ನವದೆಹಲಿ: ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ಮುಂಬರುವ ಲೋಕಸಭೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ರಾಜ್ಯಸಭೆ ಮೂಲಕ ಸಂಸತ್ ಪ್ರವೇಶಿಸುವ ನಿರ್ಧಾರವನ್ನು ಅವರು ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಲೋಕಸಭೆಯಲ್ಲಿ ತಾವು ಪ್ರತಿನಿಧಿಸುತ್ತಿದ್ದ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದ ಮತದಾರರಿಗೆ ಬಹಿರಂಗ ಪತ್ರ ಬರೆದಿದ್ದು, ''ಆರೋಗ್ಯ ಮತ್ತು ವಯಸ್ಸಿನ ಸಮಸ್ಯೆಗಳಿರುವ ಕಾರಣ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ'' ಎಂದು ತಿಳಿಸಿದ್ದಾರೆ.
77 ವರ್ಷ ವಯಸ್ಸಿನ ಅನುಭವಿ ರಾಜಕಾರಣಿ ಸೋನಿಯಾ 2004ರಿಂದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಬುಧವಾರ ರಾಜಸ್ಥಾನದಿಂದ ರಾಜ್ಯಸಭಾ ಚುನಾವಣೆಗೆ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಲೋಕಸಭೆಯ ಬದಲಿಗೆ ರಾಜ್ಯಸಭೆ ಪ್ರವೇಶಿಸಲು ತೀರ್ಮಾನಿಸಿದ್ದಾರೆ. ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ 1964ರಿಂದ 1967ರವರೆಗೆ ರಾಜ್ಯಸಭೆ ಸದಸ್ಯರಾಗಿದ್ದರು. ಇವರ ನಂತರ ಈಗ ಸೋನಿಯಾ ತಮ್ಮ ಗಾಂಧಿ ಕುಟುಂಬದ ಎರಡನೇ ಸದಸ್ಯರಾಗಿ ರಾಜ್ಯಸಭೆಗೆ ಹೋಗುತ್ತಿದ್ದಾರೆ.
ರಾಯ್‌ಬರೇಲಿ ಕ್ಷೇತ್ರದ ಮತದಾರರಿಗೆ ಭಾವನಾತ್ಮಕ ಸಂದೇಶ ರವಾನಿಸಿರುವ ಅವರು, ಇದೇ ಕ್ಷೇತ್ರದಿಂದ ತಮ್ಮ ಕುಟುಂಬದ ಸದಸ್ಯರ ಪ್ರವೇಶದ ಕುರಿತು ಸೂಕ್ಷ್ಮ ಸುಳಿವು ಕೂಡ ನೀಡಿದ್ದಾರೆ. ಪ್ರಿಯಾಂಕಾ ಗಾಂಧಿ ಈ ಬಾರಿ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಇದಕ್ಕೆ ಸ್ವತಃ ಸೋನಿಯಾ ಸೃಷ್ಟಿ ನೀಡಿದಂತಿದೆ.
ಸೋನಿಯಾ ಪತ್ರದ ಸಂಪೂರ್ಣ ವಿವರ: ''ನಾನು ಇಂದು ಏನಾಗಿದ್ದರೂ ಅದು ನಿಮ್ಮಿಂದ. ನಿಮ್ಮ ನಂಬಿಕೆಯನ್ನು ಗೌರವಿಸಲು ನಾನು ಯಾವಾಗಲೂ ನನ್ನ ಕೈಲಾದಷ್ಟು ಕೆಲಸ ಮಾಡಿದ್ದೇನೆ ಎಂದು ಹೇಳಲು ಹೆಮ್ಮೆಪಡುತ್ತೇನೆ. ಈಗ ಆರೋಗ್ಯ ಮತ್ತು ವಯಸ್ಸಿನ ಸಮಸ್ಯೆಗಳ ಹಿನ್ನೆಲೆಯಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಈ ನಿರ್ಧಾರದಿಂದ ನಾನು ನಿಮಗೆ ನೇರವಾಗಿ ಸೇವೆ ಮಾಡುವ ಅವಕಾಶ ಹೊಂದುವುದಿಲ್ಲ. ಆದರೆ, ನನ್ನ ಹೃದಯ ಮತ್ತು ಮನಸ್ಸು ಯಾವಾಗಲೂ ನಿಮ್ಮೊಂದಿಗಿರುತ್ತದೆ. ನೀವು ಹಿಂದೆ ಇದ್ದಂತೆ ಭವಿಷ್ಯದಲ್ಲಿ ನನ್ನ ಮತ್ತು ನನ್ನ ಕುಟುಂಬದ ಪರವಾಗಿ ನೀವು ನಿಲ್ಲುತ್ತೀರಿ ಎಂದು ನನಗೆ ಗೊತ್ತಿದೆ.''
