ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗವು (ಎನ್ಸಿಡಬ್ಲ್ಯೂ) ಕೌಟುಂಬಿಕ ಕಲಹ, ಕಿರುಕುಳ, ಅತ್ಯಾಚಾರ ಪ್ರಕರಣ ಸೇರಿ ವಿವಿಧ ಘಟನೆಗಳಿಗೆ ಸಂಬಂಧಿಸಿದಂತೆ ಈ ವರ್ಷ ಇದುವರೆಗೆ ಬರೋಬ್ಬರಿ 12,600 ಮಹಿಳಾ ದೂರುಗಳನ್ನು ಸ್ವೀಕರಿಸಿದೆ ಎಂದು ತಿಳಿಸಿದೆ. ಅದರಲ್ಲಿ ಉತ್ತರ ಪ್ರದೇಶದಿಂದಲೇ ಅತೀ ಹೆಚ್ಚು ದೂರುಗಳು ದಾಖಲಾಗಿರುವುದು ಆತಂಕಕ್ಕೀಡು ಮಾಡಿದೆ.
ಈ ಸಂಬಂಧ ಅಂಕಿ ಅಂಶ ಬಿಡುಗಡೆ ಮಾಡಿರುವ ಆಯೋಗವು, ಕಿರುಕುಳ ಘಟನೆಗೆ ಸಂಬಂಧಿಸಿದಂತೆ ಒಟ್ಟು 3,107 ದೂರುಗಳು ದಾಖಲಾಗಿವೆ. ಕೌಟುಂಬಿಕ ದೌರ್ಜನ್ಯ ವಿಚಾರಕ್ಕೆ ಸಂಬಂಧಿಸಿದಂತೆ 3,544 ದೂರುಗಳು, ವರದಕ್ಷಿಣೆ ಕಿರುಕುಳ 1,957, ಕಿರುಕುಳ 817, ಮಹಿಳಾ ದೂರುಗಳ ಬಗ್ಗೆ ಪೊಲೀಸರ ನಿರಾಸಕ್ತಿ 518, ಅತ್ಯಾಚಾರ ಮತ್ತು ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದಂತೆ ಒಟ್ಟು 657, ಲೈಂಗಿಕ ಕಿರುಕುಳ 493, ಸೈಬರ್ ಅಪರಾಧ 339, ಹಿಂಬಾಲಿಸಿದ ಪ್ರಕರಣ 345, ಮರ್ಯಾದಾ ಹತ್ಯೆ 206 ಪ್ರಕರಣಗಳು ದಾಖಲಾಗಿವೆ ಎಂದು ಆಯೋಗ ತಿಳಿಸಿದೆ.
ರಾಜ್ಯವಾರು ಅಂಕಿಅಂಶಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ 6,470 ಅತೀ ಹೆಚ್ಚು ದೂರುಗಳು ದಾಖಲಾಗಿದ್ದರೇ, ದೆಹಲಿಯಲ್ಲಿ 1,113, ಮಹಾರಾಷ್ಟ್ರದಲ್ಲಿ 762, ಬಿಹಾರ 584, ಮಧ್ಯಪ್ರದೇಶ 514, ಹರಿಯಾಣ 506, ರಾಜಸ್ಥಾನ 408, ತಮಿಳುನಾಡು 301, ಪಶ್ಚಿಮ ಬಂಗಾಳ 306, ಕರ್ನಾಟಕದಿಂದ 305 ದೂರುಗಳು ದಾಖಲಾಗಿವೆ.
2023ರಲ್ಲಿ ಆಯೋಗವು ಮಹಿಳೆಯರಿಗೆ ಸಂಬಂಧಿಸಿದಂತೆ ಒಟ್ಟು 28,811 ದೂರುಗಳನ್ನು ದಾಖಲಿಸಿತ್ತು.
ಆಯೋಗದ ಪರಿಚಯ: ರಾಷ್ಟ್ರೀಯ ಮಹಿಳಾ ಆಯೋಗವು ಶಾಸನಬದ್ಧ ಸಂಸ್ಥೆಯಾಗಿದ್ದು, ಇದು ಮಹಿಳೆಯರ ಮೇಲೆ ಪರಿಣಾಮ ಬೀರುವಂತಹ ಎಲ್ಲಾ ನೀತಿ, ನಿಯಮಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುತ್ತದೆ. ಸಾಮಾನ್ಯವಾಗಿ ಇದನ್ನು ಮಹಿಳಾ ಸಮಿತಿ ಎಂದು ಕರೆಯಲಾಗುತ್ತದೆ. ಇದು ದೇಶದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳನ್ನು ಪತ್ತೆ ಹಚ್ಚುವುದು ಮತ್ತು ಸಂತ್ರಸ್ತರಿಗೆ ಅಂತಹ ಪ್ರಕರಣಗಳಲ್ಲಿ ನ್ಯಾಯವನ್ನು ಒದಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮಾರ್ಗಸೂಚಿಗಳನ್ನು ನೀಡುತ್ತದೆ.