ಆಗ್ರಾ: "ತನ್ನಿಂದ ದೂರವಾಗುವಂತೆ ಪತಿ ಹೇಳಿದರೆ ನಾನು ದೂರವಾಗುತ್ತೇನೆ. ಆದರೆ ನನಗೆ ತಂಬಾಕು ಜಗಿಯುವುದನ್ನು ಬಿಡಲು ಸಾಧ್ಯವಿಲ್ಲ" ಎಂದು ಇಲ್ಲೊಬ್ಬ ಮಹಿಳೆ ಹೇಳುತ್ತಿದ್ದಾಳೆ. ವಿಪರೀತ ತಂಬಾಕು ಜಗಿಯುತ್ತಿದ್ದ ಈ ಮಹಿಳೆಗೆ ಭಾನುವಾರ ಆಗ್ರಾದ ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಕೌನ್ಸೆಲಿಂಗ್ ನಡೆಸಲಾಯಿತು. ಈ ವೇಳೆ ಆಕೆಯ ಮಾತು ಕೇಳಿ ಪೊಲೀಸರು ಅಚ್ಚರಿಗೊಂಡರು.
ಸಂಪೂರ್ಣ ವಿವರ: ಎಂಟು ತಿಂಗಳ ಹಿಂದೆ ಫತೇಪುರ್ ಸಿಕ್ರಿಯ ಹುಡುಗಿಯನ್ನು ಯುವಕನೊಬ್ಬ ಮದುವೆಯಾಗಿದ್ದ. ಕೆಲವು ದಿನಗಳ ಬಳಿಕ ಪತ್ನಿ ತಂಬಾಕು ವ್ಯಸನಿ ಎಂಬ ವಿಷಯ ಆತನಿಗೆ ತಿಳಿಯಿತು. ಇದರಿಂದ ಅಕ್ಷರಶ: ಬೇಸತ್ತು ಹೋಗಿದ್ದ. ಸಣ್ಣಪುಟ್ಟ ಜಗಳ ಹಾಗೂ ಮನಸ್ತಾಪದ ಬಳಿಕ ಆಕೆ ತವರು ಮನೆಗೆ ತೆರಳಿದ್ದಳು. ಕಳೆದ ಎರಡು ತಿಂಗಳಿನಿಂದ ಅಲ್ಲಿಯೇ ಇದ್ದಳು. ಪತಿ ಕರೆದರೂ ಬರುತ್ತಿರಲಿಲ್ಲ. ಪತ್ನಿಯ ವರ್ತನೆಯಿಂದ ಬೇಸತ್ತ ಪತಿ, ಮಂಟೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದನು. ಪೊಲೀಸರು ಆಕೆಯನ್ನು ಕರೆದು ಬುದ್ಧಿ ಹೇಳುವ ಕೆಲಸ ಮಾಡಿದರು. ಆದರೆ, ದಂಪತಿ ನಡುವಿನ ಸಂಬಂಧ ಹಳಸಲು ಅಸಲಿ ಕಾರಣ ತಿಳಿದ ಪೊಲೀಸರಿಗೂ ಈ ಪ್ರಕರಣವನ್ನು ಬಗೆಹರಿಸುವುದು ಸವಾಲಿನ ಕೆಲಸವೇ ಆಯಿತು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಪೊಲೀಸರು ಪ್ರಕರಣವನ್ನು ಕೌಟುಂಬಿಕ ಸಲಹಾ ಕೇಂದ್ರಕ್ಕೆ ಕಳುಹಿಸಿದ್ದರು. ದಂಪತಿಯನ್ನು ಒಂದುಗೂಡಿಸುವ ಸಲುವಾಗಿ ಕೇಂದ್ರದ ಅಧಿಕಾರಿಗಳು ಕೌನ್ಸೆಲಿಂಗ್‌ಗೆ ಕರೆದಿದ್ದರು.
