ಲಖನೌ (ಉತ್ತರ ಪ್ರದೇಶ): ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕವೂ ಇದೀಗ ಉತ್ತರ ಪ್ರದೇಶದಲ್ಲಿ ಉಪಚುನಾವಣೆಯ ಗಾಳಿ ಬೀಸಿದೆ. ರಾಜ್ಯದ ಖಾಲಿಯಿರುವ 10 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆಗೆ ವೇದಿಕೆ ಸಿದ್ಧವಾಗಿದೆ. 10 ವಿಧಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಬಹುಜನ ಸಮಾಜ ಪಾರ್ಟಿ ಸಿದ್ಧತೆ ಆರಂಭಿಸಿದೆ. ಇತ್ತ ಬಿಜೆಪಿಯೂ ಲೋಕಸಭಾ ಚುನಾವಣೆಯಲ್ಲಿ ಸೋತ ಸೇಡು ತೀರಿಸಿಕೊಳ್ಳಲು ಸಂಪೂರ್ಣ ಸಜ್ಜಾಗಿದ್ದು, ಎಸ್ಪಿ ಮತ್ತು ಕಾಂಗ್ರೆಸ್ ಮೈತ್ರಿಗೆ ತೀವ್ರ ಪೈಪೋಟಿ ನೀಡಲು ತಯಾರಿ ನಡೆಸುತ್ತಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಈ ಬಾರಿ ಲೋಕಸಭಾ ಚುನಾವಣೆಯ ಜೊತೆಗೆ ಉತ್ತರ ಪ್ರದೇಶದ ನಾಲ್ಕು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆಯೂ ನಡೆದಿತ್ತು. ಈ ಎಲ್ಲ ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಎಸ್ಪಿ, ಎಲ್ಲ ಕ್ಷೇತ್ರಗಳಲ್ಲೂ ಸೋಲು ಅನುಭವಿಸಿತ್ತು. ಆದರೆ, ಇದೀಗ ಮತ್ತೆ ಧೈರ್ಯ ಕಳೆದುಕೊಳ್ಳದೇ, ಪಕ್ಷ ಇದೀಗ 10 ವಿಧಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಶೀಘ್ರದಲ್ಲೇ ಉತ್ತರ ಪ್ರದೇಶದಲ್ಲಿ ತೆರವಾಗಿರುವ 10 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ಬಿಎಸ್ಪಿ ಮೂಲಗಳ ಪ್ರಕಾರ, ಪಕ್ಷ ತನ್ನದೇ ಸ್ವಂತ ಅಭ್ಯರ್ಥಿಗಳನ್ನು ಈ ಬಾರಿ ಕಣಕ್ಕಿಳಿಸಲಿದೆ. ಆದರೆ, ಬಿಜೆಪಿಯಿಂದ ಪ್ರಸ್ತಾಪ ಬಂದಲ್ಲಿ, 2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಬಿಜೆಪಿಗೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಯಾಕೆಂದರೆ ಎಸ್ಪಿ ಹಾಗೂ ಕಾಂಗ್ರೆಸ್ನ ಮೈತ್ರಿಯಿಂದಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ದೊಡ್ಡ ಹೊಡೆತ ತಿಂದಿವೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಹಾಗೂ ಬಿಎಸ್ಪಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಉಪಚುನಾವಣೆಯಲ್ಲೂ ಭಾರೀ ಹೊಡೆತ: ಇತ್ತೀಚೆಗೆ ದೇಶಾದ್ಯಂತ ಲೋಕಸಭೆ ಚುನಾವಣೆ ಜೊತೆಗೆ ಕೆಲವು ವಿಧಾನಸಭಾ ಸ್ಥಾನಗಳು ತೆರವಾಗಿದ್ದ ರಾಜ್ಯಗಳಲ್ಲಿ ಉಪಚುನಾವಣೆಗಳು ನಡೆದಿವೆ. ಉತ್ತರ ಪ್ರದೇಶದಲ್ಲಿ 4 ಸ್ಥಾನಗಳಿಗೆ ಉಪಚುನಾವಣೆ ನಡೆದಿದೆ. ಎಲ್ಲಾ ರಾಜಕೀಯ ಪಕ್ಷಗಳು ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದವು. ಆದರೆ ಬಹುಜನ ಸಮಾಜ ಪಕ್ಷ 2024ರಲ್ಲಿ ಮೊದಲ ಬಾರಿಗೆ ಉಪಚುನಾವಣೆಯಲ್ಲಿ ಭಾಗವಹಿಸಿದೆ. ನಾಲ್ಕು ಸ್ಥಾನಗಳಿಗೆ ಯಾವುದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಸ್ವಂತ ಬಲದಿಂದಲೇ ಉಪಚುನಾವಣೆಯಲ್ಲಿ ಸ್ಪರ್ಧಿಸಿತ್ತು.
