ನವದೆಹಲಿ: ಅದಾನಿ ಗ್ರೂಪ್ ತನ್ನ ಸಾಲಗಳ ಕಂತು ಪಾವತಿ ಮತ್ತು ಮಧ್ಯಮಾವಧಿಯಲ್ಲಿ ಯೋಜಿತ ಬಂಡವಾಳ ವೆಚ್ಚಗಳನ್ನು ಪೂರೈಸಲು ಸಾಕಾಗುವಷ್ಟು ನಗದು ಲಭ್ಯತೆ ಮತ್ತು ಕಾರ್ಯಾಚರಣೆಯ ನಗದು ಹರಿವನ್ನು ಹೊಂದಿದೆ ಎಂದು ಅದಾನಿ ಗ್ರೂಪ್ನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಕ್ರಿಸಿಲ್ ರೇಟಿಂಗ್ಸ್ ಅಪ್ಡೇಟ್ ನೀಡಿದೆ.
ಕ್ರಿಸಿಲ್ ರೇಟಿಂಗ್ಸ್ ಹೇಳಿರುವ ಅಂಶಗಳಿವು: "ನಮ್ಮ ಎಲ್ಲಾ ಬಾಕಿ ಇರುವ ರೇಟಿಂಗ್ಗಳು ನಿರಂತರ ಪರಿಶೀಲನೆಯಲ್ಲಿವೆ" ಎಂದು ಕ್ರಿಸಿಲ್ ರೇಟಿಂಗ್ಸ್ ಹೇಳಿದೆ. ಅದಾನಿ ಸಮೂಹ ಕಂಪನಿಗಳ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆಗಳು ದಾಖಲಾಗಿರುವ ಸಂದರ್ಭದಲ್ಲಿ ಕ್ರಿಸಿಲ್ ರೇಟಿಂಗ್ ಕಂಪನಿಯ ಬಗ್ಗೆ ಹೊಸ ಅಪ್ಡೇಟ್ ನೀಡಿರುವುದು ಗಮನಾರ್ಹ.
ನವೆಂಬರ್ 20, 2024 ರಂದು ಯುಎಸ್ ನ್ಯಾಯಾಂಗ ಇಲಾಖೆ ಮತ್ತು ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (ಎಸ್ಇಸಿ) ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವ್ನೀತ್ ಜೈನ್ ಸೇರಿದಂತೆ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (ಎಜಿಇಎಲ್) ನ ಪ್ರಮುಖ ಅಧಿಕಾರಿಗಳ ವಿರುದ್ಧ ಆರೋಪಗಳನ್ನು ಹೊರಿಸಿದೆ. ಸೆಕ್ಯುರಿಟೀಸ್ ವಂಚನೆ, ವೈರ್ ವಂಚನೆ ಮತ್ತು ದಾರಿತಪ್ಪಿಸುವ ಬಾಂಡ್ ಯೋಜನೆಗಳನ್ನು ಜಾರಿಗೊಳಿಸುವ ಆರೋಪಗಳನ್ನು ಇವರ ಮೇಲೆ ಹೊರಿಸಲಾಗಿದೆ.
ಲಂಚದ ಆರೋಪ ನಿರಾಕರಿಸಿದ ಅದಾನಿ ಕಂಪನಿ: "ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವಿನೀತ್ ಜೈನ್ ವಿರುದ್ಧ ಯುಎಸ್ ಡಿಒಜೆ ಅಥವಾ ಯುಎಸ್ ಎಸ್ಇಸಿಯ ಸಿವಿಲ್ ದೂರಿನಲ್ಲಿ ತಿಳಿಸಲಾದ ಆರೋಪಗಳಲ್ಲಿ ಎಫ್ಸಿಪಿಎ ಉಲ್ಲಂಘನೆಯಾಗಿರುವ ಬಗ್ಗೆ ಯಾವುದೇ ಆರೋಪ ಹೊರಿಸಲಾಗಿಲ್ಲ" ಎಂದು ಹೇಳಿರುವ ಅದಾನಿ ಗ್ರೂಪ್ ಲಂಚದ ಆರೋಪಗಳನ್ನು ನಿರಾಕರಿಸಿದೆ.
