ಕರೂರು(ತಮಿಳುನಾಡು): ಈಗಾಗಲೇ ಎರಡು ಮದುವೆಯಾಗಿ ಮೂರನೇ ಮದುವೆಗೆ ಸಿದ್ಧವಾಗಿದ್ದ ಮಹಿಳೆಯೊಬ್ಬರು ಪೊಲೀಸರು ಬಂಧಿಸಿ ಜೈಲಿಗಟ್ಟಿದ ಘಟನೆ ಕರೂರಿನಲ್ಲಿ ನಡೆದಿದೆ. ಹೌದು, ಕರೂರು ಜಿಲ್ಲೆಯ ಪರಮತಿ ಸಮೀಪದ ಎಳವನೂರಿನ ಫೈನಾನ್ಶಿಯರ್ ಸೆಲ್ವಕುಮಾರ್ ಅವರು 2020ರಲ್ಲಿ ಕೊಯಮತ್ತೂರಿನ ಸೂಲೂರು ಬಳಿಯ ಸೆಂಚುರಿ ಹಿಲ್‌ನ ತಪ್ಪಲಿನ ಕೃತಿಕಾ (25) ಅವರನ್ನು ವಿವಾಹವಾಗಿದ್ದರು. ಮದುವೆಯ ನಂತರ ಫೈನಾನ್ಶಿಯರ್ ಸೆಲ್ವಕುಮಾರ್ ತನ್ನ ಕುಟುಂಬದೊಂದಿಗೆ ಪುದುಕೊಟ್ಟೈ ಜಿಲ್ಲೆಯ ಅರಂತಂಗಿಯಲ್ಲಿ ನೆಲಸಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು.
ಈ ವೇಳೆ ಸೆಲ್ವಕುಮಾರ್‌ಗೆ ಪತ್ನಿ ಕೃತಿಕಾ ಮದುವೆಯಾದಾಗಿನಿಂದಲೂ ತನ್ನ ತಾಯಿ ಬಾಲಾಮಣಿಯನ್ನು ಭೇಟಿಯಾಗುತ್ತಿದ್ದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ವಿಚಾರಿಸಿದಾಗ ಕೃತಿಕಾ ಹಾಗೂ ಸೆಲ್ವಕುಮಾರ್ ನಡುವೆ ವಾಗ್ವಾದ ನಡೆದಿತ್ತು. ಇದರ ನಡುವೆ ಕಳೆದ ವರ್ಷ ಕರೂರು ಜಿಲ್ಲೆಯ ಎಳವನೂರಿಗೆ ಹೋಗಿದ್ದ ಕೃತಿಕಾ, ಪತಿ ಸೆಲ್ವಕುಮಾರ್ ಅವರ ಬೀರುವಿನಿಂದ ಹಣ ಮತ್ತು ಚಿನ್ನಾಭರಣ ತೆಗೆದುಕೊಂಡು ಹೋಗಿದ್ದರು ಎಂದು ಸೆಲ್ವಕುಮಾರ್ ತಂದೆ ದುರೈಸಾಮಿ ಮಾಹಿತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕೃತಿಕಾ ಅವರನ್ನು ಸಂಪರ್ಕಿಸಲು ಸೆಲ್ವಕುಮಾರ್ ಯತ್ನಿಸಿದಾಗ ಆಕೆ ಕರೆ ಸ್ವೀಕರಿಸದ ಕಾರಣ ಅನುಮಾನಗೊಂಡು ಕೃತಿಕಾ ಮನೆಗೆ ತೆರಳಿದ್ದರು. ಆದರೆ ಆಕೆ ಈಗಾಗಲೇ ಮನೆ ಖಾಲಿ ಮಾಡಿದ್ದಳು. ಸಂಬಂಧಿಕರು ವಿಚಾರಿಸಿದಾಗ ಕೃತಿಕಾ ಸುಲ್ತಾನ್ ಪೇಟೆ ಪೊಲೀಸ್ ವ್ಯಾಪ್ತಿಯ ಸೆಂಚೆರಿಮಲೈನಲ್ಲಿ ತಲೆಮರೆಸಿಕೊಂಡಿರುವುದು ಪತ್ತೆಯಾಗಿದೆ. ಬಳಿಕ ಸೆಲ್ವಕುಮಾರ್, ಕೃತಿಕಾಳನ್ನು ತನ್ನೊಂದಿಗೆ ಬರುವಂತೆ ಆಹ್ವಾನಿಸುತ್ತಾನೆ. ಆದರೆ ಆಕೆ ಬರಲು ನಿರಾಕರಿಸುತ್ತಾಳೆ. ಇದರಿಂದ ಕೋಪಗೊಂಡ ಸೆಲ್ವಕುಮಾರ್, ಚಿನ್ನಾಭರಣ ಹಾಗೂ ಹಣ ನೀಡುವಂತೆ ಕೇಳುತ್ತಾನೆ. ಇದಕ್ಕೆ ಕೃತಿಕಾ ಸೊಪ್ಪು ಹಾಕಿರಲಿಲ್ಲ.
