ಇಂದು ವಿಶ್ವ ಫೋಟೋಗ್ರಫಿ ದಿನ. ಜಾಗತಿಕವಾಗಿ ಈ ದಿನವನ್ನು 'ವಿಶ್ವ ಫೋಟೋ ದಿನ'ವಾಗಿ ಆಚರಿಸಲಾಗುತ್ತದೆ. ಇಂದು ಜಾಗತಿನೆಲ್ಲೆಡೆ ಫೋಟೋಗ್ರಫಿ ಕುರಿತು ಚರ್ಚೆ ಮತ್ತು ಅದನ್ನು ಹವ್ಯಾಸ ಮತ್ತು ವೃತ್ತಿಯಾಗಿ ಸ್ವೀಕರಿಸುವ ಉದ್ದೇಶ ಹೊಂದಿರುವವರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಈ ಕೌಶಲ್ಯದ ಮೂಲಕ ಜಗತ್ತಿಗೆ ಸ್ಪೂರ್ತಿ ನೀಡಿದ ಅಗ್ರಮಾನ್ಯರ ಕೊಡುಗೆಯನ್ನೂ ಸ್ಮರಿಸಲಾಗುವುದು.
ಇತಿಹಾಸ: 2010ರ ಆಗಸ್ಟ್ 19ರಂದು ವಿಶ್ವ ಫೋಟೋಗ್ರಫಿ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. ಈ ದಿನದಂದು ಜಾಗತಿಕ ಆನ್ಲೈನ್ ಗ್ಯಾಲರಿಯಲ್ಲಿ ಸುಮಾರು 270 ಛಾಯಾಚಿತ್ರಗ್ರಾಹಕರು ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದರು. 100 ದೇಶಗಳು ಆನ್ಲೈನ್ ಗ್ಯಾಲರಿ ಪ್ರವೇಶ ಮಾಡಿದ್ದವು. ಹೀಗೆ ಮೊದಲ ಬಾರಿಗೆ ಅಧಿಕೃತವಾಗಿ ವಿಶ್ವ ಫೋಟೋಗ್ರಫಿ ಶುರುವಾಯಿತು. ಆಗಸ್ಟ್ 19, 1839ರಂದು ಫ್ರಾನ್ಸ್ ಸರ್ಕಾರ ಡಾಗುರೋಟೈಪ್ ಪ್ರೊಸೆಸ್ಗೆ ಪೇಟೆಂಟ್ ಖರೀದಿಸಿತು. ಇದು ಜಗತ್ತಿಗೆ ಉಚಿತ ಉಡುಗೊರೆ ಎಂದು ಫ್ರಾನ್ಸ್ ಸರ್ಕಾರ ತಿಳಿಸಿತು.
ಉದ್ದೇಶ: ಕಲೆ, ವಿಜ್ಞಾನ, ಪತ್ರಿಕೋದ್ಯಮ ಮತ್ತು ವೈಯಕ್ತಿಕ ಅಭಿವ್ಯಕ್ತಿಯ ನೆಲೆಯಲ್ಲಿ ಫೋಟೋಗ್ರಫಿ ಪ್ರಭಾವ ಬೀರುತ್ತದೆ. ಛಾಯಾಗ್ರಾಹಕರು ಮತ್ತು ಉತ್ಸಾಹಿಗಳು ಒಟ್ಟು ಸೇರಲು ಮತ್ತು ಅವರ ಉತ್ಸಾಹವನ್ನು ಹಂಚಿಕೊಳ್ಳಲು, ಕೆಲಸವನ್ನು ಪ್ರದರ್ಶಿಸಲು, ಫೋಟೋಗಳಿಗೆ ಮೆಚ್ಚುಗೆ ನೀಡಲು ಇದು ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಕೌಶಲ್ಯ ಅಥವಾ ಅನುಭವದ ಹೊರತಾಗಿ, ಛಾಯಾಚಿತ್ರಗಳನ್ನು ಹಂಚಿಕೊಳ್ಳುವುದನ್ನು ಈ ದಿನ ಉತ್ತೇಜಿಸುತ್ತದೆ.
ಧ್ಯೇಯ: ಜಾಗತಿಕವಾಗಿ ಎಲ್ಲಾ ವಿಧದ ಛಾಯಚಿತ್ರಗಳನ್ನು ಇಂದು ಆಚರಿಸಲಾಗುತ್ತದೆ. ಈ ಬಾರಿಯ ಧ್ಯೇಯ 'ಸಂಪೂರ್ಣ ದಿನ'.
