ಛಿಂದ್ವಾರಾ(ಮಧ್ಯಪ್ರದೇಶ): 'ಪುಂಗನೂರಿನ ಹಸು' ವಿಶ್ವದ ಅತ್ಯಂತ ಚಿಕ್ಕ ಹಸು ಎಂಬ ಖ್ಯಾತಿ ಪಡೆದಿದೆ. ವಿಶೇಷವೆಂದರೆ, ಈ ಹಸುವನ್ನು ಮನೆಯೊಳಗೂ ಸಾಕಬಹುದು. ಎರಡೂವರೆ ಅಡಿ ಎತ್ತರವಿರುವ ಇದರ ವಿಶೇಷತೆ ಕೇವಲ ಎತ್ತರ ಕಡಿಮೆ ಎಂಬುದು ಮಾತ್ರವೇ ಅಲ್ಲ. ಇವುಗಳ ಹಾಲಿನಲ್ಲಿ ಹಲವು ಬಗೆಯ ಔಷಧೀಯ ಗುಣಗಳಿವೆ. ಹೀಗಾಗಿ 'ಚಿನ್ನದ ಹಾಲು' ನೀಡುವ ಹಸು ಎಂದೂ ಕರೆಯಲಾಗುತ್ತದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಈ ಹಸುವಿನ ಮೂಲವಾಗಿದ್ದು, ನಗರದ ಹೆಸರನ್ನೇ ಹಸುವಿಗೂ ಇಡಲಾಗಿದೆ. ಪ್ರಾಚೀನ ಇತಿಹಾಸ ಹೊಂದಿರುವ ಇವುಗಳ ಬೆಲೆ ಲಕ್ಷಗಟ್ಟಲೆ ರೂಪಾಯಿ. ಇದೀಗ ಉತ್ತರ ಮತ್ತು ಮಧ್ಯ ಭಾರತದ ಭಾಗಗಳ ಜನರೂ ಇವುಗಳನ್ನು ಖರೀದಿಸಿ ಸಾಕುತ್ತಿದ್ದಾರೆ.
ಮಧ್ಯಪ್ರದೇಶದ ಛಿಂದ್ವಾರಾ ಎಂಬಲ್ಲಿನ ಉದ್ಯಮಿ ಸಂಜೀವ್ ಖಂಡೇಲ್ವಾಲ್ ಈ ಕುರಿತು ಮಾತನಾಡಿ, ''ಆಂಧ್ರಪ್ರದೇಶದ ಕಣ್ಣೂರು ಜಿಲ್ಲೆಯಿಂದ ಜೋಡಿ ಹಸು ಮತ್ತು ಗೂಳಿಯನ್ನು 2 ಲಕ್ಷದ 80 ಸಾವಿರ ರೂಪಾಯಿಗೆ ಖರೀದಿಸಿದ್ದೇನೆ'' ಎಂದು ತಿಳಿಸಿದರು. ಮಹಾಶಿವರಾತ್ರಿಯ ದಿನ ಜೋಡಿ ಹಸು ಮತ್ತು ಗೂಳಿ ಗ್ರಾಮಕ್ಕೆ ಬಂದಿರುವ ಸುದ್ದಿ ಆ ಭಾಗದ ಜನರಿಗೆ ತಿಳಿದ ತಕ್ಷಣವೇ, ಅಂದಿನಿಂದ ಪ್ರತಿದಿನವೂ ಅವುಗಳನ್ನು ನೋಡಲು ನೂರಾರು ಮಂದಿ ಬರುತ್ತಿದ್ದಾರೆ.
ಮನೆಯಲ್ಲೇ ಸಾಕಬಹುದು: ಪ್ರಪಂಚದ ಅತ್ಯಂತ ಚಿಕ್ಕ ಹಸುವಿನ ದೊಡ್ಡ ವೈಶಿಷ್ಟ್ಯವೆಂದರೆ, ಅವುಗಳನ್ನು ಮನೆಯೊಳಗೂ ಸಾಕಬಹುದು ಎಂಬುದು. ಸಾಮಾನ್ಯವಾಗಿ, ಇತ್ತೀಚಿನ ದಿನಗಳಲ್ಲಿ ನಾಯಿಮರಿಗಳನ್ನು ಮನೆಯಲ್ಲಿ ಬೆಳೆಸುವ ಪ್ರವೃತ್ತಿ ಹೆಚ್ಚು. ಆದರೆ, ಅದರ ಅನುಕೂಲಗಳು ಕಡಿಮೆ ಮತ್ತು ಅನಾನುಕೂಲಗಳೇ ಹೆಚ್ಚಾಗಿರುತ್ತವೆ. ಆದರೆ ಪುಂಗನೂರು ಹಸುವನ್ನು ಮನೆಯಲ್ಲಿ ಸಾಕುವುದು ವಾಸ್ತು ಶಾಸ್ತ್ರದ ಪ್ರಕಾರ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ.
