವ್ವಳ ಕಾರ್ಪೊರೇಟ್ ತೆರಿಗೆ 8.26 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಶೇಕಡಾ 10.26 ರಷ್ಟು ಬೆಳವಣಿಗೆಯಾಗಿದೆ.
2023-24ರ ಹಣಕಾಸು ವರ್ಷದಲ್ಲಿ ಒಟ್ಟು ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ (ಎಸ್ಟಿಟಿ ಸೇರಿದಂತೆ) 12.01 ಲಕ್ಷ ಕೋಟಿ ರೂ.ಗಳಾಗಿದ್ದು, ಇದು ಹಿಂದಿನ ವರ್ಷದ ಒಟ್ಟು ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ (ಎಸ್ಟಿಟಿ ಸೇರಿದಂತೆ) 9.67 ಲಕ್ಷ ಕೋಟಿ ರೂ.ಗಿಂತ ಶೇಕಡಾ 24.26 ರಷ್ಟು ಏರಿಕೆಯಾಗಿದೆ.
2023-24ರ ಹಣಕಾಸು ವರ್ಷದಲ್ಲಿ ನಿವ್ವಳ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ (ಎಸ್ಟಿಟಿ ಸೇರಿದಂತೆ) (ತಾತ್ಕಾಲಿಕ) 10.44 ಲಕ್ಷ ಕೋಟಿ ರೂ.ಗಳಾಗಿದ್ದು, ಹಿಂದಿನ ವರ್ಷದ ನಿವ್ವಳ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ (ಎಸ್ಟಿಟಿ ಸೇರಿದಂತೆ) 8.33 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಶೇಕಡಾ 25.23 ರಷ್ಟು ಏರಿಕೆಯಾಗಿದೆ.
2023-24ರ ಹಣಕಾಸು ವರ್ಷದಲ್ಲಿ 3.79 ಲಕ್ಷ ಕೋಟಿ ರೂ.ಗಳಷ್ಟು ತೆರಿಗೆ ರಿಫಂಡ್ ನೀಡಲಾಗಿದ್ದು, ಇದು 2022-23ರ ಹಣಕಾಸು ವರ್ಷದಲ್ಲಿ ನೀಡಲಾದ 3.09 ಲಕ್ಷ ಕೋಟಿ ರೂ.ಗಳ ಮರುಪಾವತಿಗಿಂತ ಶೇಕಡಾ 22.74 ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ : ಈ ವಾರ 310 ಮಿಲಿಯನ್ ಡಾಲರ್ ಫಂಡಿಂಗ್ ಸಂಗ್ರಹಿಸಿದ 37 ಭಾರತೀಯ ಸ್ಟಾರ್ಟ್ಅಪ್ಗಳು - INDIAN STARTUPS