ಹೈದರಾಬಾದ್/ಅಮರಾವತಿ: ತೆಲುಗು ನಾಡಿನ ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಭಾನುವಾರ ಸತತ ಎರಡನೇ ದಿನವೂ ಮಳೆ ಅಬ್ಬರ ಜೋರಾಗಿತ್ತು. ಭಾರೀ ಪ್ರವಾಹದಿಂದಾಗಿ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿತು. ರಸ್ತೆಗಳಲ್ಲಿ ಮೊಣಕಾಲುದ್ದ ನಿಂತ ನೀರಿನಿಂದಾಗಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು. ಹಲವೆಡೆ ಮಳೆ ಸಂಬಂಧಿ ಅವಘಡಗಳು ಸಂಭವಿಸಿದ್ದು, ಒಂದೇ ದಿನ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಧಾರಾಕಾರ ಮಳೆಯಿಂದಾಗಿ 99 ರೈಲುಗಳ ಸಂಚಾರ ಸ್ಥಗಿತಗೊಂಡಿತು. ನಾಲ್ಕು ರೈಲುಗಳು ಭಾಗಶಃ ರದ್ದಾದರೆ, ವಿಪರೀತ ಮಳೆಯಿಂದಾಗಿ 54 ರೈಲುಗಳ ಮಾರ್ಗ ಬದಲಿಸಲಾಯಿತು. ದಕ್ಷಿಣ ಕೇಂದ್ರ ರೈಲ್ವೇ ಜಾಲದ ಹಲವು ಪ್ರದೇಶಗಳಲ್ಲಿ ಹಳಿಗಳ ಮೇಲೆ ನೀರು ನಿಂತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಭಯ ರಾಜ್ಯಗಳ ನದಿಗಳು ಮೈದುಂಬಿ ಹರಿಯುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ಪ್ರವಾಹ ಪೀಡಿತ ಪ್ರದೇಶಗಳಿಂದ ಸಾವಿರಾರು ನಿವಾಸಿಗಳನ್ನು ರಕ್ಷಿಸಿ ಪರಿಹಾರ ಕೇಂದ್ರಗಳಿಗೆ ರವಾನಿಸಿವೆ.
ಕೇಂದ್ರದಿಂದ ನೆರವಿನ ಭರವಸೆ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಆಂಧ್ರ ಸಿಎಂ ಎನ್.ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಸಿಎಂ ಎ.ರೆವಂತ್ ರೆಡ್ಡಿ ಅವರೊಂದಿಗೆ ಮಾತನಾಡಿ, ಮಳೆ ಮತ್ತು ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೇಂದ್ರದಿಂದ ಎಲ್ಲ ರೀತಿಯ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದ್ದಾರೆ.
ಮುನ್ನೆಚ್ಚರಿಕೆ ಕ್ರಮಗಳ ಹೊರತಾಗಿಯೂ ಮಳೆ ಸಂಬಂಧಿ ಅನಾಹುತಗಳಿಂದ ರಾಜ್ಯದಲ್ಲಿ 9 ಮಂದಿ ಸಾವನ್ನಪ್ಪಿದರು ಎಂದು ತೆಲಂಗಾಣ ಕಂದಾಯ ಸಚಿವ ಪೊಂಗುಲೆಟಿ ಶ್ರೀನಿವಾಸ ರೆಡ್ಡಿ ಭಾನುವಾರ ತಿಳಿಸಿದ್ದಾರೆ. ರಾಜ್ಯದ ಮಹಬೂಬಾಬಾದ್ ಮತ್ತು ಕಮ್ಮಮ್ ಜಿಲ್ಲೆಗಳಲ್ಲಿ ಮೂವರು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ವರದಿಯಾಗಿದೆ. ಇನ್ನುಳಿದಂತೆ, ಸೂರ್ಯಪೇಟ್, ಭದ್ರಾದ್ರಿ ಕೊಥಗುಡೆಮ್, ಮಹಬೂಬಾಬಾದ್ ಮತ್ತು ಕಮ್ಮಮ್ ಜಿಲ್ಲೆಗಳಲ್ಲಿ ಅಧಿಕಾರಿಗಳ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಹೈದರಾಬಾದ್‌ನಲ್ಲೂ ಭಾನುವಾರ ಮಳೆ ಅಬ್ಬರ ಜೋರಾಗಿಯೇ ಇತ್ತು. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ನಗರದ ಅನೇಕ ಕಡೆಗಳಲ್ಲಿ ರಸ್ತೆಯಲ್ಲೆಲ್ಲಾ ನೀರು ಹರಿಯುತ್ತಿತ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ತೊಂದರೆ ಅನುಭವಿಸಿರುವ ಕುರಿತು ವರದಿಗಳಾಗಿವೆ.
