ISRO Launches Analog Space Mission: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಲಡಾಖ್‌ನ ಲೇಹ್‌ನಿಂದ ಭಾರತದ ಮೊದಲ ಅನಲಾಗ್ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇಸ್ರೋ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ ನೇತೃತ್ವದಲ್ಲಿ, ಎಎಕೆಎ ಸ್ಪೇಸ್ ಸ್ಟುಡಿಯೋ, ಲಡಾಖ್ ವಿಶ್ವವಿದ್ಯಾಲಯ ಮತ್ತು ಐಐಟಿ ಬಾಂಬೆ ಸಹಭಾಗಿತ್ವದಲ್ಲಿ ಮಿಷನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಅನಲಾಗ್ ಬಾಹ್ಯಾಕಾಶ ಕಾರ್ಯಾಚರಣೆ: ಲಡಾಖ್ ಸ್ವಾಯತ್ತ ಹಿಲ್ ಡೆವಲಪ್ಮೆಂಟ್ ಕೌನ್ಸಿಲ್ ಸಹ ತನ್ನ ಬೆಂಬಲವನ್ನು ವಿಸ್ತರಿಸಿದೆ. ಇನ್ನು ಇಸ್ರೋ ತನ್ನ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಅನಲಾಗ್ ಬಾಹ್ಯಾಕಾಶ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡಿದೆ.
"ಭಾರತದ ಮೊದಲ ಅನಲಾಗ್ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಲೇಹ್‌ನಲ್ಲಿ ಪ್ರಾರಂಭಿಸಲಾಗಿದೆ. ಇದು ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್, ಇಸ್ರೋ, ಎಎಕೆಎ ಸ್ಪೇಸ್ ಸ್ಟುಡಿಯೋ, ಲಡಾಖ್ ವಿಶ್ವವಿದ್ಯಾಲಯ, ಐಐಟಿ ಬಾಂಬೆ, ಲಡಾಖ್ ಸ್ವಾಯತ್ತ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್‌ನ ಜಂಟಿ ಪ್ರಯತ್ನವಾಗಿದೆ." ಎಂದು ಇಸ್ರೋ ಹೇಳಿದೆ.
ಈ ಸ್ಥಳವನ್ನೇ ಏಕೆ ಆಯ್ಕೆ ಮಾಡಲಾಗಿದೆ? ಚಂದ್ರ ಮತ್ತು ಮಂಗಳದಂತಹ ಕಠಿಣ ಭೌಗೋಳಿಕ ಪರಿಸರದಲ್ಲಿ ಗಗನಯಾತ್ರಿಗಳು ವಾಸಿಸಲು ಸೂಕ್ತವಾದ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಈ ಕಾರ್ಯಾಚರಣೆಯನ್ನು ಬಳಸಲಾಗುತ್ತದೆ. ಲಡಾಖ್‌ನ ಶುಷ್ಕ ಹವಾಮಾನ, ಎತ್ತರದ ಪ್ರದೇಶ ಮತ್ತು ಬಂಜರು ಭೂಪ್ರದೇಶವು ಮಂಗಳ ಮತ್ತು ಚಂದ್ರನ ಪರಿಸ್ಥಿತಿಗಳನ್ನು ಹೋಲುತ್ತದೆ. ಹಾಗಾಗಿ ಅನಲಾಗ್ ಸಂಶೋಧನೆಗೆ ಇದು ಸೂಕ್ತ ಸ್ಥಳ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಲಡಾಖ್‌ನ ಲೇಹ್ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲು ವೇದಿಕೆಯಾಗಿದೆ.
ಅನಲಾಗ್ ಮಿಷನ್ ಅಂದ್ರೆ ಏನು?: ನಾಸಾ ಪ್ರಕಾರ, ಅನಲಾಗ್ ಮಿಷನ್‌ಗಳು ತೀವ್ರ ಹವಾಮಾನ ಪರಿಸ್ಥಿತಿಗಳಲ್ಲಿ ಬಾಹ್ಯಾಕಾಶ ಪ್ರಯಾಣಕ್ಕೆ ಸಂಬಂಧಿಸಿದಂತೆ ನಡೆಸಲಾಗುವ ಕ್ಷೇತ್ರ ಪರೀಕ್ಷೆಗಳಾಗಿವೆ. ಇದರಲ್ಲಿ ಸರ್ಕಾರಿ ಸಂಸ್ಥೆಗಳು, ಶೈಕ್ಷಣಿಕ ಮತ್ತು ಉದ್ಯಮಗಳು ತಮ್ಮ ಬಾಹ್ಯಾಕಾಶ ಪ್ರಯಾಣದ ಸಿದ್ಧತೆಗಳನ್ನು ವಿಶ್ಲೇಷಿಸಲು ಒಟ್ಟಾಗಿ ಕೆಲಸ ಮಾಡುತ್ತವೆ.
ಹೊಸ ತಂತ್ರಜ್ಞಾನಗಳು, ರೊಬೊಟಿಕ್ ಸಾಧನಗಳು, ವಿಶೇಷ ವಾಹನಗಳು, ಸಂವಹನಗಳು ಮತ್ತು ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದ ಪ್ರಯೋಗಗಳನ್ನು ಸಾಮಾನ್ಯವಾಗಿ ನಡೆಸಲಾಗುತ್ತದೆ ಎಂದು ನಾಸಾ ಹೇಳುತ್ತದೆ.
ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಬಾಹ್ಯಾಕಾಶ ಸಂಸ್ಥೆಗಳು ಮತ್ತು ಸಂಸ್ಥೆಗಳು ಮೊದಲು ಈ ಪ್ರಮುಖ ಅನಲಾಗ್ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತವೆ. ಅದರ ನಂತರ, ಗಗನಯಾತ್ರಿಗಳಿಗೆ ವಿಭಿನ್ನ ಹವಾಮಾನ ಮತ್ತು ಭೌಗೋಳಿಕತೆಯ ಅಗತ್ಯವಿರುತ್ತದೆ. ಶೀಘ್ರದಲ್ಲೇ ಭಾರತವು ಗಗನಯಾನ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ತನ್ನ ನಿರ್ಣಾಯಕ ಅನಲಾಗ್ ಮಿಷನ್ ಆರಂಭಿಸಿದೆ.
ಈ ಮಿಷನ್ ಮೂಲಕ ಬಾಹ್ಯಾಕಾಶಕ್ಕೆ ಸಾಗಿಸುವ ಸಂಪನ್ಮೂಲಗಳನ್ನು ಹೇಗೆ ಬಳಸಬೇಕೆಂದು ವಿಜ್ಞಾನಿಗಳು ಯೋಜಿಸಿದ್ದಾರೆ. ಗಗನಯಾತ್ರಿಗಳ ಮೇಲೆ ಬಾಹ್ಯಾಕಾಶ ಪ್ರತ್ಯೇಕತೆಯ ಪರಿಣಾಮಗಳನ್ನು ನಿರ್ಣಯಿಸಲಾಗುತ್ತದೆ. ಭವಿಷ್ಯದಲ್ಲಿ ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಮಾನವಸಹಿತ ಕಾರ್ಯಾಚರಣೆಗಳಿಗೆ ಇದು ಪ್ರಯೋಜನಕಾರಿಯಾಗಿದೆ.
ಓದಿ: ಭಾರತದಲ್ಲಿ ಸಾರ್ವಕಾಲಿಕ ಆದಾಯದ ದಾಖಲೆ ಬರೆದ ಆಪಲ್: ಮತ್ತೆ ನಾಲ್ಕ ಸ್ಟೋರ್ ತೆಗೆಯುವುದಾಗಿ ಹೇಳಿದ ಕುಕ್