ನವದೆಹಲಿ: 2013ರ ಅತ್ಯಾಚಾರ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಆಸಾರಾಮ್ ಬಾಪುಗೆ ವೈದ್ಯಕೀಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ನೀಡಿದೆ. ಒಂದು ದಶಕದ ಹಿಂದೆ ಬಂಧನಕ್ಕೊಳಗಾದ ನಂತರ ಅವರು ಮಧ್ಯಂತರ ಜಾಮೀನು ಪಡೆಯುತ್ತಿರುವುದು ಇದೇ ಮೊದಲು.
ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ರಾಜೇಶ್ ಬಿಂದಾಲ್ ಅವರ ಪೀಠ, ಆಸಾರಾಮ್ ಸಾಕ್ಷ್ಯಗಳನ್ನು ತಿರುಚಲು ಪ್ರಯತ್ನಿಸಬಾರದು ಮತ್ತು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ತಮ್ಮ ಅನುಯಾಯಿಗಳನ್ನು ಭೇಟಿಯಾಗಬಾರದು ಎಂದು ನಿರ್ದೇಶನ ನೀಡಿತು. ಆಸಾರಾಮ್ ಬೆಂಗಾವಲಿಗೆ ಮೂವರು ಪೊಲೀಸರು ಇರುತ್ತಾರೆ ಹಾಗೂ ಅವರು ಚಿಕಿತ್ಸೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.
ಅಸಾರಾಮ್ ಅವರು ವಯೋಸಹಜ ಆನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದು ಮತ್ತು ಅವರಿಗೆ ಎರಡು ಬಾರಿ ಹೃದಯಾಘಾತವಾಗಿರುವುದನ್ನು ನ್ಯಾಯಪೀಠ ಗಣನೆಗೆ ತೆಗೆದುಕೊಂಡಿದೆ. ಮಾನವೀಯ ಆಧಾರದ ಮೇಲೆ ಮಾತ್ರ ಜಾಮೀನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ಜಾಮೀನು ಅವಧಿ ಮುಗಿಯುವ ಸಮೀಪದಲ್ಲಿ ಅಸಾರಾಮ್ ಅವರ ವೈದ್ಯಕೀಯ ಸ್ಥಿತಿಯನ್ನು ಮರುಪರಿಶೀಲಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
"ಮಾರ್ಚ್ ಅಂತ್ಯದವರೆಗೆ ವೈದ್ಯಕೀಯ ಆಧಾರದ ಮೇಲೆ ಅರ್ಜಿದಾರರಿಗೆ ಜಾಮೀನು ನೀಡಲು ನಾವು ಒಲವು ಹೊಂದಿದ್ದೇವೆ. ಆದರೆ ಅರ್ಜಿದಾರರು ಸಾಕ್ಷ್ಯಗಳನ್ನು ತಿರುಚುವ ಪ್ರಯತ್ನ ಮಾಡಬಾರದು ಮತ್ತು ತಮ್ಮ ಅನುಯಾಯಿಗಳನ್ನು ಭೇಟಿಯಾಗಬಾರದು" ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆಸಾರಾಮ್ ಜೋಧಪುರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಆರೋಗ್ಯ ಹದಗೆಡುತ್ತಿರುವುದರಿಂದ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ಅಸಾರಾಮ್ ಸುಪ್ರೀಂ ಕೋರ್ಟ್ನಿಂದ ಜಾಮೀನು ಕೋರಿದ್ದರು. 2013ರಲ್ಲಿ ಸೂರತ್ ಆಶ್ರಮದಲ್ಲಿ ಮಹಿಳಾ ಶಿಷ್ಯೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ನಿಬಂಧನೆಗಳ ಅಡಿಯಲ್ಲಿ ಗುಜರಾತ್ ನ ಗಾಂಧಿನಗರದ ಸೆಷನ್ಸ್ ನ್ಯಾಯಾಲಯವು 2023ರ ಜನವರಿಯಲ್ಲಿ ಆಸಾರಾಮ್ ನನ್ನು ದೋಷಿ ಎಂದು ಘೋಷಿಸಿತ್ತು.
ಆಗಸ್ಟ್ನಲ್ಲಿ ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಲು ನಿರಾಕರಿಸಿತು. ಇದಾದ ಬಳಿಕ ಜೈಲಿನಿಂದ ಬಿಡುಗಡೆ ಕೋರಿ ಅಸಾರಾಮ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಕಳೆದ ವರ್ಷ ಅವರು ಪುಣೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲದೆ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರು ಒಂದು ಬಾರಿ ಜೋಧಪುರದ ಏಮ್ಸ್ ಗೆ ದಾಖಲಾಗಿದ್ದರು.
ಇದನ್ನೂ ಓದಿ : ಇವಿಎಂ ಹ್ಯಾಕಿಂಗ್ ಸಾಧ್ಯವಿಲ್ಲವೆಂದು 42 ಬಾರಿ ನ್ಯಾಯಾಲಯಗಳು ಹೇಳಿವೆ: ಸಿಇಸಿ ರಾಜೀವ್ ಕುಮಾರ್ - EVM