ಸೋನಭದ್ರದ ದುದ್ಧಿ, ಷಹಜಹಾನ್ಪುರದ ದಾದ್ರೌಲ್, ಬಲರಾಮ್ಪುರದ ಗಸ್ದಿ ಮತ್ತು ಲಖನೌನ ಪೂರ್ವ ಅಸೆಂಬ್ಲಿ ಸೇರಿ 4 ಸ್ಥಾನಗಳ ಬಿಎಸ್ಪಿ ಅಭ್ಯರ್ಥಿಗಳು ಉಪಚುನಾಚಣೆಯಲ್ಲಿ ಹೀನಾಯ ಸೋಲನಭವಿಸಿದ್ದರು. ದಾದ್ರೌಲ್ ಕ್ಷೇತ್ರದ ಪಕ್ಷದ ಅಭ್ಯರ್ಥಿ ಮಾತ್ರ ಕೊಂಚ ಉತ್ತಮ ಪ್ರದರ್ಶನ ನೀಡಿದ್ದರು. ಆದರೂ ಇದೀಗ ಮತ್ತೆ 10 ಸ್ಥಾನಗಳಿಗೆ ನಡೆಯುವ ಉಪಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಣಕ್ಕಿಳಿಸಲಿದ್ದಾರೆ ಎನ್ನುತ್ತವೆ ಪಕ್ಷದ ಮೂಲಗಳು.
ಲೋಕಸಭಾ ಚುನಾವಣೆಯಲ್ಲಿ ಶೂನ್ಯ ಖಾತೆ: ಉತ್ತರ ಪ್ರದೇಶದ 79 ಲೋಕಸಭಾ ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಬಿಎಸ್ಪಿ, ಇಲ್ಲೂ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಬಿಎಸ್ಪಿಯ ಯಾವ ಅಭ್ಯರ್ಥಿಯೂ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿಲ್ಲ.
ಉಪಚುನಾವಣೆ ನಡೆಯಲಿರುವ 10 ಕ್ಷೇತ್ರಗಳು: ಭಾರತೀಯ ಜನತಾ ಪಕ್ಷ ಹಾಗೂ ಸಮಾಜವಾದಿ ಪಕ್ಷದ ಅನೇಕ ಶಾಸಕರು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದಾರೆ. ಹಾಗಾಗಿ ಆಸ್ಥಾನಗಳು ಈಗ ತೆರವಾಗಿವೆ. ಉಪಚುನಾವಣೆ ನಡೆಯಲಿರುವ ಆ ಹತ್ತು ಕ್ಷೇತ್ರಗಳೆಂದರೆ, ಮೈನ್ಪುರಿಯ ಕರ್ಹಾಲ್, ಅಯೋಧ್ಯೆ ಮಿಲ್ಕಿಪುರ, ಮೊರಾದಾಬಾದ್ನ ಕುಂದರ್ಕಿ, ಗಾಜಿಯಾಬಾದ್ನ ಸದರ್, ಮಿರ್ಜಾಪುರ ಜಿಲ್ಲೆಯ ಮಜ್ವಾಲ್, ಅಂಬೇಡ್ಕರ್ ನಗರದ ಕತೇಹಾರಿ, ಪ್ರಯಾಗ್ರಾಜ್ನ ಫುಲ್ಪುರ, ಮುಜಾಫರ್ನಗರದ ಮೀರಾಪುರ, ಅಲಿಗಢದ ಖೇರ್ ಕ್ಷೇತ್ರ, ಕಾನ್ಪುರದ ಸಿಸಮೌ.