''ನೀವು ಇಲ್ಲದೆ ನನ್ನ ದೆಹಲಿಯ ಕುಟುಂಬವು ಅಪೂರ್ಣವಾಗಿದೆ. ನಾನು ರಾಯ್ ಬರೇಲಿಗೆ ಬಂದು ನಿಮ್ಮೆಲ್ಲರನ್ನು ಭೇಟಿಯಾದಾಗ ಅದು ಪೂರ್ಣಗೊಳ್ಳುತ್ತದೆ. ನಿಮ್ಮೊಂದಿಗಿನ ನನ್ನ ಸಂಬಂಧ ತುಂಬಾ ಹಳೆಯದು. ನಾನು ಈ ಸಂಬಂಧವನ್ನು ನನ್ನ ನನ್ನ ಅತ್ತೆಯವರಿಂದ ಅದೃಷ್ಟವಾಗಿ ಪಡೆದಿದ್ದೇನೆ. ರಾಯ್ ಬರೇಲಿಯೊಂದಿಗಿನ ತನ್ನ ಕುಟುಂಬದ ಸಂಬಂಧವು ಅತ್ಯಂತ ಆಳವಾಗಿ ಬೇರೂರಿದೆ.''
"ಅಂದಿನಿಂದ ಇಂದಿನವರೆಗೆ ಜೀವನದ ಕಷ್ಟದ ಹಾದಿಯಲ್ಲಿ ಏರಿಳಿತಗಳ ಹೊರತಾಗಿಯೂ ನಮ್ಮ ಪ್ರೀತಿಯ ಸಂಬಂಧವು ಬಲವಾಗಿ ಬೆಳೆದಿದೆ. ಈ ಬಂಧದಲ್ಲಿ ನಮ್ಮ ನಂಬಿಕೆಯೂ ಬಲವಾಗಿದೆ. ಈ ಹೊಳೆಯುವ ಹಾದಿಯಲ್ಲಿ ನಡೆಯಲು ನೀವು ನನಗೆ ಜಾಗ ನೀಡಿದ್ದೀರಿ. ನನ್ನ ಅತ್ತೆ ಮತ್ತು ಪತಿಯನ್ನು ಕಳೆದುಕೊಂಡ ನಂತರ ನಾನು ನಿಮ್ಮ ಬಳಿಗೆ ಬಂದಿದ್ದೆ. ನೀವು ನನ್ನನ್ನು ಮುಕ್ತ ತೋಳುಗಳಿಂದ ಸ್ವೀಕರಿಸಿದ್ದೀರಿ."
"ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಪ್ರತಿಕೂಲ ಸಂದರ್ಭಗಳಲ್ಲೂ ನನಗೆ ನೀವು ನೀಡಿದ ಬೆಂಬಲವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ'' ಎಂದು ಸೋನಿಯಾ ಕ್ಷೇತ್ರದ ಹಿರಿಯರಿಗೆ ತಮ್ಮ ಗೌರವ ಮತ್ತು ಯುವಕರಿಗೆ ಆತ್ಮೀಯ ಸಂದೇಶ ರವಾನಿಸಿ, "ನಾನು ಶೀಘ್ರದಲ್ಲೇ ನಿಮ್ಮನ್ನು ಕಾಣುತ್ತೇನೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಾಜಿ ಪಿಎಂ ಮನಮೋಹನ್ ಸಿಂಗ್ ಬದಲಿಗೆ ರಾಜಸ್ಥಾನದಿಂದ ರಾಜ್ಯಸಭೆಗೆ ಸೋನಿಯಾ ನಾಮಪತ್ರ