ಚೆನ್ನೈ (ತಮಿಳುನಾಡು): ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ ಹಾಗೂ ಯುವಜನ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಜೊತೆಗೆ ಮೂವರು ಸಚಿವರು ಕೂಡ ಪ್ರತಿಜ್ಞಾವಿಧಿ ಪಡೆದರು.
ರಾಜಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರ್.ಎನ್.ರವಿ ಅವರು ಉದಯನಿಧಿ ಅವರಿಗೆ ಉಪ ಮುಖ್ಯಮಂತ್ರಿಯಾಗಿ, ಸೆಂಥಿಲ್ ಬಾಲಾಜಿ, ಡಾ.ಗೋವಿ ಚೆಲಿಯನ್, ಆರ್.ರಾಜೇಂದ್ರನ್ ಮತ್ತು ಎಸ್.ಎಂ.ನಾಜರ್ ಅವರಿಗೆ ಸಚಿವರಾಗಿ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಡಿಎಂಕೆ ಪಕ್ಷದ ಮುಖಂಡರು ಮತ್ತು ಮಿತ್ರಪಕ್ಷದ ಮುಖಂಡರು ಭಾಗವಹಿಸಿದ್ದರು.
#WATCH | Chennai: Tamil Nadu Governor RN Ravi, CM MK Stalin and Deputy CM Udhayanidhi Stalin along with the State ministers at Raj Bhavan after the swearing-in ceremony of newly-inducted ministers.
— ANI (@ANI) September 29, 2024
(Source: ANI/ TN DIPR) pic.twitter.com/s63dXvG07G
ಇದಕ್ಕೂ ಮುನ್ನ ಮಾಜಿ ಸಿಎಂ ದಿವಂಗತ ನಾಯಕ ಎಂ.ಕರುಣಾನಿಧಿ ಅವರ ಸ್ಮಾರಕಕ್ಕೆ ತೆರಳಿದ ಉದಯನಿಧಿ ಸ್ಟಾಲಿನ್ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಹಾಗೂ ಸಚಿವರು ತಮಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳಲು ಶ್ರಮಿಸುವೆ ಎಂದರು.
ತಮ್ಮ ವಿರುದ್ಧದ ಟೀಕೆಗಳ ಕುರಿತು ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಟೀಕೆಗಳು ಇದ್ದೇ ಇರುತ್ತವೆ. ಆದರೆ, ಅವೆಲ್ಲವನ್ನೂ ಮೆಟ್ಟಿನಿಂತು ಕೈಲಾದಷ್ಟು ಜನರಿಗೆ ಒಳ್ಳೆಯದನ್ನು ಮಾಡುತ್ತೇನೆ. ಟೀಕೆಗಳಿಗೆ ನನ್ನ ಕೆಲಸದಿಂದಲೇ ಉತ್ತರ ನೀಡುವೆ ಎಂದರು.
ಗಣ್ಯರಿಂದ ಶುಭಾಶಯ: ಉದಯನಿಧಿ ಸ್ಟಾಲಿನ್ ಅವರು ಡಿಸಿಎಂ ಆಗಿ ಪದಗ್ರಹಣ ಮಾಡಿದ್ದಕ್ಕೆ ಯುವ ನಾಯಕನಿಗೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ. ಖ್ಯಾತ ನಟ ಮತ್ತು ಮಕ್ಕಳ್ ನೀಧಿ ಮೈಯಂ (ಎಂಎನ್ಎಂ) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್, ನಟ ಧನುಷ್ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದರು.
ತಮಿಳುನಾಡಿನ ಅಭಿವೃದ್ಧಿಗಾಗಿ ಉದಯನಿಧಿ ಸ್ಟಾಲಿನ್ ಅವರು ತಮ್ಮ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಲಿದ್ದಾರೆ ಎಂದು ಡಿಎಂಕೆ ಮಿತ್ರಪಕ್ಷ ವಿಸಿಕೆ ಪಕ್ಷದ ನಾಯಕ ತಿರುಮಾವಲವನ್ ಹೇಳಿದರು. ಮತ್ತೊಂದೆಡೆ, ಇದು ಸ್ವಾಭಿಮಾನದ ಸಂಕೇತ ಎಂದು ದ್ರಾವಿಡರ್ ಕಳಗಂ ಪಕ್ಷದ ಅಧ್ಯಕ್ಷ ಕೆ.ವೀರಮಣಿ ಬಣ್ಣಿಸಿದರು.
ಸಿಎಂ ಸ್ಟಾಲಿನ್ ಮಾಡಿರುವ ಸಂಪುಟ ಪುನಾರಚನೆ ಪ್ರಸ್ತಾವನೆಗಳಿಗೆ ರಾಜ್ಯಪಾಲ ಆರ್.ಎನ್.ರವಿ ಶನಿವಾರ ಅನುಮೋದನೆ ನೀಡಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿರುವ ಮಾಜಿ ಸಚಿವ ಸೆಂಥಿಲ್ ಬಾಲಾಜಿ ಮತ್ತೆ ಸಂಪುಟ ಸೇರ್ಪಡೆಗೊಂಡಿದ್ದಾರೆ. ಅದೇ ರೀತಿ ಡಾ. ಗೋವಿ ಚೆಲಿಯನ್, ಆರ್.ರಾಜೇಂದ್ರನ್ ಮತ್ತು ಎಸ್.ಎಂ. ನಾಸರ್ ಕೂಡ ಸಂಪುಟಕ್ಕೆ ಸೇರ್ಪಡೆಗೊಂಡರು. ಮನೋ ತಂಗರಾಜ್ ಸೇರಿದಂತೆ ಮೂವರು ಸಚಿವರನ್ನು ಸಂಪುಟದಿಂದ ಕೈಬಿಡಲಾಗಿದೆ.
ಇದನ್ನೂ ಓದಿ: ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿ ಉದಯನಿಧಿ ಸ್ಟಾಲಿನ್ ನಾಳೆ ಪ್ರಮಾಣ ವಚನ ಸ್ವೀಕಾರ - Udhayanidhi Stalin