ನವದೆಹಲಿ: ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ನಂಬಲರ್ಹವಾಗಿವೆ. ಅದಕ್ಕೆ ಹೊಂದಿಕೊಂಡಿರುವ ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ನಲ್ಲಿ (VV PAT) ದಾಖಲಾದ ಮತಗಳನ್ನು ನೂರಕ್ಕೆ ನೂರರಷ್ಟು ಪರಿಶೀಲನೆ ನಡೆಸುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.
ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ದಾಖಲಾದ ಮತಗಳನ್ನು ಮುದ್ರಿಸುವ ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಕೆಯ ವೇಳೆ ಪರಿಶೀಲಿಸಬೇಕು ಎಂದು ಕೋರಿ ಸಲ್ಲಿಸಲಾದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತು.
ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರಿದ್ದ ದ್ವಿಸದಸ್ಯ ಪೀಠವು ಸರ್ವಾನುಮತದಿಂದ ಈ ತೀರ್ಪು ನೀಡಿದೆ. "ಕೇವಲ ಅನುಮಾದನ ಮೇಲೆ ವಿವಿಪ್ಯಾಟ್ನಲ್ಲಿನ ಮತ ಎಣಿಕೆ ಮಾಡಲಾಗದು. ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವುದು ತಪ್ಪಲ್ಲ. ಆದರೆ, ವ್ಯವಸ್ಥೆಯನ್ನೇ ಸಂದೇಹದಿಂದ ಕಾಣುವುದು ಸರಿಯಲ್ಲ. ಅರ್ಥಪೂರ್ಣ ಟೀಕೆಗಳಿಗೆ ಸ್ವಾಗತಾರ್ಹ. ಪ್ರಜಾಪ್ರಭುತ್ವದಲ್ಲಿ ಸಾಮರಸ್ಯ ಮತ್ತು ನಂಬಿಕೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ನಂಬಿಕೆಯನ್ನು ಹುಟ್ಟಿಸುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಧ್ವನಿಯನ್ನು ಬಲಪಡಿಸಬಹುದು ಎಂದು ನ್ಯಾಯಮೂರ್ತಿ ದತ್ತಾ ಅವರು ತೀರ್ಪಿನಲ್ಲಿ ಹೇಳಿದರು.
ಕೋರ್ಟ್ ನೀಡಿದ ನಿರ್ದೇಶನಗಳು: ತೀರ್ಪಿನ ವೇಳೆ ಕೋರ್ಟ್ ಎರಡು ಪ್ರಮುಖ ನಿರ್ದೇಶನಗಳನ್ನೂ ನೀಡಿದೆ. ಇವಿಎಂನಲ್ಲಿ ಪಕ್ಷಗಳ ಚಿಹ್ನೆಗಳನ್ನು ಅಳವಡಿಸಿದ ಬಳಿಕ ಅವುಗಳು ವಿವಿಪ್ಯಾಟ್ನ ಸಿಂಬಲ್ ಲೋಡಿಂಗ್ ಯೂನಿಟ್ (ಎಸ್ಎಲ್ಯು)ನಲ್ಲಿ ಹಾಗೆಯೇ ಉಳಿಸಬೇಕು. ಕನಿಷ್ಠ ಅವುಗಳನ್ನು 45 ದಿನಗಳರೆಗೆ ಕಾಪಾಡಬೇಕು ಎಂದಿದೆ.
ಇನ್ನೊಂದು ನಿರ್ದೇಶನವೆಂದರೆ, ಅಭ್ಯರ್ಥಿಗಳು ಇವಿಎಂಗಳ ಮೈಕ್ರೋ ಕಂಟ್ರೋಲರ್ ಪ್ರೋಗ್ರಾಂ ಅನ್ನು ಫಲಿತಾಂಶ ಘೋಷಣೆಯಾದ ಬಳಿಕ ಎಂಜಿನಿಯರ್‌ಗಳ ಸಹಾಯದಿಂದ ಮತಗಳನ್ನು ಪರಿಶೀಲಿಸಲು ಅವಕಾಶವಿರುತ್ತದೆ. ಅನುಮಾನವಿದ್ದಲ್ಲಿ ಅಭ್ಯರ್ಥಿಯು ಫಲಿತಾಂಶ ಹೊರಬಿದ್ದ 7 ದಿನಗಳ ನಂತರ ಮತಗಳನ್ನು ಪರಿಶೀಲಿಸಲು ಕೋರಿಕೆ ಸಲ್ಲಿಸಬಹುದು ಎಂದಿದೆ.