ನವದೆಹಲಿ: ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಕ್ಯೂ 1) ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆ ಶೇಕಡಾ 11.5 ರಷ್ಟು (ವರ್ಷದಿಂದ ವರ್ಷಕ್ಕೆ) ಬೆಳವಣಿಗೆ ದಾಖಲಿಸಿದ್ದು, ಈ ಅವಧಿಯಲ್ಲಿ 34 ಮಿಲಿಯನ್ (3.40 ಕೋಟಿ) ಸ್ಮಾರ್ಟ್ಪೋನ್ಗಳು ಮಾರಾಟವಾಗಿವೆ. ಈ ಪೈಕಿ ಆ್ಯಪಲ್ ಮೊದಲ ತ್ರೈಮಾಸಿಕದಲ್ಲಿ ದಾಖಲೆಯ ಶೇಕಡಾ 19 ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ವರದಿಯೊಂದು ಮಂಗಳವಾರ ತೋರಿಸಿದೆ. ಐಡಿಸಿ ಪ್ರಕಾರ, ಪ್ರೀಮಿಯಂ ಸ್ಮಾರ್ಟ್ಫೋನ್ಗಳು ಒಟ್ಟಾರೆ ಮಾರುಕಟ್ಟೆಯಲ್ಲಿ ಶೇಕಡಾ 2 ರಷ್ಟು ಪಾಲು ಹೊಂದಿದ್ದು, ಸಂಖ್ಯೆಗಳ ಆಧಾರದಲ್ಲಿ ಇವುಗಳ ಮಾರಾಟ ಶೇಕಡಾ 21 ರಷ್ಟು ಕುಸಿದಿದೆ.
"ಈ ತ್ರೈಮಾಸಿಕದಲ್ಲಿ ಅನೇಕ ಬೆಲೆ ಶ್ರೇಣಿಗಳ ಹಲವಾರು ಹೊಸ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಿವೆ. ಪ್ರೀಮಿಯಂ ಆಫರ್ಗಳೊಂದಿಗೆ ಹೆಚ್ಚಿನ ಪ್ರಚಾರವನ್ನೂ ಕಂಪನಿಗಳು ಕೈಗೊಂಡಿವೆ. ಜನ ಸುಲಭವಾಗಿ ಹೊಸ ಸ್ಮಾರ್ಟ್ಫೋನ್ ಕೊಳ್ಳಲು ಸಾಧ್ಯವಾಗುವಂತೆ ಮೊಬೈಲ್ ಕಂಪನಿಗಳು ಮೈಕ್ರೋ ಫೈನಾನ್ಸಿಂಗ್ ಮೂಲಕ ಸಾಲದ ಸೌಲಭ್ಯಗಳನ್ನು ಕೂಡ ಹೆಚ್ಚಿಸಿವೆ" ಎಂದು ಐಡಿಸಿ ಇಂಡಿಯಾದ ಕ್ಲೈಂಟ್ ಡಿವೈಸಸ್ ವಿಭಾಗದ ಹಿರಿಯ ಸಂಶೋಧನಾ ವ್ಯವಸ್ಥಾಪಕಿ ಉಪಾಸನಾ ಜೋಶಿ ಹೇಳಿದ್ದಾರೆ.
ಬೆಲೆಗಳಲ್ಲಿ ರಿಯಾಯಿತಿ, ಇ - ಟೈಲರ್ ಪ್ಲಾಟ್ಫಾರ್ಮ್ಗಳಲ್ಲಿ ವಿಶೇಷ ಆಫರ್ಗಳು ಮತ್ತು ಆಕರ್ಷಕ ಸಾಲ ಸೌಲಭ್ಯಗಳ ಮೂಲಕ ಹಬ್ಬದ ಋತುವಿನ ನಂತರವೂ ಆ್ಯಪಲ್ ಭಾರತದಲ್ಲಿ ಸ್ಥಿರವಾದ ಮಾರುಕಟ್ಟೆ ಬೆಳವಣಿಗೆ ಸಾಧಿಸಿದೆ. ದೇಶದಲ್ಲಿ ಒಟ್ಟಾರೆ ಐಫೋನ್ಗಳ ಮಾರಾಟದಲ್ಲಿ ಐಫೋನ್ 14 ಮತ್ತು 15 ಗಳ ಪಾಲು ಶೇಕಡಾ 56 ರಷ್ಟಿದೆ. ಜೊತೆಗೆ ಕಂಪನಿಯು ಭಾರತದಲ್ಲಿ ತನ್ನ ಫೋನ್ಗಳ ಉತ್ಪಾದನೆ ದ್ವಿಗುಣಗೊಳಿಸಿರುವುದು ಗಮನಾರ್ಹ.
ಬಹುತೇಕ ಜನಸಂಖ್ಯೆಯ ಬಜೆಟ್ಗೆ ಸರಿಹೊಂದುವ ಸ್ಮಾರ್ಟ್ ಫೋನ್ಗಳ ಮಾರಾಟ ಶೇಕಡಾ 22 ರಷ್ಟು ಏರಿಕೆಯಾಗಿದ್ದು, ಒಂದು ವರ್ಷದ ಹಿಂದೆ ಇದ್ದ ಶೇಕಡಾ 44 ರಿಂದ ಶೇಕಡಾ 48 ಕ್ಕೆ ತಲುಪಿದೆ. ಬಜೆಟ್ ವಿಭಾಗದಲ್ಲಿ ವಿವೋ, ಶಿಯೋಮಿ ಮತ್ತು ಸ್ಯಾಮ್ ಸಂಗ್ ಮೊದಲ ಮೂರು ಸ್ಥಾನದಲ್ಲಿದ್ದು, ಒಟ್ಟಾರೆಯಾಗಿ ಈ ವಿಭಾಗದಲ್ಲಿ ಶೇಕಡಾ 53 ರಷ್ಟು ಪಾಲು ಹೊಂದಿವೆ ಎಂದು ವರದಿ ತಿಳಿಸಿದೆ. ಈ ತ್ರೈಮಾಸಿಕದಲ್ಲಿ ಸುಮಾರು 23 ಮಿಲಿಯನ್ 5 ಜಿ ಸ್ಮಾರ್ಟ್ಫೋನ್ಗಳು ಮಾರಾಟವಾಗಿದ್ದು, 5 ಜಿ ಸಾಧನಗಳ ಪಾಲು ಶೇಕಡಾ 69 ಕ್ಕೆ ಏರಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಇದರ ಪಾಲು ಶೇಕಡಾ 46 ರಷ್ಟಿತ್ತು.
ಇದನ್ನೂ ಓದಿ : ಏಪ್ರಿಲ್ನಲ್ಲಿ 12 ತಿಂಗಳ ಗರಿಷ್ಠ ಮಟ್ಟದಲ್ಲಿ ಸಗಟು ಹಣದುಬ್ಬರ: ಶೇ 1.26ಕ್ಕೆ ಏರಿಕೆ - Wholesale Price Inflation