ಮುಂಬೈ (ಮಹಾರಾಷ್ಟ್ರ): ದೇಶವನ್ನು ಇನ್ನಿಲ್ಲದಂತೆ ಕಾಡಿದ ಕೊರೊನಾ ಸಾಂಕ್ರಾಮಿಕಕ್ಕೆ ಲಸಿಕೆಗಳನ್ನು ದೇಶದಲ್ಲೇ ಉತ್ಪಾದಿಸಿ, ಪ್ರತಿಯೊಬ್ಬರಿಗೂ ಉಚಿತವಾಗಿ ಲಭ್ಯವಾಗುವಂತೆ ಪ್ರಧಾನಿ ಮೋದಿ ಅವರು ಮಾಡಿದ್ದರಿಂದ ನಾವೆಲ್ಲರೂ ಜೀವಂತವಾಗಿದ್ದೇವೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಸಾಂಕ್ರಾಮಿಕ ಹರಡಿದ ಸಮಯದಲ್ಲಿ ಶೀಘ್ರ ಎಚ್ಚೆತ್ತುಕೊಂಡು ಲಸಿಕೆಗಳು ನಮಗೆ ದೊರಕುವಂತೆ ಮಾಡಿದ್ದಲ್ಲದೇ, ಇತರ ದೇಶಗಳಿಗೂ ಅದನ್ನು ಪೂರೈಸಿದರು. ನಮ್ಮನ್ನು ಜೀವಂತವಾಗಿರಿಸಿದ ಪ್ರಧಾನಿ ಮೋದಿ ಅವರನ್ನು ನಾವು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಫಡ್ನವೀಸ್ ಕರೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರ 'ಲಸಿಕೆ ಮೈತ್ರಿ' ಕಾರ್ಯಕ್ರಮವನ್ನು ರೂಪಿಸಿ, ದೇಶದ ಜನರನ್ನು ಕಾಪಾಡುವ ಜೊತೆಗೆ ಇತರ ರಾಷ್ಟ್ರಗಳಿಗೂ ಸಹಾಯಹಸ್ತ ಚಾಚಿ ಬೇಷ್ ಎನಿಸಿಕೊಂಡಿತು. ಮೋದಿ ಅಧಿಕಾರಕ್ಕೆ ಬರುವ ಮುನ್ನ ದೇಶ ಸದೃಢ ಸ್ಥಿತಿಯಲ್ಲಿ ಇರಲಿಲ್ಲ ಎಂದರು.
ಅಡಗಿದ ಪಾಕಿಸ್ತಾನದ ಸದ್ದು: ಈ ಹಿಂದೆ ಪಾಕಿಸ್ತಾನ ಸುಲಭವಾಗಿ ಭಾರತದೊಳಕ್ಕೆ ನುಗ್ಗಿ ಭಯೋತ್ಪಾದಕ ದಾಳಿ ನಡೆಸುತ್ತಿತ್ತು. ಆಗಿನ ಪ್ರಧಾನಿಗಳು ಪಾಕಿಸ್ತಾನದ ವಿರುದ್ಧ ದೂರು ನೀಡಲು ಅಮೆರಿಕಕ್ಕೆ ಹೋದರೂ ಏನೂ ಆಗುತ್ತಿರಲಿಲ್ಲ. ಆದರೆ, ಮೋದಿ ಅಧಿಕಾರಕ್ಕೆ ಬಂದ ನಂತರ ನಮ್ಮ ಸೈನಿಕರೇ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪಾಕ್ ಸದ್ದಡಗಿಸಿದ್ದಾರೆ. ವೈಮಾನಿಕ ದಾಳಿ ನಡೆಸುವ ಮೂಲಕ ನಮ್ಮ ತಂಟೆಗೆ ಬರದಂತೆ ತಡೆದಿದ್ದಾರೆ ಎಂದು ಹೇಳಿದ್ದಾರೆ.
ಇಂದು ಭಾರತ ಅಭಿವೃದ್ಧಿ ಹೊಂದುತ್ತಿದ್ದು, ಪಾಕಿಸ್ತಾನ ದಿವಾಳಿಯತ್ತ ಸಾಗುತ್ತಿದೆ. ದೇಶ ಮತ್ತಷ್ಟು ಅಭಿವೃದ್ಧಿಯ ಪಥದತ್ತ ಸಾಗಲು ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಬೇಕು. ಎಲ್ಲವನ್ನೂ ಬದಿಗಿಟ್ಟು ಬಿಜೆಪಿಯನ್ನು ಗೆಲ್ಲಿಸಿ ಎಂದು ಅವರು ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳಿಗೆ ಮೊದಲ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಎರಡು ಹಂತಗಳ ಮತದಾನದಲ್ಲಿ 13 ಕ್ಷೇತ್ರಗಳಲ್ಲಿ ಜನರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಜೂನ್ 4 ರಂದು ಮತಗಳ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಮತದಾನ ಮುಗಿದ ಮರು ದಿನವೇ ಮೀರತ್‌ನಿಂದ ಮುಂಬೈಗೆ ಬಂದ ರಾಮಾಯಣ ನಟ; ಕಾರಣವೇನು? - Arun Govil