ಮೈನ್ಪುರಿಯ ಕರ್ಹಾಲ್ನಲ್ಲಿ ಶಾಸಕರಾಗಿದ್ದ ಅಖಿಲೇಶ್ ಯಾದವ್, ಮಿಲ್ಕಿಪುರದಲ್ಲಿ ಶಾಸಕರಾಗಿದ್ದ ಅವಧೇಶ್ ಪ್ರಸಾದ್, ಕತೇಹಾರಿಯಲ್ಲಿ ಶಾಸಕರಾಗಿದ್ದ ಲಾಲ್ಜಿ ವರ್ಮಾ, ಮೀರಾಪುರದಲ್ಲಿ ಶಾಸಕರಾಗಿದ್ದ ಚಂದನ್ ಚೌಹಾಣ್ ಸೇರಿದಂತೆ 9 ಶಾಸಕರು ಸಂಸದರಾಗಿದ್ದಾರೆ. ಇದಲ್ಲದೇ ಸಿಸಾಮೌ ವಿಧಾನಸಭಾ ಕ್ಷೇತ್ರ ಎಸ್ಪಿ ಶಾಸಕ ಇರ್ಫಾನ್ ಸೋಲಂಕಿ ಇತ್ತೀಚೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಅವರ ಸದಸ್ಯತ್ವ ಕೊನೆಗೊಳ್ಳಲಿದೆ.
ಬಿಎಸ್ಪಿಯ ಒಬ್ಬರೇ ಶಾಸಕ: ಉಪಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳ ಪೈಕಿ ಸದ್ಯ ಬಹುಜನ ಸಮಾಜ ಪಕ್ಷದ ಖಾತೆಯಲ್ಲಿ ಒಂದೇ ಒಂದು ಸ್ಥಾನವೂ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧಿಸಿ ಕೇವಲ ಒಬ್ಬ ಶಾಸಕರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿತ್ತು. ಉಮಾಶಂಕರ್ ಸಿಂಗ್, ರಾಸ್ರಾ ವಿಧಾನಸಭಾ ಕ್ಷೇತ್ರದಿಂದ ಬಿಎಸ್ಪಿಯ ಏಕೈಕ ಶಾಸಕರಾಗಿದ್ದಾರೆ.
ಬಿಜೆಪಿ ಜೊತೆ ಮೈತ್ರಿಯಿಂದಷ್ಟೆ ಬಿಎಸ್‌ಪಿಗೆ ಲಾಭ: ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಒಟ್ಟಾಗಿದ್ದಾಗ ಬಹುಜನ ಸಮಾಜ ಪಕ್ಷವು ಬಿಜೆಪಿಯೊಂದಿಗೆ ಏಕೆ ಮೈತ್ರಿ ಮಾಡಿಕೊಳ್ಳಬಾರದು ಎಂದು ಬಹುಜನ ಸಮಾಜ ಪಕ್ಷದ ಕಾರ್ಯಕರ್ತರಲ್ಲಿ ಆಂತರಿಕ ಚರ್ಚೆ ಪ್ರಾರಂಭವಾಗಿದೆ. ಹೀಗೆ ಮಾಡಿದ್ದಲ್ಲಿ ಬಿಎಸ್‌ಪಿ ಹೆಚ್ಚಿನ ಲಾಭ ಪಡೆಯುವ ನಿರೀಕ್ಷೆ ಇದೆ. ಈ ಬಗ್ಗೆ ಕೆಲವು ಅಧಿಕಾರಿಗಳು ಮಾಯಾವತಿ ಅವರಿಗೆ ಸಲಹೆಯನ್ನೂ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಆದರೆ, ಬಿಎಸ್‌ಪಿ ವರಿಷ್ಠರು ಇದನ್ನು ಎಷ್ಟರಮಟ್ಟಿಗೆ ಜಾರಿಗೊಳಿಸುತ್ತಾರೆ ಎಂಬುದನ್ನು 2027ರ ವಿಧಾನಸಭಾ ಚುನಾವಣೆ ಹೇಳಲಿದೆ.
