ತಿರುವನಂತಪುರಂ: ಗ್ರೌಂಡ್ ಹ್ಯಾಂಡ್ಲಿಂಗ್ ಏಜೆನ್ಸಿಯ (ಜಿಎಚ್ಎ) ಉದ್ಯೋಗಿಗಳ ಗುಂಪು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರಿಂದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವಾರು ಹೊರಹೋಗುವ ಮತ್ತು ಒಳಬರುವ ಅಂತರರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
ಶನಿವಾರ ರಾತ್ರಿ 10 ಗಂಟೆಗೆ ಪ್ರಾರಂಭವಾದ ಮುಷ್ಕರದಿಂದಾಗಿ ಹಲವಾರು ವಿಮಾನಗಳ ಸಂಚಾರ ವಿಳಂಬಗೊಂಡಿದೆ. ಆದಾಗ್ಯೂ, ಮುಷ್ಕರದಿಂದಾಗಿ ಯಾವುದೇ ವಿಮಾನಗಳನ್ನು ರದ್ದುಗೊಳಿಸಲಾಗಿಲ್ಲ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಮಾಹಿತಿ ನೀಡಿದೆ. ಪ್ರತಿಭಟನಾಕಾರರು ಏರ್ ಇಂಡಿಯಾ ಸ್ಯಾಟ್ಸ್ ಏರ್ ಪೋರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ನ ಉದ್ಯೋಗಿಗಳಾಗಿದ್ದಾರೆ. ಐಎನ್ ಟಿಯುಸಿ, ಬಿಎಂಎಸ್ ಮತ್ತು ಸಿಐಟಿಯು ನೇತೃತ್ವದ ಕಾರ್ಮಿಕ ಸಂಘಟನೆಗಳು ಈ ಮುಷ್ಕರಕ್ಕೆ ಕೈಜೋಡಿಸಿವೆ. ವೇತನ ಪರಿಷ್ಕರಣೆ ಮತ್ತು ಬೋನಸ್ ಭತ್ಯೆಗಳಿಗೆ ಒತ್ತಾಯಿಸಿ ಈ ಒಕ್ಕೂಟಗಳು ಜಂಟಿಯಾಗಿ ಮುಷ್ಕರ ನಡೆಸುತ್ತಿವೆ.
ಮುಷ್ಕರದಿಂದಾಗಿ ಆರಂಭಿಕ ಹಂತದಲ್ಲಿ ಬೆಂಗಳೂರು-ತಿರುವನಂತಪುರಂ ವಿಸ್ತಾರಾ ವಿಮಾನದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಮುಂಜಾನೆ 4.40 ಕ್ಕೆ ಟೇಕ್ ಆಫ್ ಆಗಬೇಕಿದ್ದ ತಿರುವನಂತಪುರಂ-ದುಬೈ ಎಮಿರೇಟ್ಸ್ ವಿಮಾನವು ಬೆಳಗ್ಗೆ 7.05 ಕ್ಕೆ ಹೊರಟಿತು.
ಮುಷ್ಕರದಿಂದಾಗಿ ಸರಕು ಸಾಗಣೆಯ ಮೇಲೆ ಕೂಡ ಪರಿಣಾಮ ಬೀರಿದೆ. ತಿರುವನಂತಪುರಂ ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಮುಷ್ಕರದಿಂದಾಗಿ ಬೇಗ ಹಾಳಾಗುವಂಥ ಸುಮಾರು 20 ಟನ್ ಸರಕು ವಿಮಾನ ನಿಲ್ದಾಣದಲ್ಲಿಯೇ ಉಳಿಯುವಂತಾಗಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ಮೂಲಕ ಮಸ್ಕತ್, ಅಬುಧಾಬಿ, ಶಾರ್ಜಾ ಮಾರ್ಗದಲ್ಲಿ ಮತ್ತು ಏರ್ ಅರೇಬಿಯಾ, ಕತಾರ್ ಏರ್ ವೇಸ್ ಮತ್ತು ಕುವೈತ್ ಏರ್ ವೇಸ್ ಸೇರಿದಂತೆ ಹಲವಾರು ವಿಮಾನಯಾನ ಸಂಸ್ಥೆಗಳ ಸರಕು ಕಾರ್ಯಾಚರಣೆಯ ಮೇಲೆ ಮುಷ್ಕರವು ಅಡಚಣೆ ಉಂಟು ಮಾಡಿದೆ.
ಪರಿಸ್ಥಿತಿಯನ್ನು ನಿಭಾಯಿಸಲು ತನ್ನ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಕಾರ್ಮಿಕರನ್ನು ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿದೆ ಎಂದು ಏರ್ ಇಂಡಿಯಾ ಸ್ಯಾಟ್ಸ್ ಸಂಸ್ಥೆ ಐಎಎನ್ಎಸ್ಗೆ ತಿಳಿಸಿದೆ.
ಕೊಚ್ಚಿಯ ನೆಡುಂಬಸ್ಸೆರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಕೇರಳದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. 2023-24ರ ಆರ್ಥಿಕ ವರ್ಷದಲ್ಲಿ ಈ ವಿಮಾನ ನಿಲ್ದಾಣವು 4.4 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಿದೆ ಮತ್ತು ಒಟ್ಟು 30,000 ಕ್ಕೂ ಹೆಚ್ಚು ವಿಮಾನ ಹಾರಾಟಗಳನ್ನು ನಡೆಸಿದೆ. ತಿರುವನಂತಪುರಂ ವಿಮಾನ ನಿಲ್ದಾಣವು ಪೈಲಟ್ ತರಬೇತಿ ನೀಡುವ ರಾಜೀವ್ ಗಾಂಧಿ ಅಕಾಡೆಮಿ ಫಾರ್ ಏವಿಯೇಷನ್ ಟೆಕ್ನಾಲಜಿಗೆ ಕೂಡ ಸೇವೆ ನೀಡುತ್ತಿದೆ.