ಫೋಟೋಗ್ರಫಿ ಎಂಬುದು ಬೆಳಕನ್ನು ಸೆರೆ ಹಿಡಿಯುವ ಕಲೆ. ಈ ಪ್ರಯಾಣದಲ್ಲಿ ಶತಮಾನಗಳ ಅವಿಷ್ಕಾರವಿದೆ. ಮೊದಲ ಛಾಯಾಚಿತ್ರವನ್ನು ನೈಸೆಫೋರ್ ನಿಪ್ಸೆ ಅವರು ಕಾಗದದ ತುಂಡಿನ ಮೇಲೆ ಬೆಳ್ಳಿಯ ಕ್ಲೋರೈಡ್ ಲೇಪನ ಬಳಸಿ ಸೆರೆ ಹಿಡಿದಿದ್ದರು. ಈ ಫೋಟೋ ಸಂಪೂರ್ಣವಾಗಿ ಕತ್ತಲೆಯಿಂದ ಕೂಡಿತ್ತು.
ಮೊದಲ ಬಣ್ಣದ ಛಾಯಚಿತ್ರವನ್ನು ಥಾಮಸ್ ಸುಟ್ಟೊನ್ 1861ರಲ್ಲಿ ತೆಗೆದರು. ಬ್ಲಾಕ್ ಆ್ಯಂಡ್ ವೈಟ್ ಛಾಯಚಿತ್ರವನ್ನು ಕೆಂಪು, ಹಸಿರು ಮತ್ತು ನೀಲಿ ಫಿಲ್ಟರ್ ಮೂಲಕ ಪಡೆಯಲಾಯಿತು. 1957ರಲ್ಲಿ ಮೊದಲ ಡಿಜಿಟಲ್ ಛಾಯಚಿತ್ರವನ್ನು ಹೊರಬಂತು. 20 ವರ್ಷಗಳ ಬಳಿಕ ಕೊಡಕ್ ಇಂಜಿನಿಯರ್ಗಳು ಮೊದಲ ಡಿಜಿಟಲ್ ಕ್ಯಾಮೆರಾವನ್ನು ಅವಿಷ್ಕರಿಸಿದರು. ಇದು ತಾಂತ್ರಿಕ ಪ್ರಗತಿಗಳ ಪ್ರವೇಶಕ್ಕೂ ಕಾರಣವಾಯಿತು. ಹವ್ಯಾಸಿ ಛಾಯಾಗ್ರಹಣದ ಬೆಳವಣಿಗೆಯನ್ನು ಉತ್ತೇಜಿಸಿತು. ಪ್ರತಿಯೊಬ್ಬ ಛಾಯಾಗ್ರಾಹಕನ ಪ್ರಾಥಮಿಕ ಸಾಧನವೆಂದರೆ ಕ್ಯಾಮೆರಾ. ಅವರು ಅಗತ್ಯಕ್ಕೆ ಅನುಗುಣವಾಗಿ ವಿಭಿನ್ನ ಬಳಕೆಗಳಿಗೆ ವಿಭಿನ್ನ ಕ್ಯಾಮೆರಾವನ್ನು ಬಳಸುತ್ತಾರೆ.
ಸಾಮಾನ್ಯವಾಗಿ ಬಳಸುವ ಕ್ಯಾಮೆರಾಗಳೆಂದರೆ ಸ್ಮಾರ್ಟ್‌ಫೋನ್‌ಗಳು, ಡಿಜಿಟಲ್ ಕ್ಯಾಮೆರಾಗಳು, ಡಿಎಸ್‌ಎಲ್‌ಆರ್‌ಗಳು, ಮಿರರ್‌ಲೆಸ್ ಕ್ಯಾಮೆರಾಗಳು ಮತ್ತು ಫಿಲ್ಮ್ ಕ್ಯಾಮೆರಾಗಳು.
ಛಾಯಾಚಿತ್ರದ ಪ್ರಮುಖಾಂಶಗಳು: ಫೋಟೋಗ್ರಫಿ ಎಂಬುದು ಕೇವಲ ಒಂದು ವಸ್ತುವಿನ ಮೇಲೆ ಗುರಿ ಇಟ್ಟು ಶಟರ್ ಮಾಡುವುದಲ್ಲ. ಕ್ರಿಯಾತ್ಮಕತೆ ಮತ್ತು ಚಿಂತನೆಗೆ ಅಗತ್ಯವಿರುವ ಕಲೆ. ಇದು ಕಲೆ ಮತ್ತು ವಿಜ್ಞಾನದ ಸಂಯೋಜನೆ. ನೈಜ ಜೀವನದ ಕ್ಷಣವನ್ನು ಸೆರೆ ಹಿಡಿದು, ಅಳಿಸಲಾಗದ ನೆನಪಾಗಿಸುತ್ತದೆ.
ಇದನ್ನೂ ಓದಿ: ಕ್ಯಾಮೆರಾ ಪ್ರೇಮಿಯಾದ ಗಣಿನಾಡಿನ ವೈದ್ಯ ಡಾ. ಎಸ್ ಕೆ ಅರುಣ್..