ನವದೆಹಲಿ: ಸಾಕ್ಷರತೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ವಿಶ್ವ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ. ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ವೈಯಕ್ತಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ನಮ್ಮ ಆಲೋಚನೆಗಳು ಹಾಗೂ ಭಾವನೆಗಳನ್ನು ಓದು ಹಾಗೂ ಬರವಣಿಗೆಯ ಮೂಲಕ ವ್ಯಕ್ತಪಡಿಸಲು ಸಾಕ್ಷರತೆಯು ಅತ್ಯವಶ್ಯಕ. ಓದುವ, ಬರೆಯುವ ಮತ್ತದನ್ನು ಗ್ರಹಿಸಿ, ಪರಿಣಾಮಕಾರಿಯಾಗಿ ಸಂವಹನ ನಡೆಸುವ ಸಾಮರ್ಥ್ಯವನ್ನು ಸಾಕ್ಷರತೆ ಎಂದು ಸಹ ಪರಿಗಣಿಸಲಾಗುತ್ತದೆ. ಸಾಮಾಜಿಕ ಮತ್ತು ಮಾನವನ ಅಭಿವೃದ್ಧಿಗೆ ಸಾಕ್ಷರತೆ ಒಂದು ಶಕ್ತಿ. ಸಾಕ್ಷರತೆ ಶಿಕ್ಷಣದ ಪಂಚಾಂಗ ಮಾತ್ರವಲ್ಲದೇ, ಅಭಿವೃದ್ಧಿ ಶೀಲ ರಾಷ್ಟ್ರದ ಬೆನ್ನೆಲುಬು ಕೂಡ ಹೌದು. ವಿಶ್ವ ಸಾಕ್ಷರತಾ ದಿನ ಎಂದು ಕರೆಯಲ್ಪಡುವ ಈ ವಿಶೇಷ ಸಂದರ್ಭವು ನಮ್ಮ ವೈಯಕ್ತಿಕ ಬೆಳವಣಿಗೆ ಮತ್ತು ಸಬಲೀಕರಣದ ಮೂಲಾಧಾರಗಳಾಗಿ ಓದುವ ಮತ್ತು ಬರೆಯುವ ಮಹತ್ವವನ್ನು ಎತ್ತಿ ತೋರಿಸುತ್ತದೆ. ಸಾಕ್ಷರತೆಯು ದೇಶದ, ಸಾಮಾಜಿಕ ಮತ್ತು ಆರ್ಥಿಕತೆಯ ಮುಖ್ಯ ಅಂಶಗಳಲ್ಲಿ ಒಂದಾಗಿದ್ದು, ಇದು ವ್ಯಕ್ತಿಯಯಕ್ತಿಕ ಜೀವನದ ಅಭಿವೃದ್ಧಿಗೂ ಕೂಡ ಅಗತ್ಯ.
ವಿಶ್ವ ಸಾಕ್ಷರತಾ ದಿನದ ಇತಿಹಾಸ: ಪ್ರಪಂಚದಿಂದ ಅನಕ್ಷರತೆಯನ್ನು ಸಂಪೂರ್ಣವಾಗಿ ಹೊಗಲಾಡಿಸುವ ನಿಟ್ಟಿನಲ್ಲಿ ಹಾಗೂ ಪ್ರತಿಯೊಂದು ದೇಶದ ಅಭಿವೃದ್ಧಿಗೆ ಶಿಕ್ಷಣದ ಮಹತ್ವ ಎಷ್ಟು ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ಯುನೆಸ್ಕೋ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ) ವಿಶ್ವ ಸಾಕ್ಷರತಾ ದಿನ ಆಚರಿಸಲು ನಿರ್ಧರಿಸಿತು. ಅದರಂತೆ 1996ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಯಿತು. ಜಗತ್ತಿನಲ್ಲಿರುವ ಸಾಕ್ಷರತೆಯ ಬಿಕ್ಕಟ್ಟನ್ನು ಪರಿಹರಿಸಲು, ಪ್ರತಿಯೊಬ್ಬರಿಗೂ ಸರಳ ಶಿಕ್ಷಣ ದೊರಕುವಂತೆ ಮಾಡುವುದು, ಅನಕ್ಷರತೆಯ ಪ್ರಮಾಣ ತಗ್ಗಿಸಿ ಸಾಕ್ಷರತೆ ಪ್ರಮಾಣ ಹಿಗ್ಗಿಸುವುದು ಸೇರಿದಂತೆ ಹತ್ತು ಹಲವು ಮಹತ್ವದ ಅಂಶಗಳನ್ನು ಮುಂದಿಟ್ಟುಕೊಂಡು ವಿಶ್ವ ಸಾಕ್ಷರತಾ ದಿನವನ್ನಾಗಿ ಈವರೆಗೂ ಆಚರಿಸಿಕೊಂಡು ಬರಲಾಗುತ್ತಿದೆ.
