ನಾಗ್ಪುರ(ಮಹಾರಾಷ್ಟ್ರ): ದೇಶದ ಹಲವೆಡೆ ಬೆಂಕಿ ಅವಘಡಗಳು ವರದಿಯಾಗುತ್ತಿದ್ದು, ಗುರುವಾರ ಮತ್ತೊಂದು ಅಗ್ನಿ ದುರಂತ ಸಂಭವಿಸಿತು. ಮಹಾರಾಷ್ಟ್ರದ ನಾಗ್ಪುರದಲ್ಲಿ ಗನ್‌ಪೌಡರ್ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ದುರ್ಘಟನೆಯಲ್ಲಿ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಾಗ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿನ ಧಮನ ಪ್ರದೇಶದಲ್ಲಿ ಚಾಮುಂಡಾ ಸ್ಫೋಟಕ ಕಾರ್ಖಾನೆ ಇದ್ದು, ಗನ್‌ಪೌಡರ್ ತಯಾರಿಸಲಾಗುತ್ತಿತ್ತು. ನಿಗದಿತ ಸಮಯಕ್ಕೆ ಕೆಲಸಗಾರರು ತಮ್ಮ ತಮ್ಮ ಕಾರ್ಯಗಳಲ್ಲಿ ನಿರತರಾಗಿದ್ದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ಯಾಕೇಜಿಂಗ್ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ವಲ್ಪ ಸಮಯದ ನಂತರ ದೊಡ್ಡ ಸದ್ದಿನೊಂದಿಗೆ ಸ್ಫೋಟ ಸಂಭವಿಸಿದೆ.
ಇದರಿಂದ ಸ್ಥಳದಲ್ಲೇ 6 ಮಂದಿ ಕಾರ್ಮಿಕರು ಕೆನ್ನಾಲಿಗೆಗೆ ಸಿಲುಕಿ ಸಾವಿಗೀಡಾಗಿದ್ದಾರೆ. ಸ್ಫೋಟದ ಸಮಯದಲ್ಲಿ ಕಾರ್ಖಾನೆಯ ಒಳಗೆ 10 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸ್ಫೋಟದ ತೀವ್ರತೆಗೆ ಕಾರ್ಖಾನೆಯಲ್ಲಿದ್ದ ವಸ್ತುಗಳು ಹೊರಗಡೆ ಹಾರಿ ಬಿದ್ದಿವೆ. ಶವಗಳೂ ಕೂಡ ಗಾಳಿಯಲ್ಲಿ ತೂರಿಬಂದಿವೆ ಎಂದು ಹೇಳಲಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ಹಿಂಗಾಣ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ತೀವ್ರ ಗಾಯಗೊಂಡಿರುವ ನಾಲ್ವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಕಿಗೆ ಕಾರಣ ತಿಳಿದಿಲ್ಲ: ಸ್ಫೋಟದಿಂದ ಇಡೀ ಕಾರ್ಖಾನೆಗೆ ಬೆಂಕಿ ಹೇಗೆ ಹೊತ್ತಿಕೊಂಡಿದೆ. ಆರಂಭದಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಭೀಕರ ಅಗ್ನಿದುರಂತ: ಒಂದೇ ಕುಟುಂಬದ ಐವರು ಸಜೀವ ದಹನ, ಇಬ್ಬರು ಆಸ್ಪತ್ರೆಗೆ ದಾಖಲು - died 5 member of one family