ರಾಯ್ಬರೇಲಿ (ಉತ್ತರ ಪ್ರದೇಶ): ದೇಶದಲ್ಲಿ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್ಬರೇಲಿ ಕ್ಷೇತ್ರಗಳು ಇಡೀ ದೇಶದ ಗಮನ ಸೆಳೆದಿವೆ. ಈ ಕ್ಷೇತ್ರಗಳು ಕಾಂಗ್ರೆಸ್ ಪಕ್ಷದ ಗಾಂಧಿ ಕುಟುಂಬದ ಭದ್ರಕೋಟೆಗಳಿದ್ದು, ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೆಲ ದಿನಗಳಿಂದ ಇಲ್ಲಿಯೇ ಠಿಕಾಣಿ ಹೂಡಿದ್ದಾರೆ. ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ.
ಅಮೇಥಿ ಮತ್ತು ರಾಯ್ಬರೇಲಿ ಕ್ಷೇತ್ರಗಳನ್ನು ಗೆಲ್ಲಬೇಕೆಂದು ಕಾಂಗ್ರೆಸ್ ಜಿದ್ದಿಗೆ ಬಿದ್ದಿದೆ. ಈ ನಿಟ್ಟಿನಲ್ಲಿ ಪ್ರಿಯಾಂಕಾ ಗಾಂಧಿ ಸಾಕಷ್ಟು ಸುತ್ತಾಡಿ ಜನರನ್ನು ಸೆಳೆಯುತ್ತಿದ್ದಾರೆ. ಬೆಳಗ್ಗೆಯಿಂದಲೇ ಆರಂಭವಾಗುವ ಕಾಂಗ್ರೆಸ್ ನಾಯಕಿಯ ಚುನಾವಣಾ ಪ್ರಚಾರ ಸಭೆಗಳು ರಾತ್ರಿಯವರೆಗೂ ಮುಂದುವರಿಯುತ್ತಿವೆ. ಇದರ ನಡುವೆ ಬುಧವಾರ ರಾತ್ರಿ ಮೈಕ್ ಬಳಸದೇ, ಟಾರ್ಚ್ ಲೈಟ್ ಬೆಳಕಿನಲ್ಲೇ ಪ್ರಿಯಾಂಕಾ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.
ರಾಯ್ ಬರೇಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬುಧವಾರ ಪ್ರಿಯಾಂಕಾ ಸಂಚರಿಸಿದರು. ಬಚ್ರವಾನ್ಗೆ ತಲುಪಿದಾಗ ಭಾಷಣ ಮಾಡುವಾಗ ರಾತ್ರಿಯಾಗಿತ್ತು. ಚುನಾವಣಾ ನಿಯಮಗಳ ಪ್ರಕಾರ, ರಾತ್ರಿ 7:30ರ ನಂತರ ಮೈಕ್ ಬಳಸಿ ಪ್ರಚಾರ ನಡೆಸುವಂತಿಲ್ಲ. ಆದ್ದರಿಂದ ಕಾರಿನ ಟಾಪ್ನಲ್ಲಿ ನಿಂತು ಮೈಕ್ ಇಲ್ಲದೇ ಪ್ರಿಯಾಂಕಾ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅಲ್ಲದೇ, ಕಾಂಗ್ರೆಸ್ ನಾಯಕಿಯ ಮಾತು ಕೇಳಲು ಜನಸಮೂಹವೇ ಸೇರಿತ್ತು. ಆಗ ಬಹುಪಾಲು ಜನರು ಮೊಬೈಲ್ ಟಾರ್ಚ್ ಬೆಳಗಿಸಿ, ಪ್ರಿಯಾಂಕಾ ಭಾಷಣ ಆಲಿಸಿದ್ದಾರೆ.
ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ನೀವು (ರಾಯ್ ಬರೇಲಿ ಜನತೆ) ಯಾವಾಗಲೂ ದೇಶದ ರಾಜಕೀಯಕ್ಕೆ ದಿಕ್ಕು ತೋರಿಸಿದ್ದೀರಿ. ತಪ್ಪು ಅನ್ನಿಸಿದಾಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯಂತಹವರನ್ನು ಸೋಲಿಸಿದ್ದೀರಿ. ಇದು ನಿಮ್ಮ ಸಂಪ್ರದಾಯವಾಗಿದೆ. ನೀವು ಇಂದಿರಾ ಅವರನ್ನು ಸೋಲಿಸಿದಾಗ ಅವರು ಕೋಪಗೊಳ್ಳಲಿಲ್ಲ. ಇಂದಿನ ನಾಯಕರಂತೆ ನಿಮ್ಮ ಮೇಲೆ ಕೋಪವನ್ನು ಹೊರಹಾಕಲಿಲ್ಲ. ನಾನು ತಪ್ಪು ಮಾಡಿದ್ದರೆ ಕಲಿಯಬೇಕು ಮತ್ತು ಸುಧಾರಿಸಬೇಕು ಎಂದು ಇಂದಿರಾ ಭಾವಿಸಿದ್ದರು. ಹೀಗಾಗಿ ಮೂರು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಇಂದಿರಾ ಅವರನ್ನು ನೀವು ಮತ್ತೆ ಗೆಲ್ಲಿಸಿದ್ದೀರಿ ಎಂದು ನೆನಪಿಸಿದರು.
ಇದೇ ವೇಳೆ, ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು. ಈಗಿನ ಸರ್ಕಾರದಲ್ಲಿ ಯಾರಾದರೂ ಪ್ರಶ್ನೆ ಕೇಳಿದರೆ, ಅವರನ್ನು ಬಂಧಿಸಲಾಗುತ್ತದೆ. ಅಂತಹವರನ್ನು ಸಂಸತ್ತಿನಿಂದ ಹೊರಹಾಕಲಾಗುತ್ತದೆ. ಹೀಗಾಗಿ ಜನತೆ ಈಗಲೇ ಎಚ್ಚೆತ್ತುಕೊಳ್ಳಬೇಕು. ಸದ್ಯ ನಿಮ್ಮ ಭವಿಷ್ಯವೂ ಕತ್ತಲೆಯಲ್ಲಿದೆ. ರಾಯ್ ಬರೇಲಿಯ ಜನತೆ ಇಡೀ ದೇಶಕ್ಕೆ ಸಂದೇಶ ನೀಡಬೇಕು ಎಂದು ಅವರು ಹೇಳಿದರು. ರಾಯ್ ಬರೇಲಿ ಕ್ಷೇತ್ರದಿಂದ ಈ ಬಾರಿ ರಾಹುಲ್ ಗಾಂಧಿ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ: ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಉಮೇದುವಾರಿಕೆ ಸಲ್ಲಿಕೆ; ₹20 ಕೋಟಿ ಆಸ್ತಿ ಘೋಷಣೆ