ಹೈದರಾಬಾದ್‌ನಲ್ಲಿಂದು ಶಾಲೆಗಳಿಗೆ ರಜೆ: ಭಾರೀ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಹೈದರಾಬಾದ್ ಜಿಲ್ಲೆಯ ಎಲ್ಲ ಶಾಲೆಗಳಿಗೆ ಇಂದು (ಸೆಪ್ಟೆಂಬರ್ 2) ರಜೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಜಿಲ್ಲಾಧಿಕಾರಿಗಳು ರಜೆ ನೀಡುವ ಕುರಿತು ನಿರ್ಧಾರ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಜಡಿ ಮಳೆಯಿಂದ ಎಲ್ಲೆಡೆ ನೀರು ನಿಂತು ಕಮ್ಮಮ್ ಜಿಲ್ಲೆಯ ಜನರು ಮನೆಗಳ ತಮ್ಮ ಛಾವಣಿಗಳ ಮೇಲೆ ನಿಂತಿದ್ದ ದೃಶ್ಯ ಭಾನುವಾರ ಕಂಡುಬಂತು.
ಇಂದು ಎಲ್ಲಿ ರೆಡ್ ಅಲರ್ಟ್?: ಅದಿಲಾಬಾದ್, ನಿಜಾಮಾಬಾದ್, ರಾಜಣ್ಣ ಸಿರ್ಸಿಲ್ಲಾ, ಯಾದಾದ್ರಿ ಭುವನಗಿರಿ, ವಿಕಾರಾಬಾದ್, ಸಂಗಾರೆಡ್ಡಿ, ಕಾಮರೆಡ್ಡಿ, ಮಹಬೂಬನಗರ ಮುಂತಾದೆಡೆ ಇಂದು ಬೆಳಗ್ಗೆ 8.30ವರೆಗೂ ಅತೀ ಹೆಚ್ಚು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ.
ಆಂಧ್ರದಲ್ಲಿ ಮಳೆ ವಿಕೋಪ: ಆಂಧ್ರದಲ್ಲಿ ಶನಿವಾರ ಮಳೆಯಿಂದಾಗಿ 9 ಮಂದಿ ಸಾವನ್ನಪ್ಪಿದರೆ, ಓರ್ವ ವ್ಯಕ್ತಿ ನಾಪತ್ತೆಯಾಗಿದ್ದಾರೆ. ವಿಜಯವಾಡದ ಹಲವು ಪ್ರದೇಶಗಳು ಅಕ್ಷರಶಃ ಜಲದಿಗ್ಬಂಧನಕ್ಕೊಳಗಾಗಿವೆ. ಸಿಎಂ ಚಂದ್ರಬಾಬು ನಾಯ್ಡು ಮಳೆ ಬಾಧಿತ ಪ್ರದೇಶಗಳಿಗೆ ರಾತ್ರಿ ದೋಣಿ ಮೂಲಕ ತೆರಳಿ ನಿವಾಸಿಗಳಿಗೆ ಧೈರ್ಯ ತುಂಬಿದ್ದಾರೆ. ಸರ್ಕಾರ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದ್ದಾರೆ. ಇನ್ನು, ರಾಜ್ಯದ ಹಲವು ಪ್ರದೇಶಗಳಲ್ಲೂ ಇಂದೂ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಇದೇ ವೇಳೆ, ಕೆಲವೆಡೆ ಭಾರೀ ಮಳೆ ಬೀಳಲಿದೆ ಎಂದೂ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಹೈದರಾಬಾದ್ನಲ್ಲಿ ಭಾರಿ ಮಳೆ: ಹುಸೇನ್ ಸಾಗರ್ ಸರೋವರ ಸಂಪೂರ್ಣ ಭರ್ತಿ - HUSSAIN SAGAR LAKE