ಅಮರಾವತಿ: ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಆಂಧ್ರ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅಣಿಯಾಗುತ್ತಿದೆ. ಟಿಡಿಪಿ ನೇತೃತ್ವದ ಮೈತ್ರಿಪಕ್ಷಗಳು ವಿಧಾನಸಭೆಯ ಒಟ್ಟು 175 ಕ್ಷೇತ್ರಗಳ ಪೈಕಿ 165 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ದಾಖಲಿಸಿವೆ. ಹೀಗಾಗಿ, ಆಂಧ್ರಪ್ರದೇಶದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲು ಸಜ್ಜಾಗಿರುವ ಚಂದ್ರಬಾಬು ನಾಯ್ಡು, ಜೂನ್ 9ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
1995 ಮತ್ತು 2004ರಲ್ಲಿ ಅಖಂಡ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ನಾಯ್ಡು ಕಾರ್ಯ ನಿರ್ವಹಿಸಿದ್ದರು. ಇದಾದ ಬಳಿಕ ರಾಜ್ಯ ಇಬ್ಭಾಗವಾದಾಗ ವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ 2014ರವರೆಗೆ ಸೇವೆ ಸಲ್ಲಿಸಿದ್ದರು. 2019ರಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ವಿರುದ್ದ ಟಿಡಿಪಿ ಸೋಲಿನ ಕಹಿ ಉಂಡಿತ್ತು. ಇದೀಗ ವೈಎಸ್‌ಆರ್ ನೇತೃತ್ವದ ಆಡಳಿತಾರೂಢ ಪಕ್ಷದ ವಿರುದ್ಧ ಭಾರೀ ವಿರೋಧಿ ಅಲೆ ಏರ್ಪಟ್ಟಿದ್ದು, 5 ವರ್ಷಗಳ ಬಳಿಕ ಮತ್ತೆ ಟಿಡಿಪಿ ಅಧಿಕಾರ ಹಿಡಿಯುವಲ್ಲಿ ಸಫಲವಾಗಿದೆ.
ನಟ, ರಾಜಕಾರಣಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ ಮತ್ತು ಬಿಜೆಪಿ ಜೊತೆಗಿನ ಟಿಡಿಪಿ ಮೈತ್ರಿ ರಾಜ್ಯದಲ್ಲಿ ಭರ್ಜರಿಗೆ ಗೆಲುವಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಟಿಡಿಪಿ 131 , ಜನಸೇನಾ 20 ಮತ್ತು ಬಿಜೆಪಿ 7 ಸ್ಥಾನದಲ್ಲಿ ಗೆಲುವು ಕಂಡಿದೆ. ನಾಯ್ಡು 1989ರಿಂದ ತಾವು ಪ್ರತಿನಿಧಿಸುತ್ತಿರುವ ಕುಪ್ಪಂ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಇವರ ಮಗ, ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಮಂಗಲಗಿರಿ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದಾರೆ. 2019ರ ಚುನಾವಣೆಯಲ್ಲಿ ಲೋಕೇಶ್ ಈ ಕ್ಷೇತ್ರದಲ್ಲಿ ಸೋಲುಂಡಿದ್ದರು.
ಲೋಕಸಭಾ ಚುನಾವಣೆ ಫಲಿತಾಂಶದಲ್ಲೂ ಕೂಡ ನಾಯ್ಡು ನೇತೃತ್ವದ ಟಿಡಿಪಿ 25 ಕ್ಷೇತ್ರದಲ್ಲಿ 16 ಕಡೆ ಮುನ್ನಡೆ ಸಾಧಿಸಿದೆ. ತ್ರಿಪಕ್ಷಗಳು ಸೇರಿ 21 ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿವೆ. 2019ರ ವಿಧಾನ ಚುನಾವಣೆಯಲ್ಲಿ ಟಿಡಿಪಿ 23 ವಿಧಾನಸಭಾ ಕ್ಷೇತ್ರ ಮತ್ತು ಲೋಕಸಭೆಯಲ್ಲಿ 3 ಸ್ಥಾನಗಳಲ್ಲಿ ಮಾತ್ರ ಗೆಲುವು ದಾಖಲಿಸಿತ್ತು.
ಇದೀಗ 2024ರ ಚುನಾವಣೆಯಲ್ಲಿ ವೈಎಸ್ಆರ್ಪಿ ಕಾಂಗ್ರೆಸ್ ಭಾರೀ ಹಿನ್ನಡೆ ಕಂಡಿದ್ದು, ಕೇವಲ 10 ಸ್ಥಾನದಲ್ಲಿ ಮಾತ್ರ ಗೆದ್ದಿದೆ.
ಇದನ್ನೂ ಓದಿ: I.N.D.I ಮೈತ್ರಿಕೂಟದಿಂದ ನಿತೀಶ್ ಕುಮಾರ್ಗೆ ಉಪಪ್ರಧಾನಿ ಹುದ್ದೆಯ ಆಫರ್ ಸಾಧ್ಯತೆ!