ಈ ಸವಾಲುಗಳ ಹೊರತಾಗಿಯೂ, ಅದಾನಿ ಗ್ರೂಪ್ನ ಆಡಳಿತ ಮಂಡಳಿ ಮತ್ತು ಸಾಲದಾತರು ನೀಡಿರುವ ಪ್ರತಿಕ್ರಿಯೆಗಳ ಆಧಾರದ ಮೇಲೆ, ಹೂಡಿಕೆದಾರರು ಅಥವಾ ಸಾಲದಾತರು ಕಂಪನಿಯ ವಿರುದ್ಧ ಇಲ್ಲಿಯವರೆಗೆ ತ್ವರಿತ ಸಾಲ ಮರುಪವಾವತಿಗೆ ಬೇಡಿಕೆ ಅಥವಾ ಸಾಲದ ನಿಯಮಗಳಲ್ಲಿ ಬದಲಾವಣೆ ಮಾಡುವಂಥ ಯಾವುದೇ ನಕಾರಾತ್ಮಕ ಕ್ರಮಗಳನ್ನು ಕೈಗೊಂಡಿರುವ ಮಾಹಿತಿ ಇಲ್ಲ ಎಂದು ಕ್ರಿಸಿಲ್ ರೇಟಿಂಗ್ ಸ್ಪಷ್ಟ ಪಡಿಸಿದೆ. ಅದಾನಿ ಸಮೂಹವು ಹಣಕಾಸು ಮಾರುಕಟ್ಟೆಯ ಬೆಳವಣಿಗೆಗಳ ಆಧಾರದ ಮೇಲೆ ತನ್ನ ವಿವೇಚನಾತ್ಮಕ ಬಂಡವಾಳ ವೆಚ್ಚಗಳನ್ನು ಸರಿಹೊಂದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅದು ಹೇಳಿದೆ.
ಅದಾನಿ ಗ್ರೂಪ್ 2024 ರ ಆರ್ಥಿಕ ವರ್ಷದಲ್ಲಿ ದೃಢವಾದ ಆರ್ಥಿಕ ಕಾರ್ಯಕ್ಷಮತೆಯನ್ನು ವರದಿ ಮಾಡಿದೆ. ಬಡ್ಡಿ, ತೆರಿಗೆಗಳು, ಸವಕಳಿ ಮತ್ತು ಅಮೋರ್ಟೈಸೇಶನ್ (ಇಬಿಐಟಿಡಿಎ) ಗೆ ಮುಂಚೆ 82,917 ಕೋಟಿ ರೂ. ಆದಾಯ ಬಂದಿದೆ ಎಂದು ಕಂಪನಿ ಹೇಳಿದೆ.
ಗುಂಪಿನ ನಿವ್ವಳ ಸಾಲ-ಇಬಿಐಟಿಡಿಎ ಅನುಪಾತವು 2.19 ಪಟ್ಟು ಇದ್ದು, ಇದು ಆರೋಗ್ಯಕರ ಸಾಲ ನಿರ್ವಹಣೆಯ ಪ್ರತಿಬಿಂಬವಾಗಿದೆ. ಸೆಪ್ಟೆಂಬರ್ 2024 ರ ಹೊತ್ತಿಗೆ, ಗ್ರೂಪ್ 53,000 ಕೋಟಿ ರೂ.ಗಿಂತ ಹೆಚ್ಚಿನ ನಗದು ಬ್ಯಾಲೆನ್ಸ್ ಹೊಂದಿದ್ದು, ಇದು ಸುಮಾರು 27,500 ಕೋಟಿ ರೂ.ಗಳ ದೀರ್ಘಕಾಲೀನ ಸಾಲದ ಮೆಚ್ಯೂರಿಟಿಯನ್ನು ಸರಿದೂಗಿಸಲು ಸಾಕಾಗುತ್ತದೆ.
ಇದನ್ನೂ ಓದಿ : ಚಿನ್ನ, ಬೆಳ್ಳಿಯಲ್ಲಿ ಇನ್ವೆಸ್ಟ್ ಮಾಡುವುದನ್ನು ಭಾರತೀಯ ಗೃಹಿಣಿಯರಿಂದ ಕಲಿಯಬೇಕು: ಹೂಡಿಕೆದಾರ ರೋಜರ್ಸ್ ಶ್ಲಾಘನೆ