ಜೈಪುರ(ರಾಜಸ್ಥಾನ): ''ಸರ್ಕಾರಗಳು ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವತ್ತ ಗಮನ ಹರಿಸಬೇಕು. ಇದಕ್ಕೆ ಬದಲಾಗಿ ಅಲ್ಪಾವಧಿಯ ರಾಜಕೀಯ ಲಾಭಕ್ಕಾಗಿ ಉಚಿತ ಕೊಡುಗೆಗಳನ್ನು ನೀಡುವತ್ತ ಯೋಚಿಸಬಾರದು'' ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಮಾಜಿ ಗವರ್ನರ್, ಹಿರಿಯ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಹೇಳಿದರು.
'ಜೈಪುರ ಸಾಹಿತ್ಯೋತ್ಸವ' ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದ ಅವರು, ''ಸುಗಮ ಅಭಿವೃದ್ಧಿ ಪಥವನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡುವುದು ಅತ್ಯಗತ್ಯ'' ಎಂದರು. ''ಸರ್ಕಾರಗಳು ಅಧಿಕಾರ ವಿಕೇಂದ್ರೀಕರಣಕ್ಕೆ ಸಿದ್ಧವಾಗಬೇಕು. ದೆಹಲಿ, ಕೇರಳ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿನ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ವಿಕೇಂದ್ರೀಕರಣದ ಪ್ರಯೋಜನಗಳನ್ನು ಕಾಣಬಹುದು'' ಎಂದು ಅವರು ಅಭಿಪ್ರಾಯಪಟ್ಟರು.
ಅರ್ಥಶಾಸ್ತ್ರಜ್ಞ ರೋಹಿತ್ ಲಾಂಬಾ ಅವರೊಂದಿಗೆ 'ಬ್ರೇಕಿಂಗ್ ದಿ ಮೌಲ್ಡ್: ರೀಮೇಜಿನಿಂಗ್ ಇಂಡಿಯಾಸ್ ಎಕನಾಮಿಕ್ ಫ್ಯೂಚರ್' (ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ) ಎಂಬ ಪುಸ್ತಕ ಬರೆದಿರುವ ರಾಜನ್, "ಸಂಶೋಧನೆ, ಸೃಜನಶೀಲತೆ ಮತ್ತು ಹೊಸ ಆಲೋಚನೆಗಳ ಅಗತ್ಯವಿರುವ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಜಾಪ್ರಭುತ್ವ ಮತ್ತು ಮುಕ್ತ ಮಾತುಕತೆ ಅತ್ಯಗತ್ಯ. ಈ ಪುಸ್ತಕವನ್ನು ಪ್ರತಿಯೊಬ್ಬರೂ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು" ಎಂದು ತಿಳಿಸಿದರು.
"ನಾವು ಚೀನಾದಂತಹ ಇತರ ದೇಶಗಳ ಬೆಳವಣಿಗೆಯ ಮಾದರಿಯನ್ನು ಅನುಸರಿಸಬೇಕಿಲ್ಲ. ಆದರೆ, ನಮ್ಮದೇ ಸ್ವಂತ ಮಾರ್ಗವನ್ನು ಅನುಸರಿಸಬೇಕು. ನಮ್ಮ ಸಾಮರ್ಥ್ಯಗಳನ್ನು ಗುರುತಿಸುವುದು ಮತ್ತು ಅವುಗಳನ್ನು ನಿರ್ಮಿಸುವುದು ಮುಖ್ಯ" ಎಂದರು. ಕ್ರಿಪ್ಟೋ ಕರೆನ್ಸಿ ಬಗ್ಗೆ ಪ್ರತಿಕ್ರಿಯಿಸಿದ ರಾಜನ್, ''ಇದೊಂದು ತಂತ್ರಜ್ಞಾನ. ಒಬ್ಬರ ಜೀವನದ ಉಳಿತಾಯದ ಹಣವನ್ನು ಪಣಕ್ಕಿಡುವುದು ಕೆಟ್ಟ ಆಲೋಚನೆ. ಕ್ರಿಪ್ಟೋವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು" ಎಂದು ಹೇಳಿದರು.
"ಬ್ರೇಕಿಂಗ್ ದಿ ಮೌಲ್ಡ್: ರೀಮೇಜಿನಿಂಗ್ ಇಂಡಿಯಾಸ್ ಎಕನಾಮಿಕ್ ಫ್ಯೂಚರ್' ಪುಸ್ತಕದ ಪ್ರಮುಖ ಭಾಗ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದೆ. ಲೇಖಕರು ನಿರುದ್ಯೋಗವು ಅಶಾಂತಿಗೆ ಕಾರಣವಾಗುತ್ತಿದೆ ಎಂದು ಹೇಳುತ್ತಾರೆ. ಸರಕಾರದಲ್ಲಿ ಮಾತ್ರ ಉತ್ತಮ ಉದ್ಯೋಗಗಳಿವೆ ಎಂದು ನಂಬಿರುವ ಯುವಕರು ಮೀಸಲಾತಿಗಾಗಿ ಎದುರು ನೋಡುತ್ತಿದ್ದಾರೆ. ಉದ್ಯೋಗ ಸೃಷ್ಟಿಗೆ ಅನುಕೂಲ ಮಾಡಿಕೊಡುವುದೇ ಜನರ ಉನ್ನತಿಗೆ ಉತ್ತಮ ಮಾರ್ಗ ಎಂಬುದನ್ನು ಸರಕಾರಗಳು ಅರಿತುಕೊಳ್ಳಬೇಕು'' ಎಂದು ರಾಜನ್ ಒತ್ತಿ ಹೇಳಿದರು.
ಇದನ್ನೂ ಓದಿ: ಮಧ್ಯಂತರ ಬಜೆಟ್ ಸರ್ಕಾರದ ಆತ್ಮ ವಿಶ್ವಾಸದ ಪ್ರತೀಕದಂತಿದೆ: ಎಸ್ & ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್