ವಯನಾಡ್ (ಕೇರಳ): ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತರ ಸಂಖ್ಯೆ ಕನಿಷ್ಠ 243ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ, ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯ ಮುಂದುವರೆದಿದೆ. ಚೂರಲ್ಮಲಾದಲ್ಲಿ ಭಾರತೀಯ ಸೇನೆಯು ತಾತ್ಕಾಲಿಕ ಬೈಲಿ ಸೇತುವೆ ನಿರ್ಮಿಸುವ ಕೆಲಸ ಆರಂಭಿಸಿದೆ. ಸೇನೆಯ ಎಂಜಿನಿಯರಿಂಗ್ ಘಟಕವಾದ ಮದ್ರಾಸ್ ಇಂಜಿನಿಯರ್ ಗ್ರೂಪ್ (ಎಂಇಜಿ) ಸೇತುವೆ ನಿರ್ಮಾಣ ಮಾಡುತ್ತಿದ್ದು, ಇದು ಪೂರ್ಣಗೊಳ್ಳುವತ್ತ ಸಾಗಿದೆ.
ವಯನಾಡ್‌ನಲ್ಲಿ ಸೋಮವಾರ-ಮಂಗಳವಾರದ ಮಧ್ಯರಾತ್ರಿಯಲ್ಲಿ ಎರಡು ಭಾರಿ ವಿನಾಶಕಾರಿ ಭೂಕುಸಿತಗಳು ಉಂಟಾಗಿವೆ. ನಾಲ್ಕು ಗ್ರಾಮಗಳ ಸಂಪೂರ್ಣವಾಗಿ ನೀರು ಹಾಗೂ ಮಣ್ಣು ಪಾಲಾಗಿವೆ. ನೂರಾರು ಮನೆಗಳು, ಸಂಪರ್ಕ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಇಂದು ಬೆಳಗ್ಗೆ ವೇಳೆ, ಒಟ್ಟಾರೆ ಮೃತರ ಸಂಖ್ಯೆ 243ಕ್ಕೆ ತಲುಪಿದೆ. ಇನ್ನೂ 240 ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮೃತರಲ್ಲಿ 22 ಮಕ್ಕಳು!: ಇದುವರೆಗೆ ಮೃತರಲ್ಲಿ 77 ಪುರುಷರು, 67 ಮಹಿಳೆಯರು ಮತ್ತು 22 ಮಕ್ಕಳು ಸೇರಿದಂತೆ 96 ಸಂತ್ರಸ್ತರನ್ನು ಗುರುತಿಸಲಾಗಿದೆ. 166 ದೇಹಗಳು ಮತ್ತು 49 ದೇಹದ ಭಾಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಒಟ್ಟು 75 ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಜೊತೆಗೆ 200ಕ್ಕೂ ಹೆಚ್ಚು ಜನರು ಸಹ ಗಾಯಗೊಂಡಿದ್ದಾರೆ. ವಿವಿಧ ಆಸ್ಪತ್ರೆಗಳನ್ನು ಗಾಯಾಳುಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದುವರೆಗೆ 3,000ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೂ ಸಂತ್ರಸ್ತರ ರಕ್ಷಣೆ ಮತ್ತು ಪರಿಹಾರಕ್ಕಾಗಿ ರಕ್ಷಣಾ ಕಾರ್ಯಾಚರಣೆಗಳು ತೀವ್ರಗೊಳಿಸಲಾಗುತ್ತಿದೆ. ಭೂಕುಸಿತ ಪೀಡಿತ ಚೂರಲ್ಮಲಾ ಹಾಗೂ ಮುಂಡಕ್ಕೈ ನಡುವಿನ ಸಂಪರ್ಕ ಸಂಪೂರ್ಣವಾಗಿ ಕಡಿತವಾಗಿದೆ.
ತಾತ್ಕಾಲಿಕ ಬೈಲಿ ಸೇತುವೆ: ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ತನ್ನ ಇಂಜಿನಿಯರ್ ಘಟಕದ ನೆರವಿನೊಂದಿಗೆ ತಾತ್ಕಾಲಿಕ ಬೈಲಿ ಸೇತುವೆ ನಿರ್ಮಾಣದಲ್ಲಿ ತೊಡಗಿದೆ. ಈ ಬಗ್ಗೆ ಪುಣೆಯ ದಕ್ಷಿಣ ಕಮಾಂಡ್ ಕಚೇರಿಯು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿದೆ. ಪ್ರತಿಕೂಲ ಹವಾಮಾನ, ಹೆಚ್ಚುತ್ತಿರುವ ನೀರಿನ ಮಟ್ಟಗಳು ಮತ್ತು ರಾತ್ರಿಯಿಡೀ ಕೆಲಸ ಮಾಡುವ ಸವಾಲುಗಳ ಹೊರತಾಗಿಯೂ ಮದ್ರಾಸ್ ಇಂಜಿನಿಯರ್ಸ್ ತಂಡವು ಚೂರಲ್ಮಲಾದಲ್ಲಿ ಕಠಿಣ ಪರಿಶ್ರಮ ಮತ್ತು ಪಟ್ಟುಬಿಡದೆ ಸೇತುವೆ ನಿರ್ಮಾಣ ಪೂರ್ಣಗೊಳಿಸುವತ್ತ ಸಾಗುತ್ತಿದೆ ಎಂದು ಪೋಸ್ಟ್ ಮಾಡಿದೆ.
ಅವಶೇಷಗಳಡಿ ಬದುಕುಳಿದವರ ಹುಡುಕಾಟ: ಸೇನೆ ಮತ್ತು ರಕ್ಷಣಾ ತಂಡವು ಈ ಸೇತುವೆ ನಿರ್ಮಾಣ ಪೂರ್ಣಗೊಳಿಸಿದ ನಂತರವೇ ರಕ್ಷಣಾ ವಾಹನಗಳು, ಆಹಾರ ಮತ್ತು ನೀರು ಮುಂಡಕ್ಕೈಗೆ ಸಾಗಿಸಲು ಸಾಧ್ಯವಾಗುತ್ತದೆ ಎಂದು ವರದಿಗಳು ಹೇಳುತ್ತಿವೆ. ಇದೇ ವೇಳೆ, ಹಲವಾರು ರಕ್ಷಣಾ ತಂಡಗಳು ನಿರಂತರವಾಗಿ ಸಂತ್ರಸ್ತರ ಪತ್ತೆ ಕಾರ್ಯದಲ್ಲಿ ತೊಡಗಿವೆ. ಭೀಕರ ಭೂಕುಸಿತದಲ್ಲಿ ಬದುಕುಳಿದವರು ಹಾಗೂ ಅವರ ಕುರುಹಗಳನ್ನು ಪತ್ತೆಹಚ್ಚಲು ಮನೆಗಳು ಮತ್ತು ಕಟ್ಟಡಗಳ ಅವಶೇಷಗಳ ನಡುವೆ ದಣಿವರಿಯದೇ ಹುಡುಕಾಟ ನಡೆಸಲಾಗುತ್ತಿದೆ.
ಇದನ್ನೂ ಓದಿ: ಪ್ರವಾಸಿಗರ ಸ್ವರ್ಗ ವಯನಾಡೀಗ ನರಕ ಸದೃಶ: 164 ಬಲಿ, 300 ಮನೆಗಳು ಸರ್ವನಾಶ; ಮಣ್ಣಿನಡಿ ಬದುಕುಳಿದವರಿಗೆ ಶೋಧ