ಸುಭದ್ರ ಹಾಗೂ ಸುಸ್ಥಿರ ಭವಿಷ್ಯಕ್ಕಾಗಿ 2024ರ ವಿಶ್ವ ಸಾಕ್ಷರತಾ ದಿನವನ್ನು ಸಾಕ್ಷರತೆಯ ಮೇಲೆ ಹೆಚ್ಚು ಕೇಂದ್ರೀಕರಿಸಲಾಗುತ್ತಿದೆ. ಪ್ರತಿ ಕ್ಷಣ ಬದಲಾವಣೆಯಾಗುತ್ತಿರುವ ವ್ಯವಸ್ಥೆಯಿಂದ ಹಿಡಿದು ಆರ್ಥಿಕ ಅಸಮಾನತೆಯವರೆಗೆ ಪ್ರಪಂಚದ ಪ್ರಮುಖ ಸವಾಲುಗಳನ್ನು ಪರಿಹರಿಸಲು ಶಿಕ್ಷಣವು ಹೇಗೆ ಮುಖ್ಯ ಎಂಬುದನ್ನು ಸಹ ಎತ್ತಿ ತೋರಿಸುತ್ತದೆ.
ವ್ಯಕ್ತಿತ್ವ ರೂಪಿಸುವಲ್ಲಿ ಸಾಕ್ಷರತೆಯ ಪಾತ್ರ: ಸಾಕ್ಷರತೆ ಎನ್ನವುದು ಕೇವಲ ಓದುವ ಮತ್ತು ಬರವಣಿಗೆ ಅಷ್ಟೇ ಅಲ್ಲ, ಅದಕ್ಕಿಂತಲೂ ಮಿಗಿಲಾದದ್ದು. ಓದುವ, ಬರೆಯುವ ಮತ್ತದನ್ನು ಗ್ರಹಿಸಿ, ಪರಿಣಾಮಕಾರಿಯಾಗಿ ಸಂವಹನ ನಡೆಸುವ ಸಾಮರ್ಥ್ಯವೇ ಸಾಕ್ಷರತೆ. ಕಲಿಕೆ ಪ್ರತಿ ಮಾನವನ ಮೂಲಭೂತ ಹಕ್ಕು. ಸಾಕ್ಷರತೆ ವೈಯಕ್ತಿಕ ಸಬಲೀಕರಣಕ್ಕೆ ಅಡಿಪಾಯ ಹಾಕುತ್ತದೆ. ಮಕ್ಕಳಿಂದ ಹಿಡಿದು ಎಲ್ಲರ ಬಾಳಲ್ಲಿ ಬೆಳಕು ತರುತ್ತದೆ. ಆಧುನಿಕ ಸಮಾಜದಲ್ಲಿ ಸಾಕ್ಷರತೆ ನಿತ್ಯ ಬದುಕಿನ ಒಂದು ಸಾಧನ. ಪ್ರಜಾಪ್ರಭುತ್ವ ಸ್ಥಾಪನೆಗೆ ಒಂದು ವೇದಿಕೆ. ದೇಶದ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಗುರುತನ್ನು ಪ್ರಚುರಪಡಿಸುವ ಒಂದು ವಾಹನ. ಹಾಗಾಗಿ ಸಾಕ್ಷರತೆ ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಬಹುಮುಖ್ಯ. ಹೊಸ ಆಲೋಚನೆಗಳನ್ನು ಅನ್ವೇಷಿಸಲು, ವಿಮರ್ಶಾತ್ಮಕವಾಗಿ ಯೋಚಿಸಲು ಮತ್ತು ಪರಿಣಾಮಕಾರಿಯಾಗಿ ತಮ್ಮನ್ನು ತಾವು ವ್ಯಕ್ತಪಡಿಸಲು ಸಾಕ್ಷರತೆ ಅನುವು ಮಾಡಿಕೊಡುತ್ತದೆ. ವ್ಯಕ್ತಿಯನ್ನು ಸಮಾಜದಲ್ಲಿ ಘನತೆಯಿಂದ ಬದಕಲು ಸಹಾಯ ಮಾಡುವುದರ ಜತೆಗೆ ಸ್ವಾವಲಂಭಿಯಾಗಿ ಬದುಕಲು ಸಹಕರಿಸುತ್ತದೆ. ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಜನರನ್ನು ಬಡತನ ಮತ್ತು ನಿರುದ್ಯೋಗದಿಂದ ಹೊರಬರಲು ಸಹಾಯ ಕೂಡ ಮಾಡುತ್ತದೆ. ಒಟ್ಟಾರೆ ನಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ಇದು ಬಹಳ ಮುಖ್ಯ.
ಹೆಚ್ಚು ಸಾಕ್ಷರತಾ ಪ್ರಮಾಣ ಹೊಂದಿರುವ ದೇಶಗಳಲ್ಲಿ ಬಡತನ ಪ್ರಮಾಣ, ಜನಸಂಖ್ಯೆ ನಿಯಂತ್ರಣ, ಲಿಂಗ ತಾರತಮ್ಯ ಮತ್ತು ಅಸಮಾನತೆಯಂತಹ ಸಮಸ್ಯೆಗಳು ತೀರಾ ಕಡಿಮೆ. ಇಲ್ಲವೇ ಇಲ್ಲವೆಂದು ಹೇಳಲಾಗದು. ಉದ್ಯೋಗ, ಹೆಚ್ಚು ಹೆಚ್ಚು ಅವಕಾಶಗಳು, ಉತ್ತಮ ಆರೋಗ್ಯದ ಸೌಲಭ್ಯ ಸೇರಿದಂತೆ ವಿಪುಲವಾಗಿರುತ್ತವೆ. ಆದರೆ, ಕಡಿಮೆ ಸಾಕ್ಷರತಾ ಪ್ರಮಾಣ ಹೊಂದಿರುವ ದೇಶಗಳಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಕಂಡು ಬರುವ ವರದಿಗಳನ್ನು ಕಾಣಬಹುದು.
ಜಾಗತಿಕ ಸಾಕ್ಷರತೆ ಸವಾಲು: ಹಲವು ಪ್ರಯತ್ನಗಳ ಹೊರತಾಗಿಯೂ, ಪ್ರಪಂಚದ ಅನೇಕ ಭಾಗಗಳಲ್ಲಿ ಸಾಕ್ಷರತೆ ಪ್ರಮಾಣದ ಹೆಚ್ಚಿಸುವುದು ಒಂದು ಸವಾಲಾಗಿಯೇ ಉಳಿದಿದೆ. ಯುನೆಸ್ಕೋ ಪ್ರಕಾರ, ಪ್ರಪಂಚದಾದ್ಯಂತ ಅಂದಾಜು 773 ಮಿಲಿಯನ್ ವಯಸ್ಕರು ಮತ್ತು ಯುವಜನರು ಇನ್ನೂ ಮೂಲಭೂತ ಸಾಕ್ಷರತೆಯ ಕೌಶಲ್ಯಗಳಿಂದ ಹೊರಗಿದ್ದಾರೆ ಎಂದು ಹೇಳುತ್ತದೆ. ಅವರಲ್ಲಿ ಮೂರನೇ ಎರಡರಷ್ಟು ಮಹಿಳೆಯರು ಇದ್ದಾರೆ. ಬಡತನ, ಯುದ್ಧ ಹಾಗೂ ಸಂಘರ್ಷದಿಂದ, ಗ್ರಾಮೀಣ ಪ್ರದೇಶ ಹಾಗೂ ಅಭಿವೃದ್ಧಿಯಾಗದ ಪ್ರದೇಶಗಳಲ್ಲಿನ ಅನೇಕ ಮಕ್ಕಳು ಶಿಕ್ಷಣ ಪಡೆಯಲು ಹಾತೊರೆಯುವ ಪರಿಸ್ಥಿತಿ ಇನ್ನೂ ಜೀವಂತ ಇದೆ. ಇವು ಅನಕ್ಷರತೆಯ ಪ್ರಮಾಣ ಹೆಚ್ಚಳಕ್ಕೆ ಬಹುಮುಖ್ಯ ಕಾರಣ.
