ಮುಂಬೈ, ಮಹಾರಾಷ್ಟ್ರ: ಸಂವತ್ 2081ರ ಶುಭ ಸಂದರ್ಭದಲ್ಲಿ ಶುಕ್ರವಾರ ಮುಂಬೈ ಷೇರುಪೇಟೆಯಲ್ಲಿ ಮುಹೂರ್ತದ ವಹಿವಾಟು ನಡೆಯಿತು. ಈ ಮುಂಚೆ ಸತತ ಎರಡು ದಿನಗಳ ನಷ್ಟದಲ್ಲಿದ್ದ ಷೇರು ಮಾರುಕಟ್ಟೆಗಳು ಶುಕ್ರವಾರದ ಶುಭ ಮುಹೂರ್ತದಲ್ಲಿ ಭಾರಿ ಏರಿಕೆ ಕಾಣುವ ಮೂಲಕ ಷೇರುದಾರರಲ್ಲಿ ದೀಪಾವಳಿಯ ಭರವಸೆಯ ಬೆಳಕು ಮೂಡಿಸಿತು. ಸತತ ಕುಸಿತದ ಬಳಿಕ ಸೆನ್ಸೆಕ್ಸ್ 355 ಅಂಕಗಳ ಏರಿಕೆ ಮೂಲಕ ಹೂಡಿಕೆದಾರರು ಪಟಾಕಿ ಸಿಡಿಸಿ ಸಂಭ್ರಮಿಸುವಂತೆ ಮಾಡಿತು.
ಒಂದು ಗಂಟೆಯ ಮುಹೂರ್ತದ ಷೇರು ವ್ಯವಹಾರದ ಮುಕ್ತಾಯದ ವೇಳೆಗೆ, ಸೆನ್ಸೆಕ್ಸ್ 335 ಪಾಯಿಂಟ್ ಅಥವಾ ಶೇಕಡಾ 0.42 ರಷ್ಟು ಏರಿಕೆಯಾಗಿ 79,724 ಕ್ಕೆ ಮತ್ತು ನಿಫ್ಟಿ 99 ಪಾಯಿಂಟ್ ಅಥವಾ 0.41 ರಷ್ಟು ಏರಿಕೆಯಾಗಿ 24,304 ಕ್ಕೆ ತಲುಪಿದೆ.
ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಷೇರುಗಳಲ್ಲಿ ಶುಕ್ರವಾರ ಭರ್ಜರಿ ರ್ಯಾಲಿ ಕಂಡು ಬಂತು. ನಿಫ್ಟಿ ಮಿಡ್‌ಕ್ಯಾಪ್ 100 ಸೂಚ್ಯಂಕ 383 ಪಾಯಿಂಟ್‌ಗಳು ಅಥವಾ ಶೇಕಡಾ 0.68 ರಷ್ಟು ಏರಿಕೆಯಾಗಿ 56,496 ಕ್ಕೆ ಸ್ಥಿರವಾಯಿತು ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಸೂಚ್ಯಂಕ 192 ಪಾಯಿಂಟ್ ಅಥವಾ 1.03 ರಷ್ಟು ಏರಿಕೆಯಾಗಿ 18,794 ಕ್ಕೆ ಕೊನೆಗೊಂಡಿತು.
ಮುಹೂರ್ತದ ವಹಿವಾಟಿನ ಸಮಯದಲ್ಲಿ ವಿಶಾಲ ಮಾರುಕಟ್ಟೆಯ ಪ್ರವೃತ್ತಿಯು ಸಹ ಧನಾತ್ಮಕವಾಗಿತ್ತು ಎಂಬುದು ವಿಶೇಷ. 2024ರ ಅಕ್ಟೋಬರ್ ತಿಂಗಳು ಹೂಡಿಕೆದಾರರಿಗೆ ದೊಡ್ಡ ಕರಾಳ ತಿಂಗಳಾಗಿ ಮಾರ್ಪಟ್ಟಿತ್ತು. ಷೇರುಪೇಟೆ ಸುಮಾರು ಈ ತಿಂಗಳಲ್ಲಿ 4ಸಾವಿರಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡು ಕಳೆಗುಂದುವಂತೆ ಮಾಡಿತ್ತು. ಆದರೆ, ದೀಪಾವಳಿ ಶುಭಮುಹೂರ್ತದ ಟ್ರೇಡಿಂಗ್ ಇವೆಲ್ಲವನ್ನು ಮರೆಸಿ ಏರಿಕೆ ದಾಖಲಿಸುವ ಮೂಲಕ ಸಂವತ್ 2081 ರ ಕ್ಕೆ ಶುಭ ಗಳಿಗೆ ತಂದು ಕೊಟ್ಟಿದೆ.
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಬಿಎಸ್ಸಿಯಲ್ಲಿ 3,017 ಷೇರುಗಳು ಹಸಿರು ಬಣ್ಣದಲ್ಲಿ, 558 ಕೆಂಪು ಬಣ್ಣದಲ್ಲಿ ಮತ್ತು 73 ಷೇರುಗಳು ಬದಲಾಗದೇ ದಿನದ ವ್ಯವಹಾರವನ್ನು ಮುಗಿಸಿದವು. ಸೆನ್ಸೆಕ್ಸ್ ಪ್ಯಾಕ್‌ನಲ್ಲಿನ 30 ಷೇರುಗಳಲ್ಲಿ ಇಪ್ಪತ್ತೈದು ಹಸಿರು ಬಣ್ಣದಲ್ಲಿ ವಹಿವಾಟು ಕೊನೆಗೊಳಿಸಿದವು.
