ಸಂಭಾಲ್: ಉತ್ತರ ಪ್ರದೇಶದ ಸಂಭಾಲ್ದಲ್ಲಿನ ಮಸೀದಿ ಸರ್ವೇ ಮಾಡುತ್ತಿರುವುದನ್ನು ವಿರೋಧಿಸಿ ಪ್ರತಿಭಟಿಸುವ ವೇಳೆ ಹಿಂಸಾಚಾರ ಉಂಟಾಗಿ ಮೂವರು ಸಾವನ್ನಪ್ಪಿ, ಹಲವು ಪೊಲೀಸರು ಗಾಯಗೊಂಡ ಘಟನೆ ಇಂದು ನಡೆದಿದೆ. ಈ ಸಂಬಂಧ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೊರದಾಬಾದ್ ವಿಭಾಗೀಯ ಆಯುಕ್ತ ಆಂಜನೇಯ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಇಂದು ಮಸೀದಿಯ ಸರ್ವೇ ಕಾರ್ಯ ಮುಗಿಯುತ್ತಿದ್ದಂತೆ ವಿವಿಧೆಡೆಯಿಂದ ಸ್ಥಳೀಯ ಮೂರು ತಂಡಗಳು ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದವು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದಂತೆ ನಿಯಂತ್ರಿಸಲು ಪೊಲೀಸರು ಆಶ್ರವಾಯು ಮತ್ತು ಪ್ಲಾಸ್ಟಿಕ್ ಬುಲೆಟ್ ಸಿಡಿಸಿದರು. ಬಳಿಕ ಇನ್ನೊಂದು ಗ್ರೂಪ್ ವಾಹನಗಳಿಗೆ ಬೆಂಕಿ ಹಚ್ಚಲು ಆರಂಭಿಸಿತು ಜೊತೆಗೆ ಗುಂಡಿನ ದಾಳಿ ಮಾಡಿತು. ಇದರಿಂದ ಪೊಲೀಸ್ ಪಿಆರ್ಒ ಕಾಲಿಗೆ ಗುಂಡು ತಗುಲಿದೆ. ಡೆಪ್ಯೂಟಿ ಕಲೆಕ್ಟರ್ ಸಹ ಗಾಯಗೊಂಡಿದ್ದಾರೆ. 15 ಪೊಲೀಸರು ಗಾಯಗೊಂಡಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಾವು ಸ್ಥಳೀಯ ಮುಖಂಡರ ಜೊತೆ ಮಾತುಕತೆ ನಡೆಸಿದ್ದೇವೆ ಎಂದು ಆಯುಕ್ತ ಸಿಂಗ್ ತಿಳಿಸಿದ್ದಾರೆ. ಮೃತರನ್ನು ನಯೀಮ್, ಬಿಲಾಲ್ ಮತ್ತು ನೌಮನ್ ಎಂದು ಗುರುತಿಸಲಾಗಿದೆ.
ಪೊಲೀಸರನ್ನು ಗುರಿಯಾಗಿಸಿಕೊಂಡು ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಹಲವು ಪೊಲೀಸರು ಗಾಯಗೊಂಡಿದ್ದಾರೆ. ನನಗೂ ಕೂಡ ಕಾಲಿಗೆ ಗಾಯವಾಗಿದೆ. ಅಲ್ಲಿದ್ದ ದ್ವಿಚಕ್ರ ವಾಹನಗಳಿಗೆ ಪ್ರತಿಭಟನಾಕಾರರು ಯಾವುದೇ ಹಾನಿ ಮಾಡಿಲ್ಲ. ಆದರೆ ಪೊಲೀಸ್ ವಾಹನ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ. ಘಟನೆಗೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ, ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್ಪಿ ಕೃಷ್ಣಕುಮಾರ್ ತಿಳಿಸಿದ್ದಾರೆ.
#WATCH | Sambhal, Uttar Pradesh: On the stone pelting incident in Sambhal, Moradabad Divisional Commissioner Aunjaneya Kumar Singh says, " ... after the survey was completed, the stone pelting started by three groups from three directions... the police used tear gas and plastic… pic.twitter.com/N6febwSl8S
— ANI (@ANI) November 24, 2024
ದಾಳಿ ಮಾಡಿದವರೆಲ್ಲರನ್ನೂ ಗುರುತಿಸಿ, ಎನ್ಎಸ್ಎ ಅಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಸದ್ಯಕ್ಕೆ 12 ಜನರನ್ನು ಬಂಧಿಸಿದ್ದೇವೆ. ಸ್ಥಳದಲ್ಲೀಗ ಪರಿಸ್ಥಿತಿ ತಿಳಿಯಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಕೋರ್ಟ್ ಆದೇಶದ ಮೇರೆಗೆ ಸಂಭಾಲ್ದಲ್ಲಿ ಮಸೀದಿಯ ಸರ್ವೇ ಮಾಡಲಾಗುತ್ತಿತ್ತು. ಈ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ತೆರಳಿದ್ದು, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹಿಂಸಾಚಾರಕ್ಕೆ ಕಾರಣವಾದ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕಾನೂನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಉತ್ತರ ಪ್ರದೇಶ ಡಿಜಿಪಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಮೊಘಲ್ ಕಾಲದ ಇಲ್ಲಿನ ಮಸೀದಿ ಇದ್ದ ಜಾಗದಲ್ಲಿ ಹಿಂದೂ ದೇವಾಲವಿತ್ತು. ದೇವಾಲಯ ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಅರ್ಜಿದಾರರೊಬ್ಬರು ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಮಸೀದಿ ಸರ್ವೇಗೆ ನ.19ರಂದು ಆದೇಶಿಸಿತ್ತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸರ್ವೇಗೆ ತೆರಳಿದ್ದ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದರಿಂದ ಹಿಂಸಾಚಾರ ಉಂಟಾಗಿದೆ.
ಇದನ್ನೂ ಓದಿ: ಕೋಟಾದಲ್ಲಿ ಜೆಇಇಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ: ಇದು ವರ್ಷದ 16ನೇ ಪ್ರಕರಣ!