ಬೆಂಗಳೂರು : 2025ರ ಜೂನ್ ತ್ರೈಮಾಸಿಕದಲ್ಲಿ ಐಟಿ ದಿಗ್ಗಜ ಇನ್ಫೋಸಿಸ್ನ ನಿವ್ವಳ ಲಾಭ ಶೇ 7ರಷ್ಟು ಏರಿಕೆಯಾಗಿ 6,368 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಯು 5,945 ಕೋಟಿ ರೂಪಾಯಿ ಲಾಭ ಗಳಿಸಿತ್ತು ಎಂದು ಬಿಎಸ್ಇ ಫೈಲಿಂಗ್ನಲ್ಲಿ ತಿಳಿಸಿದೆ. ಏಪ್ರಿಲ್ - ಜೂನ್ನಲ್ಲಿ ನಿವ್ವಳ ಲಾಭವು ಹಿಂದಿನ ಮಾರ್ಚ್ ತ್ರೈಮಾಸಿಕದಲ್ಲಿ ಬಂದಿದ್ದ 7,969 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇಕಡಾ 20 ರಷ್ಟು ಕುಸಿದಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ, ಕಂಪನಿಯು ಆದಾಯ ಬೆಳವಣಿಗೆಯ ಮಾರ್ಗದರ್ಶನವನ್ನು ಸ್ಥಿರ ಕರೆನ್ಸಿ ಪರಿಭಾಷೆಯಲ್ಲಿ ಈ ಹಿಂದೆ ಯೋಜಿಸಲಾದ ಶೇಕಡಾ 1-3 ರಿಂದ ಶೇಕಡಾ 3-4 ಕ್ಕೆ ಹೆಚ್ಚಿಸಿದೆ. ವರ್ಷದ ಬೆಳವಣಿಗೆಯನ್ನು ಅವಲಂಬಿಸಿ 15,000 ದಿಂದ 20,000 ಫ್ರೆಶರ್ ಗಳನ್ನು ನೇಮಿಸಿಕೊಳ್ಳಲು ಕಂಪನಿ ಯೋಜಿಸಿದೆ.
"ಬಲವಾದ ಮತ್ತು ವಿಶಾಲ - ಆಧಾರಿತ ಬೆಳವಣಿಗೆ, ಆಪರೇಟಿಂಗ್ ಮಾರ್ಜಿನ್ ವಿಸ್ತರಣೆ, ದೊಡ್ಡ ವ್ಯವಹಾರಗಳು ಮತ್ತು ಅತ್ಯಧಿಕ ನಗದು ಆದಾಯದೊಂದಿಗೆ ನಾವು 2025ರ ಹಣಕಾಸು ವರ್ಷವನ್ನು ಅತ್ಯುತ್ತಮವಾಗಿ ಆರಂಭಿಸಿದ್ದೇವೆ. ಇದು ನಮ್ಮ ವಿಭಿನ್ನ ಸೇವಾ ಕೊಡುಗೆಗಳು, ಅಗಾಧವಾದ ಗ್ರಾಹಕರ ನಂಬಿಕೆ ಮತ್ತು ನಿರಂತರ ಕಾರ್ಯನಿರ್ವಹಣೆಗೆ ಸಾಕ್ಷಿಯಾಗಿದೆ" ಎಂದು ಕಂಪನಿಯ ಸಿಇಒ ಮತ್ತು ಎಂಡಿ ಸಲೀಲ್ ಪರೇಖ್ ಹೇಳಿದರು.
ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣಾ ಲಾಭವು ಶೇಕಡಾ 21.1 ರಷ್ಟಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಕಾರ್ಯಾಚರಣಾ ಲಾಭವು ಶೇಕಡಾ 20 - 22 ರಷ್ಟಿರಬಹುದು ಎಂದು ಕಂಪನಿ ನಿರೀಕ್ಷಿಸಿದೆ.
ಕಂಪನಿಯು ತ್ರೈಮಾಸಿಕದಲ್ಲಿ 4.1 ಬಿಲಿಯನ್ ಡಾಲರ್ ಮೌಲ್ಯದ ದೊಡ್ಡ ಒಪ್ಪಂದಗಳನ್ನು ಪಡೆದುಕೊಂಡಿದೆ. ಇನ್ಫೋಸಿಸ್ನ ಆದಾಯಕ್ಕೆ ಅತಿದೊಡ್ಡ ಕೊಡುಗೆ ನೀಡುವ ಹಣಕಾಸು ಸೇವೆಗಳ ವಿಭಾಗದ ಪಾಲು ಸ್ಥಿರ ಕರೆನ್ಸಿ ಆಧಾರದ ಮೇಲೆ ಶೇಕಡಾ 0.3 ರಷ್ಟು ಕುಸಿತವನ್ನು ದಾಖಲಿಸಿದೆ. ಚಿಲ್ಲರೆ ವಿಭಾಗದ ಪಾಲು ಶೇಕಡಾ 3 ರಿಂದ 13.8 ಕ್ಕೆ ಇಳಿದರೆ, ಸಂವಹನ ವಿಭಾಗದ ಪಾಲು ಶೇಕಡಾ 5.4 ರಷ್ಟು ಏರಿಕೆಯಾಗಿ 12.1 ಕ್ಕೆ ತಲುಪಿದೆ. ಇಂಧನ, ಯುಟಿಲಿಟಿಗಳು, ಸಂಪನ್ಮೂಲಗಳು, ಸೇವೆಗಳ ಪಾಲು ಶೇಕಡಾ 6.3 ರಿಂದ 13.3 ಕ್ಕೆ ಏರಿದೆ.
ಕಂಪನಿಯ ಉದ್ಯೋಗಿಗಳ ಸಂಖ್ಯೆ ಜೂನ್ 2024 ರ ತ್ರೈಮಾಸಿಕದಲ್ಲಿ ಶೇಕಡಾ 6 ರಷ್ಟು ಕುಸಿದು 3,15,332 ಕ್ಕೆ ತಲುಪಿದೆ. ಹಿಂದಿನ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಸಂಖ್ಯೆ 3,17,240 ಆಗಿತ್ತು. ಕಂಪನಿಯು ಉದ್ಯೋಗಿಗಳ ಬಳಕೆಯ ಮಟ್ಟವನ್ನು ವರ್ಷದಿಂದ ವರ್ಷಕ್ಕೆ ಶೇಕಡಾ 78.9 ರಿಂದ ಶೇಕಡಾ 83.9 ಕ್ಕೆ ಹೆಚ್ಚಿಸಿದೆ.
ಇದನ್ನೂ ಓದಿ : ಮೊದಲ ಬಾರಿಗೆ 81 ಸಾವಿರದ ದಾಟಿದ ಸೆನ್ಸೆಕ್ಸ್: ನಿಫ್ಟಿ 188 ಅಂಕಗಳ ಏರಿಕೆ; ಐಟಿ ಷೇರುಗಳಲ್ಲಿ ಭರ್ಜರಿ ರ್‍ಯಾಲಿ - share market