ಗ್ಯಾಂಗ್ಟಾಕ್(ಸಿಕ್ಕಿಂ): ಗ್ಯಾಂಗ್‌ಟಾಕ್‌ನ ರಾಣಿಪುಲ್ ಎಂಬಲ್ಲಿ ಶನಿವಾರ ರಾತ್ರಿ ಭಾರಿ ಅಪಘಾತ ಸಂಭವಿಸಿದೆ. ಹಾಲಿನ ಟ್ಯಾಂಕರ್‌ವೊಂದು ದಿಢೀರ್ ಜನ ಸೇರಿದ್ದ ಜಾತ್ರೆಗೆ ನುಗ್ಗಿದೆ. ಇದರಿಂದಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರು. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 30 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಣಿಪುರ್ ತಾಂಬ್ಲಾ ಜಾತ್ರೆಯ ವೇಳೆ ರಾತ್ರಿ ಸುಮಾರಿಗೆ 7.13ಕ್ಕೆ ಘಟನೆ ನಡೆಯಿತು. ಸಿಕ್ಕಿಂ ಹಾಲು ಒಕ್ಕೂಟದ ಟ್ಯಾಂಕರ್ ಸಿಲಿಗುರಿ ಕಡೆಗೆ ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡ ಟ್ಯಾಂಕರ್ ಹಠಾತ್ ಜಾತ್ರೆ ನಡೆಯುತ್ತಿದ್ದ ಮೈದಾನಕ್ಕೆ ನುಗ್ಗಿದೆ. ಮೊದಲಿಗೆ ಎರಡ್ಮೂರು ಕಾರುಗಳಿಗೆ ಡಿಕ್ಕಿ ಹೊಡೆಯಿತು. ಬಳಿಕ ನೋಡುನೋಡುತ್ತಿದ್ದಂತೆ ನೇರವಾಗಿ ಜನರ ಮೇಲೆಯೇ ಹರಿದಿದೆ. ಹಲವರು ವಾಹನದಡಿ ಬಿದ್ದು ಸಾವನ್ನಪ್ಪಿದರು. ನೂರಾರು ಗಾಯಾಳುಗಳ ಪೈಕಿ ಕೆಲವರಂತೂ ಕೆಲಕಾಲ ರಸ್ತೆಯಲ್ಲೇ ಯಾತನೆ ಅನುಭವಿಸಿದರು.
ಸಿಕ್ಕಿಂ ಪೊಲೀಸರು ಹಾಗು ಜನರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಾಣಿಪುಲ್ ಆಸ್ಪತ್ರೆಗೆ ರವಾನಿಸಿದರು. ಜನರು ಕಿರುಚುತ್ತಾ ಕುಟುಂಬ ಸದಸ್ಯರನ್ನು ಹುಡುಕುತ್ತಿದ್ದರು. ಗೊಂದಲದ ವಾತಾವರಣದಲ್ಲಿ ಯಾರು ಎಲ್ಲಿದ್ದಾರೆ ಎಂಬುದೇ ತಿಳಿಯದೆ ಜಾತ್ರೆಯ ಮೈದಾನದಲ್ಲಿ ಶೋಕ ಮಡುಗಟ್ಟಿತ್ತು. ಟ್ಯಾಂಕರ್ ನಿಯಂತ್ರಣ ತಪ್ಪಿದ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಸಿಕ್ಕಿಂ ಆಡಳಿತ ತಿಳಿಸಿದೆ. ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ (ಗೋಲೆ) ಈಗಾಗಲೇ ಪರಿಶೀಲನೆ ನಡೆಸಿ ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲು ಆದೇಶಿಸಿದ್ದಾರೆ.
ಇದನ್ನೂ ಓದಿ: ಹರಿಯಾಣ ರೈತರಿಂದ 'ದೆಹಲಿ ಚಲೋ': ಇಂಟರ್ನೆಟ್, ಎಸ್‌ಎಂಎಸ್ ಸ್ಥಗಿತ