ಹೈದರಾಬಾದ್: ನಟ ತಳಪತಿ ವಿಜಯ್ ಅವರ ರಾಜಕೀಯ ಪಕ್ಷವಾಗಿರುವ ತಮಿಳಗ ವೆಟ್ರಿ ಕಳಗಂನ ಮೊದಲ ರಾಜ್ಯ ಸಮಾವೇಶವು ಇದೇ ಅಕ್ಟೋಬರ್ 27 ರಂದು ವಿಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ನಡೆಸಲು ಎಲ್ಲ ರೀತಿಯ ಸಿದ್ದತೆ ನಡೆಸಲಾಗಿದೆ. ಈ ಹಿನ್ನೆಲೆ ಇಂದು ಗಿಡ ನೆಡುವ ಮೂಲಕ ಸಮಾವೇಶದ ಭೂಮಿ ಪೂಜೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದಲ್ಲಿ ಸಾವಿರಾರು ಸ್ವಯಂ ಸೇವಕರು ಸೇರಿದಂತೆ ಟಿವಿಕೆ ಪ್ರಧಾನ ಕಾರ್ಯದರ್ಶಿ ಬುಸ್ಸಿ ಎನ್ ಆನಂದ್ ಭಾಗಿಯಾಗಲಿದ್ದಾರೆ.
ತಮಿಳಗ ವೆಟ್ರಿ ಕಳಗಂ ಪಕ್ಷದ ಮೊದಲ ರಾಜ್ಯ ಸಮಾವೇಶ ಇದೇ 27ರಂದು ವಿಲುಪುರಂ ಜಿಲ್ಲೆಯ ವಿಕ್ರವಾಂಡಿ ಬಳಿಯ ವಿ ಸಲೈ ಗ್ರಾಮದಲ್ಲಿ ನಡೆಯಲಿದೆ ಎಂದು ನಟ ವಿಜಯ್ ಈ ಹಿಂದೆಯೇ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾ ಪದಾಧಿಕಾರಿಗಳು ಸಮಾವೇಶ ನಡೆಸಲು ಪೂರ್ವಸಿದ್ಧತಾ ಕಾರ್ಯ ಆರಂಭವಾಗಿದೆ.
ಈ ಹಿನ್ನೆಲೆ ಸಮಾವೇಶ ನಡೆಯುವ ವಿ.ಸಾಳಾಯಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸಮ್ಮೇಳನ ಮೈದಾನಕ್ಕೆ ಟಿವಿಕೆ ಪ್ರಧಾನ ಕಾರ್ಯದರ್ಶಿ ಬಸ್ಸಿ ಎನ್.ಆನಂದ್ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಇಂದು ಮುಂಜಾನೆ 4 ಗಂಟೆಗೆ ಭೂಮಿಪೂಜೆ ನೆರವೇರಿಸಿದರು.
ಇದಾದ ಬಳಿಕ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಪಕ್ಷದ ಪದಾಧಿಕಾರಿಗಳೂ ಭಾಗಿಯಾದರು. ಸಮಾವೇಶದ ಅಂಗವಾಗಿ ಚೆಂಗಲ್ಪಟ್ಟಿನ ಪ್ರಸಿದ್ಧ ದೇವಾಲಯಗಳು, ಚರ್ಚ್‌ಗಳು ಮತ್ತು ಮಸೀದಿಗಳಲ್ಲಿ ತಂದ ಪವಿತ್ರ ನೀರನ್ನು ಸಮಾವೇಶದ ಸಭಾಂಗಣದಲ್ಲಿ ಪ್ರೋಕ್ಷಣೆ ಮಾಡಿ, ಪೂಜೆ ಸಲ್ಲಿಸಲಾಯಿತು.
ಮೊದಲ ಸಮಾವೇಶ ಕುರಿತು ಈ ಹಿಂದೆ ಮಾತನಾಡಿದ್ದ ನಟ ವಿಜಯ್, ನಮ್ಮ ಪಕ್ಷದ ಮೊದಲ ರಾಜ್ಯ ಸಮ್ಮೇಳನವನ್ನು ರಾಜಕೀಯ ಹಬ್ಬವಾಗಿ ಆಚರಿಸಲಾಗುವುದು. ಪಕ್ಷದ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುವ ಸಿದ್ಧಾಂತಗಳು ಮತ್ತು ನಮ್ಮ ಗುರಿಗಳನ್ನು ಸಮಾವೇಶದಲ್ಲಿ ಪ್ರಕಟಿಸಲಾಗುವುದು. ಇದೇ ವೇಳೆ ನಮ್ಮ ಪಕ್ಷದ ಸಿದ್ಧಾಂತವನ್ನು ಕೂಡಾ ಘೋಷಿಸಲಾಗುವುದು ಎಂದಿದ್ದರು.
ಈ ಮೊದಲು ಪಕ್ಷದ ಮೊದಲ ರಾಜ್ಯ ಸಮ್ಮೇಳನವನ್ನು ಸೆಪ್ಟೆಂಬರ್ 23 ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಅನುಮತಿ ಸಂಬಂಧಿತ ಸಮಸ್ಯೆಗಳು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಅದನ್ನು ಮುಂದೂಡಲಾಗಿದ್ದು, ಇದೀಗ ಅ. 27ಕ್ಕೆ ನಿಗದಿ ಪಡಿಸಲಾಗಿದೆ.
ಇದನ್ನೂ ಓದಿ: ತಲಪತಿ ವಿಜಯ್ ಪಕ್ಷ 'ಟಿವಿಕೆ'ಗೆ ಮಾನ್ಯತೆ: 2026ರ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧೆ