ಮುಂಬೈ: ಯುಎಸ್ ಫೆಡರಲ್ ರಿಸರ್ವ್ ಈ ವರ್ಷ ಕನಿಷ್ಠ ಮೂರು ಬಾರಿ ಬಡ್ಡಿ ದರ ಕಡಿತಗಳೊಂದಿಗೆ ಮೃದು ಹಣಕಾಸು ನೀತಿಯ ದೃಷ್ಟಿಕೋನವನ್ನು ಕಾಯ್ದುಕೊಂಡ ನಂತರ ಗುರುವಾರ ಬೆಳಗ್ಗೆ ಎಂಸಿಎಕ್ಸ್ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 66,778 ರೂ.ಗೆ ಏರಿದೆ.
ಚಿನ್ನದ ಬೆಲೆಗಳು ಹಿಂದಿನ ದಿನದ ಮುಕ್ತಾಯಕ್ಕಿಂತ 1,028 ರೂ.ಗಳಷ್ಟು ಏರಿಕೆಯಾಗಿದ್ದು, ಇದು ಸುಮಾರು ಶೇಕಡಾ 1.5 ರಷ್ಟು ಹೆಚ್ಚಳವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಚಿನ್ನದ ಬೆಲೆ ಆರಂಭಿಕ ವಹಿವಾಟಿನಲ್ಲಿ ಮೊದಲ ಬಾರಿಗೆ ಔನ್ಸ್ಗೆ 2,200 ಡಾಲರ್ ದಾಟಿದೆ. ಸಿಂಗಾಪುರದಲ್ಲಿ ಬೆಳಗ್ಗೆ 9:40 ಕ್ಕೆ ಸ್ಪಾಟ್ ಚಿನ್ನದ ದರ ಶೇಕಡಾ 0.7 ರಷ್ಟು ಏರಿಕೆಯಾಗಿ ಔನ್ಸ್ಗೆ 2,201.94 ಡಾಲರ್ಗೆ ತಲುಪಿದೆ.
ಕಡಿಮೆ ಬಡ್ಡಿದರಗಳು ಜಾರಿಯಲ್ಲಿರುವಾಗ ಚಿನ್ನಕ್ಕೆ ಹೋಲಿಸಿದರೆ ಇತರ ಹಣಕಾಸು ಸಾಧನಗಳ ಮೇಲೆ ಹೂಡಿಕೆ ಮಾಡುವುದು ಅಂಥ ಲಾಭದಾಯಕವಾಗಿರುವುದಿಲ್ಲ. ಇದರಿಂದ ಚಿನ್ನದ ಖರೀದಿ ಹೆಚ್ಚಾಗುತ್ತದೆ ಹಾಗೂ ಬೆಲೆಯೂ ಏರಿಕೆಯಾಗುತ್ತದೆ. ಇನ್ನು ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಅಪಾಯಗಳು ಮತ್ತು ಚೀನಾ ನೇತೃತ್ವದ ಕೇಂದ್ರ ಬ್ಯಾಂಕುಗಳ ಖರೀದಿ ಕೂಡ ಚಿನ್ನದ ಬೆಲೆ ಹೆಚ್ಚಾಗಲು ಇತರ ಕಾರಣಗಳಾಗಿವೆ.
ರಷ್ಯಾ-ಉಕ್ರೇನ್ ಯುದ್ಧ ಮತ್ತು ಇಸ್ರೇಲ್-ಹಮಾಸ್ ಸಂಘರ್ಷವು ಕೆಂಪು ಸಮುದ್ರ ಪ್ರದೇಶಕ್ಕೆ ಹರಡುತ್ತಿರುವುದರಿಂದ, ಚಿನ್ನವನ್ನು ಹೂಡಿಕೆದಾರರು ಆಕರ್ಷಕ ಸುರಕ್ಷಿತ ಆಸ್ತಿಯಾಗಿ ಪರಿಗಣಿಸುತ್ತಿದ್ದಾರೆ. ಮದುವೆಯ ಋತುವಿನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ದೃಢವಾಗಿ ಉಳಿದಿದೆ.
ತೈಲ ಬೆಲೆ ಏರಿಕೆ: ಯುಎಸ್ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ದೀರ್ಘಕಾಲದವರೆಗೆ ಹೆಚ್ಚಿಸಬಹುದು ಎಂಬ ಸಂಕೇತಗಳ ನಂತರ ಯುಎಸ್ ತೈಲ ಬೆಲೆಗಳು ಗುರುವಾರ ಮತ್ತೆ ಏರಿಕೆಯಾದವು. ಮೇ ತಿಂಗಳ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಶೇಕಡಾ 0.6 ಅಥವಾ 52 ಸೆಂಟ್ಸ್ ಏರಿಕೆಯಾಗಿ ಬ್ಯಾರೆಲ್ಗೆ 86.47 ಡಾಲರ್ಗೆ ತಲುಪಿದೆ. ಮೇ ತಿಂಗಳ ವಿತರಣೆಗಾಗಿ ಯುಎಸ್ ವೆಸ್ಟ್ ಟೆಕ್ಸಾಸ್ ಫ್ಯೂಚರ್ಸ್ ಹಿಂದಿನ ದಿನದ ವಹಿವಾಟಿನಲ್ಲಿ ಶೇಕಡಾ 1.6 ರಷ್ಟು ಕುಸಿದ ನಂತರ ಬ್ಯಾರೆಲ್ಗೆ ಶೇಕಡಾ 0.5 ಅಥವಾ 45 ಸೆಂಟ್ಸ್ ಏರಿಕೆಯಾಗಿ 81.72 ಡಾಲರ್ಗೆ ತಲುಪಿದೆ. ಏಪ್ರಿಲ್ ಕಾಂಟ್ರ್ಯಾಕ್ಟ್ ಬುಧವಾರ ಶೇಕಡಾ 2.1 ರಷ್ಟು ಕುಸಿದು 81.68 ಡಾಲರ್ಗೆ ತಲುಪಿದೆ.
ವಿಶ್ವದ ಅತಿದೊಡ್ಡ ತೈಲ ಗ್ರಾಹಕ ದೇಶವಾಗಿರುವ ಯುಎಸ್ನಲ್ಲಿ ಕಚ್ಚಾ ತೈಲ ದಾಸ್ತಾನು ಎರಡನೇ ವಾರವೂ ಕುಸಿತದಲ್ಲಿ ಮುಂದುವರೆದಿದೆ ಎಂದು ಯುಎಸ್ ಎನರ್ಜಿ ಇನ್ಫಾರ್ಮೇಶನ್ ಅಡ್ಮಿನಿಸ್ಟ್ರೇಷನ್ (ಇಐಎ) ಬುಧವಾರ ವರದಿ ಮಾಡಿದೆ.
ಇದನ್ನೂ ಓದಿ : ಸ್ಯಾಮ್ಸಂಗ್ ಗ್ಯಾಲಕ್ಸಿ A55 5G, A35 5G ಬಿಡುಗಡೆ: ಬೆಲೆ ಎಷ್ಟು, ವಿಶೇಷತೆ ಏನು?