ಹೈದರಾಬಾದ್/ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆ ಎದುರಿಸುವುದು ಕಷ್ಟ ಎಂಬುದು ಹಲವರಲ್ಲಿ ಇರುವ ಹಿಂಜರಿಕೆಯಾಗಿದೆ. ಆದರೆ, ಬುದ್ಧಿವಂತಿಕೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು. ಕೆಲ ತಂತ್ರಗಳನ್ನು ಹೊಂದಿದ್ದರೆ ಗೆಲುವು ನಿಶ್ಚಿತ ಎಂದು 2023 ರ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೂರನೇ ರ‍್ಯಾಂಕ್ ಪಡೆದಿರುವ ಅನನ್ಯಾ ರೆಡ್ಡಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಮತ್ತು ತಮ್ಮ ಅನುಭವವನ್ನು ಹಂಚಿಕೊಂಡಿರುವ ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯ ಡೋಣೂರು ಅನನ್ಯಾ ರೆಡ್ಡಿ ಅವರು, ಸಿವಿಲ್ ಸರ್ವೀಸ್ ಪರೀಕ್ಷೆಯನ್ನು ಪಾಸು ಮಾಡುವುದು ಕಷ್ಟ ಎಂಬ ಅಭಿಪ್ರಾಯವಿದೆ. ಹೌದು, ಇದು ಸವಾಲಿನ ಪರೀಕ್ಷೆಯಾಗಿದೆ. ಆದರೆ, ತಯಾರಿಗಾಗಿ ಕೆಲ ತಂತ್ರವನ್ನು ಅನುಸರಿಸುವುದು ಮುಖ್ಯ ಎಂದು ಹೇಳಿದರು.
ಓದುವ ತಂತ್ರ ಅನುಸರಿಸಿ: ಪರೀಕ್ಷೆಗಾಗಿ ನಾನು ದಿನಕ್ಕೆ 6-8 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ಪರೀಕ್ಷಾ ದಿನಾಂಕ ಹತ್ತಿರವಿದ್ದಾಗ ಓದುವ ಅವಧಿಯನ್ನು ಹೆಚ್ಚಿಸಿ ದಿನಕ್ಕೆ 12 ರಿಂದ 14 ತಾಸು ಅಭ್ಯಾಸ ಮಾಡಿದೆ. ದೇಶಕ್ಕೆ ಮೂರನೇ ಶ್ರೇಯಾಂಕ ಪಡೆದಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಓದುವಾಗ ಕಾರ್ಯತಂತ್ರವನ್ನು ಹೊಂದಿರುವುದು ಅತ್ಯಂತ ಮುಖ್ಯ. ಪಠ್ಯಕ್ರಮವನ್ನು ಭಾಗಗಳಾಗಿ ವಿಭಜಿಸುವ ಮತ್ತು ಅದನ್ನು ಸಮಯದ ಚೌಕಟ್ಟಿನಲ್ಲಿ ಪೂರ್ಣಗೊಳಿಸುವ ಪರಿಪಾಠ ಹೊಂದಿರಬೇಕು. ಅದು ಪರೀಕ್ಷೆಯಲ್ಲಿ ಸಾಕಷ್ಟು ನೆರವು ನೀಡುತ್ತದೆ. ಪರೀಕ್ಷೆ ಬರೆಯುವವರು ಇತರರನ್ನು ಅನುಸರಿಸದೆ, ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳಿಗೆ ಅನುಗುಣವಾಗಿ ಸಿದ್ಧತೆ ನಡೆಸಬೇಕು ಎಂದು ಅವರು ಪರೀಕ್ಷಾಕಾಂಕ್ಷಿಗಳಿಗೆ ಸಲಹೆ ನೀಡಿದರು.
ಜವಾಬ್ದಾರಿ ವಹಿಸಿಕೊಂಡ ಬಳಿಕ ಆಡಳಿತವನ್ನು ಜನರಿಗೆ ಇನ್ನಷ್ಟು ಹತ್ತಿರಕ್ಕೆ ಕೊಂಡೊಯ್ಯಬೇಕು ಎಂಬ ಮಹದಾಸೆ ಹೊಂದಿದ್ದೇನೆ. ಜನಕೇಂದ್ರಿತ ರೀತಿಯಲ್ಲಿ ಕೆಲಸ ಮಾಡುವುದು ನನ್ನಿಚ್ಚೆ. ತೆಲಂಗಾಣದ ಹಿಂದುಳಿದ ಜಿಲ್ಲೆಯಾದ ಮಹಬೂಬ್‌ನಗರ ಬಂದಿರುವ ನಾನು ಸರ್ಕಾರಿ ಆಡಳಿತವನ್ನು ಜನರ ಮಧ್ಯೆ ತೆಗೆದುಕೊಂಡು ಹೋಗುವುದಾಗಿ ಎಂದು ಹೇಳಿದರು.
ದೆಹಲಿ ಪೊಲೀಸ್ ಇಲಾಖೆ 7 ಮಂದಿ ಪಾಸ್: ದೆಹಲಿಯ 7 ಪೊಲೀಸರು ಅಥವಾ ಅವರ ಕುಟುಂಬಸ್ಥರು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿದ್ದಾರೆ. ಈ ಸಾಧನೆಗೆ ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸೃಷ್ಟಿ ದಾಬಾಸ್ (6ನೇ ಶ್ರೇಯಾಂಕ), ರೂಪಲ್ ರಾಣಾ (26ನೇ ರ‍್ಯಾಂಕ್), ಮನೋಜ್ ಕುಮಾರ್ (120ನೇ ರ‍್ಯಾಂಕ್), ರಿದಮ್ ಆನಂದ್ (142ನೇ ರ‍್ಯಾಂಕ್), ಬುದ್ಧಿ ಅಖಿಲ್ (321ನೇ ರ್ಯಾಂಕ್), ಉದಿತ್ ಕಡಿಯನ್ (375ನೇ ರ‍್ಯಾಂಕ್) ಮತ್ತು ನಮನ್ ಜೈನ್ (676ನೇ ರ‍್ಯಾಂಕ್) ಪಡೆದಿದ್ದಾರೆ. ಇವರಲ್ಲಿ ಕೆಲವರು ಪೊಲೀಸ್ ಸಿಬ್ಬಂದಿಯಾಗಿದ್ದರೆ, ಇನ್ನು ಕೆಲವರು ಕುಟುಂಬಸ್ಥರಾಗಿದ್ದಾರೆ.
"UPSC ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಕ್ಕಾಗಿ ದೆಹಲಿ ಪೊಲೀಸ್ ಕುಟುಂಬದವರು ಮತ್ತು ಸ್ನೇಹಿತರಿಗೆ ಅಭಿನಂದನೆಗಳು" ಎಂದು ಕಮಿಷನರ್ ಸಂಜಯ್ ಅರೋರಾ ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನು, ಮಂಗಳವಾರ ಬಿಡುಗಡೆಯಾದ 2023ರ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಆದಿತ್ಯ ಶ್ರೀವಾಸ್ತವ ಅವರು ದೇಶಕ್ಕೇ ಮೊದಲ ರ‍್ಯಾಂಕ್ ಗಳಿಸಿದ್ದಾರೆ.