ಸನಾತನ ಧರ್ಮದ ಪ್ರಕಾರ, ದೇವರು ಮತ್ತು ದೇವತೆಗಳು ಗೋವಿನಲ್ಲಿ ನೆಲೆಸಿದ್ದಾರೆ. ಆದ್ದರಿಂದ ಅದನ್ನು ಮನೆಯಲ್ಲಿ ಬೆಳೆಸುವುದು ಮಂಗಳಕರವೆಂದೇ ಹೇಳಲಾಗುತ್ತಿದೆ. ಕೇವಲ ಎರಡೂವರೆ ಅಡಿ ಎತ್ತರದ ಹೊಂದಿರುವ ಈ ಹಸುಗಳು ಮನೆಯೊಳಗೆ ಎಲ್ಲಿ ಬೇಕಾದರೂ ಓಡಾಡುತ್ತವೆ, ಸುಲಭವಾಗಿ ಹೊಂದಿಕೊಳ್ಳುತ್ತವೆ.
ಪಶುವೈದ್ಯ ಡಾ.ಸುರೇಂದ್ರ ಚೌಕ್ಸೆ ಮಾತನಾಡಿ, ''ಪುಂಗನೂರು ಹಸುಗಳ ಎತ್ತರ ಕೇವಲ ಎರಡೂವರೆ ಅಡಿಗಳಷ್ಟಿದೆ. ಇದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಜಾತಿಯಾಗಿದ್ದು, ಈಗ ಉತ್ತರ ಭಾರತ ಮತ್ತು ಮಧ್ಯ ಭಾರತಕ್ಕೂ ಪರಿಚಯಿಸಲಾಗುತ್ತಿದೆ. ವಿಶೇಷವೆಂದರೆ, ಇವುಗಳ ಹಾಲು ಚಿನ್ನದಂತೆ, ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದರ ಜತೆಗೆ ಪುಂಗನೂರು ಹಸುವಿನ ಹಾಲಿನಲ್ಲಿ ಶೇ.8ರವರೆಗೆ ಕೊಬ್ಬು ಕಂಡುಬರುತ್ತದೆ. ಆದರೆ, ಸಾಮಾನ್ಯವಾಗಿ ಇತರ ಹಸುಗಳಲ್ಲಿ ಇದು ಮೂರರಿಂದ ನಾಲ್ಕು ಶೇಕಡಾ ಇರುತ್ತದೆ. ಈ ಹಸುವಿನ ಮೂತ್ರವನ್ನೂ ಸಹ ಮಾರಾಟ ಮಾಡಲಾಗುತ್ತದೆ. ಇದನ್ನು ರೈತರು ತಮ್ಮ ಹೊಲಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಕೀಟನಾಶಕವಾಗಿ ಬಳಸುತ್ತಾರೆ'' ಎಂದು ತಿಳಿಸಿದರು.
ಅಳಿವಿನಂಚಿನಲ್ಲಿರುವ ಪುಂಗನೂರು ಹಸು ತಳಿ: ಪುಂಗನೂರು ಹಸುಗಳ ತಳಿ ಅಳಿವಿನ ಅಂಚಿನಲ್ಲಿದೆ. ಅದರ ಸಂಖ್ಯೆ ಕಡಿಮೆಯಿರುವುದರಿಂದ ಬೆಲೆ ಲಕ್ಷಾಂತರ ರೂಪಾಯಿದೆ. ಋಗ್ವೇದದಲ್ಲಿಯೂ ಪುಂಗನೂರು ಹಸುವಿನ ಉಲ್ಲೇಖವಿದೆ.
ತಿರುಪತಿ ತಿಮ್ಮಪ್ಪನಿಗೆ ಪುಂಗನೂರು ಹಸುವಿನ ಹಾಲು ನೈವೇದ್ಯ: ಕಚ್ಚಿಧಾನ ಗ್ರಾಮದ ಅಂಗದ್ ಠಾಕೂರ್ ಎಂಬವರು ಮಾತನಾಡಿ, ''ಆರಂಭದಲ್ಲಿ ಕೇವಲ ಅರ್ಧ ಲೀಟರ್ ಹಾಲು ನೀಡುತ್ತಿದ್ದ ಹಸು ಈಗ ದಿನಕ್ಕೆ ಒಂದೂವರೆಯಿಂದ 2 ಲೀಟರ್ ಹಾಲು ನೀಡುತ್ತಿದೆ. ಈ ಹಸುಗಳ ಹಾಲನ್ನು ತಿರುಪತಿ ಬಾಲಾಜಿಗೆ ನೈವೇದ್ಯವಾಗಿಯೂ ಅರ್ಪಿಸಲಾಗುತ್ತದೆ. ಅಳಿವಿನಂಚಿನಲ್ಲಿರುವ ಹಸುಗಳನ್ನು ಸಂರಕ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ" ಎಂದು ತಿಳಿಸಿದರು.