ಇಷ್ಟರಲ್ಲಾಗಲೇ ಫೈನಾನ್ಶಿಯರ್ ಸೆಲ್ವಕುಮಾರ್, ಮದುವೆಯಾಗಿ ಮೋಸ ಹೋಗಿರುವುದು ಗೊತ್ತಾಗಿದೆ. ಈ ಸಂಬಂಧ ಚಿನ್ನಾಧರಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು, ಕರೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು.
ನಂತರ ಪೊಲೀಸರು ಕೃತಿಕಾಳನ್ನು ಕರೆದು ವಿಚಾರಿಸಿದಾಗ, ನಾನು ಮೊದಲ ಪತಿಯಿಂದ ವಿಚ್ಛೇದನ ಪಡೆದಿಲ್ಲ. ತನಗೆ ಇಷ್ಟವಾದವರ ಜೊತೆ ಬದುಕುತ್ತೇನೆ ಎಂದು ಹೇಳಿದ್ದಳು. ಇದರಿಂದ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸೆಲ್ವಕುಮಾರ್ ತಮಿಳುನಾಡು ಮುಖ್ಯಮಂತ್ರಿಗಳ ವಿಶೇಷ ವಿಭಾಗ ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರಿನ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದರು.
ಇದರ ನಡುವೆ ಕೃತಿಕಾ, ಮೂರನೇ ಮದುವೆಗಾಗಿ ಸೂರ್ಯ ಎಂಬ ಯುವಕನೊಂದಿಗೆ ಸಂಪರ್ಕದಲ್ಲಿದ್ದಳು ಎಂಬ ವಿಷಯ ಬೆಳಕಿಗೆ ಬಂದಿದೆ. ಇದಾದ ನಂತರವೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸೆಲ್ವಕುಮಾರ್ ಚಿನ್ನಾಧರಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಅರವಕುರಿಚಿ ಕಾನೂನು ಮತ್ತು ಅಪರಾಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಚಿನ್ನಾಭರಣ ಮತ್ತು ಹಣ ವಂಚಿಸಿರುವ ಕೃತಿಕಾ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಕೃತಿಕಾ ಮತ್ತು ಆಕೆಯ ತಾಯಿ ಬಾಲಾಮಣಿಯನ್ನು ಬಂಧಿಸಲು ಪೊಲೀಸರಿಗೆ ಆದೇಶಿಸಿತ್ತು. ನಂತರ ಚಿನ್ನಾಧರಪುರಂ ಪೊಲೀಸರು ಬಾಲಾಮಣಿ (58) ಮತ್ತು ಕೃತಿಕಾ ಅವರನ್ನು ವಿಚಾರಣೆಗಾಗಿ ಚಿನ್ನಾಧರಪುರಂ ಠಾಣೆಗೆ ಕರೆತಂದರು. ನಂತರ ಕೃತಿಕಾಳನ್ನು ಚಿನ್ನಾಧರಪುರಂ ಪೊಲೀಸರು ಬಂಧಿಸಿ ಕೆ.ಪರಮಮ್ಮತಿ ಮಹಿಳಾ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದರು.
ಬಳಿಕ ಕೃತಿಕಾ ಅವರನ್ನು ಪಲ್ಲಪಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಅರವಕುರಿಚಿ ಕಾನೂನು ಮತ್ತು ಅಪರಾಧ ನ್ಯಾಯಾಲಯದ ನ್ಯಾಯಾಧೀಶರ ಆದೇಶದಂತೆ ಕೃತಿಕಾ ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕಾಗಿ ತಿರುಚ್ಚಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ತಾರಾಪುರಂದಲ್ಲಿ ಹಲವರನ್ನು ಮದುವೆಯಾಗಿ ನಂತರ ವಂಚಿಸಿದ ಮಹಿಳೆಯ ಬಂಧನವಾದ ಕೆಲವೇ ದಿನ ನಂತರ, ಈಗ ಕರೂರಿನಲ್ಲಿ ಇಂತಹದ್ದೆ ಪ್ರಕರಣದಲ್ಲಿ ಮತ್ತೊಬ್ಬ ಮಹಿಳೆಯ ಬಂಧನವಾಗಿದೆ.