ಬೆಳಗಾವಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿಯನ್ನು ಮಹಿಳೆಯರು ನಾನಾ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಬೆಳಗಾವಿ ತಾಲ್ಲೂಕಿನ ಕುಕಡೊಳ್ಳಿ ಗ್ರಾಮದ ಮಹಿಳೆಯೊಬ್ಬರು ಖಾರ ಕುಟ್ಟುವ ಯಂತ್ರವನ್ನು ಖರೀದಿಸಿದ್ದಾರೆ. ಈ ಮೂಲಕ ಆರ್ಥಿಕ ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿದ್ದಾರೆ.
ಕುಕಡೊಳ್ಳಿ ಗ್ರಾಮದ ತಾಯವ್ವ ಲಕಮೋಜಿ ಖಾರ ಕುಟ್ಟುವ ಯಂತ್ರ ಖರೀದಿಸಿದವರು. ಸ್ವತಃ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭಾನುವಾರ ಕುಕಡೊಳ್ಳಿಗೆ ತೆರಳಿ ಈ ಯಂತ್ರವನ್ನು ಉದ್ಘಾಟಿಸಿ, ತಾಯವ್ವ ಅವರ ಕಾರ್ಯಕ್ಕೆ ಭೇಷ್ ಎಂದಿದ್ದಾರೆ.
ಗೃಹಲಕ್ಷ್ಮೀ ಯೋಜನೆಯ 11 ಕಂತುಗಳ 22 ಸಾವಿರ ರೂ. ಮತ್ತು ಇನ್ನುಳಿದ ಹಣವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಲ ಪಡೆದು ಒಟ್ಟು 45 ಸಾವಿರ ರೂ. ಹಣದಲ್ಲಿ ಖಾರ ಕುಟ್ಟುವ ಯಂತ್ರವನ್ನು ತಾಯವ್ವ ಖರೀದಿ ಮಾಡಿದ್ದಾರೆ.
"ಲಕ್ಷಾಂತರ ಬಡ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಗೃಹಲಕ್ಷ್ಮೀ ಯೋಜನೆ ಸುಧಾರಣೆ ಮಾಡುತ್ತಿದೆ. ಸಾಕಷ್ಟು ಬಡ ಕುಟುಂಬಗಳು ಈ ಯೋಜನೆಯ ಮೂಲಕ ಬದುಕು ಕಟ್ಟಿಕೊಂಡಿವೆ. ಯೋಜನೆಯ ಸಾರ್ಥಕತೆಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ?" ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಂಸಿಸಿದರು.
ಫಲಾನುಭವಿ ತಾಯವ್ವ ಲಕಮೋಜಿ ಮಾತನಾಡಿ, "ಬಡತನದಲ್ಲೇ ಬದುಕಿನ ಬಂಡಿ ಸಾಗಿಸುವ ನಮ್ಮಂಥವರಿಗೆ ಗೃಹಲಕ್ಷ್ಮಿ ಯೋಜನೆ ದೊಡ್ಡ ಆಸರೆಯಾಗಿದೆ. ಸುಮ್ಮನೆ ಹಣ ಖರ್ಚು ಮಾಡಿದರೆ ವ್ಯರ್ಥ ಆಗುತ್ತದೆ. ಇದೇ ಹಣದಲ್ಲಿ ಏನಾದರು ಸ್ವಂತ ಕೆಲಸ ಆರಂಭಿಸೋಣ ಎಂದುಕೊಂಡು ಖಾರದ ಯಂತ್ರ ಖರೀದಿಸಿದ್ದೇನೆ. ನಮ್ಮ ಬದುಕಿಗೆ ಅನುಕೂಲ ಮಾಡಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ" ಎಂದು ಹೇಳಿದರು.
ಈ ವೇಳೆ ಕುಕಡೊಳ್ಳಿ ಗ್ರಾಮದ ಮುಖಂಡ ಚನ್ನಬಸಯ್ಯ ಹಿರೇಮಠ, ಬಸಯ್ಯ ಚಿಕ್ಕಮಠ, ವೀರನಗೌಡ ಪಾಟೀಲ, ತಾಯಪ್ಪ ಮರಕಟ್ಟಿ, ಪುಂಡಲೀಕ ಬೈರೋಜಿ, ಕಲ್ಲಪ್ಪ ವಡ್ಡಿನ, ಪರಶುರಾಮ ಕುರುಬರ, ಅನ್ನಪೂರ್ಣ ಪಾಟೀಲ್, ಗದಿಗೆಪ್ಪ ವಡ್ಡಿನ, ದೊಡ್ಡಪ್ಪ ದೇಶನೂರ, ರಾಮಪ್ಪ ಕರವಿನಕೊಪ್ಪ, ಹೊಳೆಪ್ಪ ಹಟ್ಟಿ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ: ಗೃಹಲಕ್ಷ್ಮೀ ಹಣದಲ್ಲಿ ಎತ್ತು ಖರೀದಿಸಿದ ಮಹಿಳೆ: ಸಿದ್ದರಾಮಯ್ಯ ಸರ್ಕಾರಕ್ಕೆ ಕೃತಜ್ಞತೆ