ಈ ಎಲ್ಲ ಷೇರುಗಳಲ್ಲಿ ಭರ್ಜರಿ ರ‍್ಯಾಲಿ: ಮಹೀಂದ್ರಾ ಮತ್ತು ಮಹೀಂದ್ರಾ, ಟಾಟಾ ಮೋಟಾರ್ಸ್, ಆಕ್ಸಿಸ್ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ನೆಸ್ಲೆ, ಎನ್‌ಟಿಪಿಸಿ, ಟಾಟಾ ಸ್ಟೀಲ್, ಇಂಡಸ್‌ಇಂಡ್ ಬ್ಯಾಂಕ್, ಟೈಟಾನ್, ಅಲ್ಟ್ರಾಟೆಕ್ ಸಿಮೆಂಟ್, ಸನ್ ಫಾರ್ಮಾ, ಐಟಿಸಿ, ಬಜಾಜ್ ಫೈನಾನ್ಸ್, ಟಿಸಿಎಸ್, ಮಾರುತಿ ಸುಜುಕಿ, ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಟಾಪ್ ಗೇನರ್‌ಗಳಾಗಿವೆ.
ಈ ಷೇರುಗಳಲ್ಲಿ ಲಾಸ್: ಎಚ್‌ಸಿಎಲ್ ಟೆಕ್, ಟೆಕ್ ಮಹೀಂದ್ರಾ, ವಿಪ್ರೋ, ಐಸಿಐಸಿಐ ಬ್ಯಾಂಕ್ ಮತ್ತು ಏಷ್ಯನ್ ಪೇಂಟ್ಸ್ ಟಾಪ್ ಲೂಸರ್‌ಗಳಾಗಿವೆ.
ಐಟಿ ಹೊರತುಪಡಿಸಿ ಬಹುತೇಕ ಎಲ್ಲಾ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕಂಗೊಳಿಸಿದವು.
ಆಟೋ, ಪಿಎಸ್‌ಯು ಬ್ಯಾಂಕ್, ಪವರ್, ರಿಯಾಲ್ಟಿ, ಫಿನ್ ಸರ್ವಿಸಸ್, ಫಾರ್ಮಾ ಮತ್ತು ಎಫ್‌ಎಂಸಿಜಿ ಪ್ರಮುಖ ಲಾಭ ಗಳಿಸಿದವು.
ಇತ್ತೀಚಿನ ಮಾರುಕಟ್ಟೆಗಳ ಕುಸಿತದ ಹೊರತಾಗಿಯೂ, ಮುಹೂರ್ತದ ವಹಿವಾಟಿನ ಸಮಯದಲ್ಲಿ ಆಶಾವಾದ ಕಂಡುಬಂದಿದೆ.ಹೂಡಿಕೆದಾರರ ಸಂವೇದನಾತ್ಮಕ ಮನೋಭಾವವನ್ನು ಇಂದಿನ ವ್ಯವಹಾರ ಸೂಚಿಸುತ್ತಿದೆ. ಮಾರುಕಟ್ಟೆಗಳಲ್ಲಿನ ಪ್ರಸ್ತುತ ಸ್ಥಿತಿಯು ಮುಂದಿನ ದಿನಗಳಲ್ಲಿ ಸ್ವತಃ ಸರಿಪಡಿಸಲು ಪ್ರಾರಂಭಿಸುವ ಸಾಧ್ಯತೆಯಿದೆ. ಕೆಲವು ವಾರಗಳಲ್ಲಿ ಅಂದರೆ ವೆಂಬರ್ 15 ರಿಂದ ಜನವರಿ 15 ರ ನಡುವೆ, ಮಾರುಕಟ್ಟೆಗಳು ಸ್ಥಿರಗೊಳ್ಳಲು ಪ್ರಾರಂಭಿಸಬೇಕು ಮತ್ತು ಒಂದು ನಿರ್ದಿಷ್ಟ ಪ್ರವೃತ್ತಿಯನ್ನು ಪ್ರದರ್ಶಿಸಬೇಕು ಎಂದು ಓಮ್ನಿಸೈನ್ಸ್ ಕ್ಯಾಪಿಟಲ್‌ನ ಮ್ಯಾನೇಜರ್ ಮತ್ತು ಸಿಇಒ ವಿಕಾಸ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
- ಇದನ್ನು ಓದಿ:ಭಾರತದಲ್ಲಿ ಸಾರ್ವಕಾಲಿಕ ಆದಾಯದ ದಾಖಲೆ ಬರೆದ ಆಪಲ್: ಮತ್ತೆ ನಾಲ್ಕ ಸ್ಟೋರ್ ತೆಗೆಯುವುದಾಗಿ ಹೇಳಿದ ಕುಕ್
- ದೀಪಾವಳಿ ಬಂಪರ್ ಆಫರ್: ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ: ಯಾವ ಬ್ಯಾಂಕ್ನಲ್ಲಿ ಎಷ್ಟು? ಇಲ್ಲಿದೆ ಮಾಹಿತಿ!
- ಸತತ ನಾಲ್ಕನೇ ಬಾರಿಗೂ ಏರಿಕೆ: ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಭಾರಿ ಹೆಚ್ಚಳ
- ಷೇರು ಮಾರುಕಟ್ಟೆ: ದೇಶೀಯ ಸಾಂಸ್ಥಿಕ ಹೂಡಿಕೆದಾರರಿಂದ 1 ಲಕ್ಷ ಕೋಟಿಗೂ ಅಧಿಕ ಹೂಡಿಕೆ