ಅಧಿಕಾರಿಗಳೆದುರು ಹೇಳಿಕೆ ನೀಡಿದ ಪತಿ, "ನನ್ನ ಪತ್ನಿ ಟೂತ್‌ಪೇಸ್ಟ್ ತಿಕ್ಕುವ ಹಾಗೆ ತಂಬಾಕು ತಿಕ್ಕುತ್ತಾಳೆ. ಮದುವೆಯ ಬಳಿಕ ಈ ವಿಷಯ ತಿಳಿಯಿತು. ತಂಬಾಕು ಸೇವಿಸುವುದನ್ನು ತ್ಯಜಿಸುವಂತೆ ಸಾಕಷ್ಟು ಬಾರಿ ತಿಳಿ ಹೇಳಿದೆ. ಆದರೂ, ಕೇಳುತ್ತಿಲ್ಲ. ಬೈದಿದ್ದಕ್ಕೆ ತವರು ಮನೆ ಸೇರಿಕೊಂಡಳು. ಮಾತು ಕೇಳದಿದ್ದರೆ ಆಕೆಗೆ ವಿಚ್ಛೇದನ ನೀಡುತ್ತೇನೆ" ಎಂದು ಘಟನೆಯನ್ನು ವಿವರಿಸಿದ್ದಾನೆ.
ಅಧಿಕಾರಿಗಳ ಮುಂದೆಯೂ ಆಕೆ ತಾನು ತಂಬಾಕು ಸೇವಿಸುವುದನ್ನು ಬಿಡುವುದಿಲ್ಲ ಎಂದು ಹೇಳಿದ್ದಾಳೆ." ಪತಿ ತನ್ನನ್ನು ಬಿಡಲು ಬಯಸಿದರೆ, ಬಿಡಬಹುದು. ಆದರೆ, ತಂಬಾಕು ಜಗಿಯುವುದನ್ನು ಬಿಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾಳೆ. ತಿಳುವಳಿಕೆ ಹೇಳುತ್ತಿದ್ದ ಅಧಿಕಾರಿಗಳು ಆಕೆಯ ಮಾತು ಕೇಳಿ ಅಚ್ಚರಿಗೊಂಡಿದ್ದಾರೆ. ತಂಬಾಕು ಜಗಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಕ್ಯಾನ್ಸರ್ ರೋಗದ ಅಪಾಯವಿದೆ ಎಂದು ಕೌನ್ಸೆಲಿಂಗ್ ವೇಳೆ ಮಹಿಳೆಗೆ ಬುದ್ಧಿ ಹೇಳಿದರು. ಹೀಗಿದ್ದರೂ ಪಟ್ಟು ಸಡಿಲಿಸದ ಮಹಿಳೆ ತಂಬಾಲು ಬಿಡಲಾರೆ ಎಂದು ಹೇಳಿದ್ದಾಳೆ.
"ದಂಪತಿಯಿಂದ ಎರಡೂ ಕಡೆ ದೂರುಗಳು ಕೇಳಿ ಬಂದಿವೆ. ಇಬ್ಬರ ದೂರುಗಳ ಬಗ್ಗೆ ಪರಿಶೀಲಿಸಲಾಗುವುದು. ಹೊಂದಾಣಿಕೆಗೆ ಪ್ರಯತ್ನ ಮಾಡಲಾಗುವುದು. ಕೌನ್ಸೆಲಿಂಗ್‌ನ ಮುಂದಿನ ದಿನಾಂಕದಂದು ಇಬ್ಬರನ್ನೂ ಮತ್ತೆ ಕರೆಯಲಾಗಿದೆ" ಎಂದು ಕೌಟುಂಬಿಕ ಸಲಹಾ ಕೇಂದ್ರದ ಪ್ರಭಾರಿ ಎಸ್‌ಐ ಅಪೂರ್ವ ಚೌಧರಿ ತಿಳಿಸಿದರು.
ಇದನ್ನೂ ಓದಿ: ಲಖನೌ ಕಾರಾಗೃಹದಲ್ಲಿ ಮತ್ತೆ 38 ಮಂದಿಯಲ್ಲಿ ಎಚ್ಐವಿ ದೃಢ: ಒಟ್ಟು ಸೋಂಕಿತರ ಸಂಖ್ಯೆ 66