ಸಾಕ್ಷರತೆ ಪ್ರಮಾಣಕ್ಕೆ ಒತ್ತು: ಈ ಸವಾಲುಗಳನ್ನು ಎದುರಿಸಲೆಂದು ಹಾಗೂ ಶಿಕ್ಷಣದ ಶಕ್ತಿ ತೋರಿಸಲು, ಜಗತ್ತಿನಾದ್ಯಂತ ಈ ಸಾಕ್ಷರತಾ ಯೋಜನೆ ಜಾರಿಗೆ ತರಲಾಗಿದೆ. ಮೊಬೈಲ್ ಗ್ರಂಥಾಲಯಗಳು, ಸಮುದಾಯ ಓದುವ ಕೇಂದ್ರಗಳು ಮತ್ತು ಡಿಜಿಟಲ್ ಸಾಕ್ಷರತಾ ಯೋಜನೆಗಳಂತಹ ಕಾರ್ಯಕ್ರಮಗಳು ದೂರದ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಶಿಕ್ಷಣ ಮೂಡಿಸಲಾಗುತ್ತಿದೆ. ಇತ್ತೀಚೆಗೆ ಖಾಸಗಿ ಸಂಸ್ಥೆಗಳು ಮತ್ತು ಆಳುವ ಸರ್ಕಾರಗಳು ಸಾಕ್ಷರತೆಗೆ ಹೆಚ್ಚು ಒತ್ತು ನೀಡುತ್ತಾ ಬಂದಿರುವುದು ಇದಕ್ಕೊಂದು ಉದಾಹರಣೆ. ಉಚಿತ ಸಾಕ್ಷರತಾ ತರಗತಿಗಳು, ಪುಸ್ತಕ ಕೊಡುಗೆಗಳು ಮತ್ತು ಜಾಗೃತಿ ಅಭಿಯಾನದಂತಹ ಹಲವು ಯೋಜನೆಗಳ ಮೂಲಕ ಸಾಕ್ಷರತೆ ಪ್ರಮಾಣವನ್ನು ಅಧಿಕಗೊಳಿಸುತ್ತಿವೆ.
2024ರ ವಿಶ್ವ ಸಾಕ್ಷರತಾ ದಿನ: ವಿಶ್ವಾದ್ಯಂತ ಶಿಕ್ಷಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು, ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸಲು, ಜೀವನ ಮಟ್ಟ ಮತ್ತು ಕೌಶಲವನ್ನು ವೃದ್ಧಿಸಲು ವಿಶ್ವ ಸಾಕ್ಷರತಾ ದಿನ 2024 ಆಚರಿಸಲಾಗುತ್ತದೆ. ಶಾಲೆ, ಗ್ರಂಥಾಲಯ ಮತ್ತು ಸಮುದಾಯ ಕೇಂದ್ರಗಳಲ್ಲಿ ಪುಸ್ತಕ ಮೇಳ ಮತ್ತು ಕಾರ್ಯಾಗಾರಗಳನ್ನು ಆಯೋಜಿಸವ ಮೂಲಕ ಓದುವ ಸಂಸ್ಕೃತಿಯನ್ನು ಪ್ರೋತ್ಸಾಹಿಸಲಾಗುತ್ತದೆ. ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ.