ಬಿಎಸ್‌ಪಿ- ಬಿಜೆಪಿ ಮೈತ್ರಿ: ಮಾಯಾವತಿ ಬಿಜೆಪಿಯೊಂದಿಗೆ ಮೂರು ಬಾರಿ, ಎಸ್‌ಪಿಯೊಂದಿಗೆ ಎರಡು ಬಾರಿ ಮತ್ತು ಒಮ್ಮೆ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. 1992 ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ, ಬಿಎಸ್ಪಿ ಸಮಾಜವಾದಿ ಪಕ್ಷದೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡಿತ್ತು. 1993 ರಲ್ಲಿ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ಬರದಂತೆ ನಿಲ್ಲಿಸುವಷ್ಟು ಈ ಮೈತ್ರಿ ಪ್ರಬಲವಾಗಿತ್ತು. ನಂತರ ಬಿಎಸ್‌ಪಿ 1995, 1997 ಮತ್ತು 2002ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು.
1995ರಲ್ಲಿ ಮೊದಲ ಬಾರಿಗೆ ಯುಪಿ ಸಿಎಂ ಆದ ಮಾಯಾವತಿ: 1995 ರಲ್ಲಿ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಅವರಿಗೆ ಹೊರಗಿನ ಬೆಂಬಲ ನೀಡಿ ಬಿಜೆಪಿ ಸರ್ಕಾರ ರಚಿಸಿತ್ತು. ಆದರೆ ಸರ್ಕಾರ ಹೆಚ್ಚು ಕಾಲ ಮುಂದುವರಿಯಲು ಸಾಧ್ಯವಾಗಿರಲಿಲ್ಲ ಮತ್ತು 1996 ರಲ್ಲಿ ಮತ್ತೆ ಚುನಾವಣೆ ನಡೆಯಿತು. 1997ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಎರಡನೇ ಬಾರಿಗೆ ಮಾಯಾವತಿ ಸಿಎಂ ಆದರು. ನಂತರ ಮಾಯಾವತಿ ಮತ್ತು ಕಲ್ಯಾಣ್ ಸಿಂಗ್ ತಲಾ 6 ತಿಂಗಳ ಕಾಲ ಸಿಎಂ ಆಗಿರಲು ನಿರ್ಧರಿಸಲಾಗಿತ್ತು.
ಬಿಜೆಪಿಗೆ ದ್ರೋಹ ಬಗೆದ ಮಾಯಾವತಿ: ಮಾಯಾವತಿ 6 ತಿಂಗಳು ಸಿಎಂ ಆಗಿ, ಕಲ್ಯಾಣ್ ಸಿಂಗ್ ಸಿಎಂ ಆದ ತಕ್ಷಣ ಮೈತ್ರಿ ಮುರಿದುಕೊಂಡರು. ಐದು ವರ್ಷಗಳ ನಂತರ, 2002ರಲ್ಲಿ ಮಾಯಾವತಿ ಮತ್ತೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರು. ನಂತರ ಬಿಜೆಪಿ ಮತ್ತು ಬಿಎಸ್ಪಿ ಒಟ್ಟಾಗಿ ಸರ್ಕಾರ ರಚಿಸಿದವು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮಾಯಾವತಿ ಮೂರನೇ ಬಾರಿಗೆ ಸಿಎಂ ಆದರು. 2007ರಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾದಾಗ, ಬಿಎಸ್‌ಪಿ ಪೂರ್ಣ ಬಹುಮತ ಪಡೆದು ಮೊದಲ ಬಾರಿಗೆ ಸ್ವಂತ ಬಲದಿಂದ ಸಿಎಂ ಆದರು. ಮೊದಲ ಬಾರಿಗೆ ಅವರು ಪೂರ್ಣ ಐದು ವರ್ಷಗಳ ಕಾಲ ಸರ್ಕಾರವನ್ನು ನಡೆಸಿದರು.
ಇದನ್ನೂ ಓದಿ: ನಳಂದಾ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ಮೋದಿ - Nalanda University New Campus