ಹಾವೇರಿ: "ಕಡಕೋಳ ಪ್ರಕರಣ ಸುದ್ದಿಯಾಗುವಂತದಲ್ಲ. ಕಡಕೋಳ ಗ್ರಾಮದಲ್ಲಿ ಈ ರೀತಿಯ ಘಟನೆ ನಡೆದಿರಲಿಲ್ಲ. ಗಲಾಟೆ ಯಾರು ಮಾಡಿದವರು? ಕಡಕೋಳದಲ್ಲಿ ಒಂದೂ ಎಂಟ್ರಿ ಆಗಿಲ್ಲ. ಹಾವೇರಿ ಜಿಲ್ಲೆಯಲ್ಲಿ ಎಂಟ್ರಿ ಆಗಿರಬಹುದು. ಆದರೆ ಕಡಕೋಳದಲ್ಲಿ ಒಂದೇ ಒಂದು ಎಂಟ್ರಿ ಆಗಿಲ್ಲ. ಅಲ್ಲಿ ಯಾವುದೂ ವಕ್ಫ್ ಅಂತ ಇನ್ನೂ ಎಂಟ್ರಿನೇ ಆಗಿಲ್ಲ. ಆದರೂ ಸುಮ್ಮನೆ ಗಲಾಟೆ ಮಾಡಿದ್ದಾರೆ ಎಂದರೆ ಮೂರ್ಖತನ. ನೋಟಿಸ್ ಕೊಟ್ಟರೆ ಎಂಟ್ರಿ ಆದ ಹಾಗೆ ಅಲ್ಲ. ಕಡಕೋಳದಲ್ಲಿ ಗಲಾಟೆ ಆಗಿರೋದು ದುರದೃಷ್ಟಕರ" ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಶಿಗ್ಗಾಂವ್ ತಾಲೂಕಿನ ಬಂಕಾಪುರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪಾಪ ಮುಸಲ್ಮಾನರನ್ನು ರಾತ್ರಿ ಒಕ್ಕಲೆಬ್ಬಿಸಿ, ಮನೆಯಿಂದ ಓಡಿಸಿದ್ದಾರೆ. ಅವರು ಇನ್ನೂ ಊರಿಗೆ ಬಂದಿಲ್ಲ. ಬಹು ಸಂಖ್ಯಾತ ಹಿಂದುಗಳಿದ್ದರೆ ಮುಸ್ಲಿಂರಿಗೆ ಭಯ. ಮುಸಲ್ಮಾನರು ಬಹುಸಂಖ್ಯಾತರಿದ್ದಲ್ಲಿ ಹಿಂದೂಗಳಿಗೆ ಭಯ. ಈ ರೀತಿ ವಾತಾವರಣ ಸೃಷ್ಟಿ ಮಾಡ್ತಾ ಬರ್ತಿದ್ದಾರೆ. ಇದು ಬಹಳ ದುರದೃಷ್ಟಕರ. 75 ವರ್ಷ ಸಾಮರಸ್ಯ ಮಾಡಿಕೊಂಡೇ ಬದುಕಿದ್ದೀವಲ್ಲ. ಕಡಕೋಳ ಗ್ರಾಮದಲ್ಲಿ ಏನೂ ಆಗೆ ಇಲ್ಲ" ಎಂದು ಸಚಿವರು ಸ್ಪಷ್ಟಪಡಿಸಿದರು.
ಸಚಿವರು ಶಿಗ್ಗಾಂವಿಗೆ ಬಂದಿರೋದು ಹಣ ಹಂಚೋಕೆ ಎಂಬ ಸಂಸದ ಬಸವರಾಜ ಬೊಮ್ಮಾಯಿ ಆರೋಪಕ್ಕೆ ಪ್ರತಿಕ್ರಿಯಿಸಿ, "ಅವರ ಲೀಡರ್ಸ್ ಹಣ ಹಂಚೋಕೆ ಬರ್ತಾರಾ? ನಮ್ಮ ಲೀಡರ್ಸ್ ಬರೋದು ಪ್ರಚಾರಕ್ಕೆ. ಆದರೆ ಅವರ ಲೀಡರ್ಸ್ ಹಣ ತರುತ್ತಿದ್ದರೆ, ಗೊತ್ತಿಲ್ಲ. ಅಭಿವೃದ್ಧಿ ಬಗ್ಗೆ ಅವರೂ ಹೇಳ್ತಾರೆ, ನಾವೂ ಹೇಳ್ತೀವಿ. ಚುನಾವಣೆಯನ್ನು ಕ್ರಿಕೆಟ್ಗೆ ಹೋಲಿಸಿದರೆ ಮೂರ್ಖರು ಅವರು. ಅಲ್ಲಿ 22 ಜನ ಆಡ್ತಾರೆ. ಇಲ್ಲಿ ಎರಡು ಲಕ್ಷ ಜನ ಆಡ್ತಾರೆ" ಎಂದು ಪಾಟೀಲ್ ತಿಳಿಸಿದರು.
"ವಕ್ಫ್ ಬಗ್ಗೆ ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್ ಹೇಳಿರುವ ವಿಡಿಯೋ ಇದೆ ನೋಡಿ. ಚುನಾವಣೆ ಸಂದರ್ಭದಲ್ಲಿ ಅಸ್ತ್ರ ಹುಟ್ಟಿಸುತ್ತಾರೆ ಎಂದು ಸಚಿವ ಪಾಟೀಲ್ ಆರೋಪಿಸಿದರು.
"ನಮ್ಮ ವರ್ಷನ್ ಹೇಳ್ತೀನಿ ಕೇಳಿ, ವಕ್ಫ್ ಆಸ್ತಿಯನ್ನೂ ಪರಿಶೀಲನೆ ಮಾಡಿದ್ದಾರೆ, ಗುಡಿ ಗುಂಡಾರಗಳ ಆಸ್ತಿಯನ್ನೂ ಪರಿಶೀಲನೆ ಮಾಡಿದ್ದಾರೆ. ಅದಕ್ಕೆಲ್ಲ ಕೋರ್ಟ್ ಇದೆ" ಎಂದು ತಿಳಿಸಿದರು.
ಇದನ್ನೂ ಓದಿ: ರೈತರಿಗೆ ವಕ್ಫ್ ನೋಟಿಸ್ ವಿವಾದ ಕಾಂಗ್ರೆಸ್ಗೆ ಹಿನ್ನಡೆಯಾಗಲಿದೆ: ಭರತ್ ಬೊಮ್ಮಾಯಿ