ಭಾರತದಲ್ಲಿ ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಪ್ರಬಂಧ ಬರಹ ಬರೆಸುವುವುದು, ಪುಸ್ತಕಗಳನ್ನು ಓದಿಸುವುದು, ಭಾಷಣ ಸ್ಪರ್ಧೆ ಏರ್ಪಡಿಸುವುದು ಸೇರಿದಂತೆ ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಎನ್‌ಜಿಒ ಅಂತಹ ಕಂಪನಿಗಳು ಓದುವ ಸಾಮಗ್ರಿಗಳನ್ನು ಒದಗಿಸಲು ಪುಸ್ತಕ ದೇಣಿಗೆ ಡ್ರೈವ್‌ಗಳನ್ನು ನಡೆಸುತ್ತವೆ. ಪ್ರಪಂಚದಾದ್ಯಂತ, ಡಿಜಿಟಲ್ ಉಪಕರಣಗಳು ಸಾಕ್ಷರತೆ ಹೇಗೆ ಉತ್ತೇಜಿಸಬಹುದು ಎಂಬುದನ್ನು ಚರ್ಚಿಸಲು ವರ್ಚುವಲ್ ಫೋರಮ್‌ಗಳನ್ನು ನಡೆಸಲಾಗುತ್ತಿದೆ. ಶಿಕ್ಷಣ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡುವಂತೆಯೂ ಆಳುವ ಸರ್ಕಾರಗಳು ಬಂಡವಾಳ ಶಾಯಿಗಳಿಗೆ ಮನವಿ ಮಾಡಿವೆ. ಹವಾಮಾನ ಬದಲಾವಣೆ, ತಾಂತ್ರಿಕ ಪ್ರಗತಿಗಳು ಮತ್ತು ಜಾಗತಿಕ ಅಸಮಾನತೆಯಂತಹ ಸವಾಲುಗಳ ನಿವಾರಣೆಗಾಗಿ ಕೈಜೊಡಿಸುವಂತೆ ಉದ್ಯಮಿಗಳಿ ಮನವಿ ಮಾಡುತ್ತಿದ್ದಾರೆ.
ಉತ್ತಮ ಕಾಲ: ವಿಶ್ವ ಸಾಕ್ಷರತಾ ದಿನವು ಶಿಕ್ಷಣ ಮತ್ತು ಸಾಕ್ಷರತೆಯ ಪರಿವರ್ತಕ ಶಕ್ತಿಯನ್ನು ಪ್ರತಿಬಿಂಬಿಸುವ ಕ್ಷಣ. ವಯಸ್ಸು, ಲಿಂಗ ಅಥವಾ ಹಿನ್ನೆಲೆಯನ್ನು ಲೆಕ್ಕಿಸದೆ ಪ್ರತಿಯೊಬ್ಬರಿಗೂ ಅಕ್ಷರ ಕಲಿಯುವಂತೆ ಮಾಡಲು ಸರ್ಕಾರಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳ ಪ್ರಯತ್ನಗಳನ್ನು ದ್ವಿಗುಣಗೊಳಿಸಲು ಇದು ಉತ್ತಮ ಕಾಲ. ಎಲ್ಲರಿಗೂ ಸಾಕ್ಷರತೆಯನ್ನು ಖಾತ್ರಿಪಡಿಸುವ ಮೂಲಕ, ನಾವು ಅಂತರ್ಗತ, ಸಮಾನ ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸಬೇಕಿದೆ. 2024ರ ವಿಶ್ವ ಸಾಕ್ಷರತಾ ದಿನದ ನಿಮಿತ್ತ ಭವಿಷ್ಯದ ಪೀಳಿಗೆಗೆ ಸಾಕ್ಷರತೆಯ ಕುರಿತು ತಿಳಿ ಹೇಳಬೇಕಿದೆ. ಈ ಕಾರಣಕ್ಕಾಗಿ ನಾವು ನ್ಯಾಯಯುತ ಜಗತ್ತನ್ನು ರೂಪಿಸುವಲ್ಲಿ ಮುಂದುವರಿಯೋಣ.
ಇದನ್ನೂ ಓದಿ: ಕಲಿಕೆಯ ಬಗ್ಗೆ ಬೇಡ ನಿರಾಸಕ್ತಿ, ಮಕ್ಕಳಲ್ಲಿ ಬೆಳೆಸಿ ಓದಿನ ಹವ್ಯಾಸ...
.