ಅಮರಾವತಿ (ಆಂಧ್ರಪ್ರದೇಶ): ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಒಟ್ಟು 11 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಕೃಷ್ಣಾ, ತಿರುಪತಿ, ಕಾಕಿನಾಡ ಮತ್ತು ಅನಕಾಪಲ್ಲಿ ಜಿಲ್ಲೆಗಳಲ್ಲಿ ಅಪಘಾತ ಸಂಭವಿಸಿದ್ದು, ಒಟ್ಟು 11 ಮಂದಿ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.
ಕೃಷ್ಣಾ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ: ಕೃಷ್ಣಾ ಜಿಲ್ಲೆಯ ಬಾಪುಲಪಾಡು ತಾಲೂಕಿನ ಕೋಡೂರುಪಾಡು ಎಂಬಲ್ಲಿ ಇಂದು ಬೆಳಗ್ಗೆ ರಸ್ತೆ ಅಪಘಾತ ಸಂಭವಿಸಿದೆ. ಮಂಗಳಗಿರಿಯಿಂದ ವಿಶಾಖಪಟ್ಟಣಂ ಕಡೆಗೆ ಕೂಲ್ಡ್ರಿಂಕ್ಸ್ ಸಾಗಿಸುತ್ತಿದ್ದ ಟ್ರಾಲಿ ಲಾರಿ ಚೆನ್ನೈ - ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊವ್ವೂರಿನಿಂದ ತಮಿಳುನಾಡಿಗೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಮೊದಲು ಡಿವೈಡರ್‌ಗೆ ಡಿಕ್ಕಿ ಹೊಡೆದು ಮುಂದೆ ಬರುತ್ತಿದ್ದ ಟ್ರಾಲಿಗೆ ಗುದ್ದಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಕಾರಿನಿಂದ ಕೆಳಗಿಳಿಸಿ ವಿಜಯವಾಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ತಮಿಳುನಾಡು ನಿವಾಸಿಗಳು ಎಂದು ಗುರುತಿಸಲಾಗಿದೆ. ಸ್ವಾಮಿನಾಥನ್ ಅವರು ಕೊವ್ವೂರಿನಿಂದ ಫೈನಾನ್ಸ್ ವ್ಯವಹಾರ ಮಾಡಿ ವಾಪಸ್ ಆಗುತ್ತಿದ್ದರು ಎಂದು ವೀರವಳ್ಳಿ ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಮೃತರು ಸ್ವಾಮಿನಾಥನ್ (35), ರಾಕೇಶ್ (12), ರಾಧಾ ಪ್ರಿಯಾ (14), ಗೋಪಿ (31) ಎಂದು ಗುರುತಿಸಲಾಗಿದೆ. ಸತ್ಯ (30) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ವಿಜಯವಾಡ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಹೆದ್ದಾರಿ ಗಸ್ತು ಸಿಬ್ಬಂದಿ ಕಾರನ್ನು ಪಕ್ಕಕ್ಕೆ ಎಳೆದರು.
ತಿರುಪತಿಯಲ್ಲಿ ಪ್ರತ್ಯೇಕ ಅಪಘಾತ, ನಾಲ್ವರು ಸಾವು: ತಿರುಪತಿ ಜಿಲ್ಲೆಯ ಚಂದ್ರಗಿರಿ ತಾಲೂಕಿನ ಪುತಲಪಟ್ಟು ನಾಯ್ಡುಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿವೆ. ತಿರುಪತಿಯಿಂದ ಚಿತ್ತೂರಿಗೆ ತೆರಳುತ್ತಿದ್ದ ಕಾರು ಸಿ.ಮಲ್ಲಾವರಂನಲ್ಲಿ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರು ಹೊತ್ತಿ ಉರಿದಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದೇ ಮಾರ್ಗದ ಎಂ.ಕೊಂಗರವಾರಿಪಲ್ಲಿಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನೆಲ್ಲೂರಿನಿಂದ ವೆಲ್ಲೂರು ಸಿಎಂಸಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಎಂ.ಕೊಂಗರವಾರಿಪಲ್ಲಿ ಎಂಬಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಜನರಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪೊಲೀಸರಿಗೆ ಕಾರಿನಿಂದ ಕೇವಲ ಒಂದು ದೇಹವನ್ನು ಮಾತ್ರ ಹೊರತೆಗೆಯಲು ಸಾಧ್ಯವಾಗಿದೆ. ಇನ್ನೂ ಮೂರು ಶವಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ತಿರುಪತಿ ರುಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಹೇಳುವ ಪ್ರಕಾರ, ಚಾಲಕರು ನಿದ್ರಾಹೀನರಾಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಸಂಚಾರಕ್ಕೆ ತೊಂದರೆಯಾಗದಂತೆ ಚಂದ್ರಗಿರಿ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ ಎಂದು ಸಿಐ ಶ್ರೀರಾಮುಲು ತಿಳಿಸಿದ್ದಾರೆ.
ಕಾರಿಗೆ ಬಸ್ ಡಿಕ್ಕಿ: ಕಾಕಿನಾಡ ಜಿಲ್ಲೆಯ ಜಗ್ಗಂಪೇಟ ತಾಲೂಕಿನ ರಾಮಾವರಂನಲ್ಲಿ ಖಾಸಗಿ ಟ್ರಾವೆಲ್ ಬಸ್‌ಗೆ ಕಾರು ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ನಿವೃತ್ತ ನ್ಯಾಯಾಧೀಶರಾದ ವಿ.ಮೋಹನಕುಮಾರ್ ಮತ್ತು ಶ್ರೀನು ಎಂದು ಪೊಲೀಸರು ಗುರುತಿಸಿದ್ದಾರೆ. ಮೋಹನ್ ಕುಮಾರ್ ಅವರು ಪ್ರಸ್ತುತ ಎಪಿ ರೇರಾ ತೀರ್ಪುಗಾರರಾಗಿ ಮುಂದುವರಿದಿದ್ದರು.
ವ್ಯಕ್ತಿ ಸಾವು: ಅನಕಪಲ್ಲಿ ಜಿಲ್ಲೆಯ ನ್ಯಾಯಂಪುಡಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಅಪಘಾತ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಚಂದ್ರಬಾಬು ನಾಯ್ಡು ಸಂತಾಪ: ರಸ್ತೆ ಅಪಘಾತದಲ್ಲಿ 11 ಮಂದಿ ಸಾವನ್ನಪ್ಪಿರುವ ಬಗ್ಗೆ ತೆಲುಗು ದೇಶಂ ನಾಯಕ ಚಂದ್ರಬಾಬು ಅವರು ಸಂತಾಪ ಸೂಚಿಸಿದ್ದಾರೆ. ತಿರುಪತಿ ಜಿಲ್ಲೆಯ ಎಂ.ಕೊಂಗವರಂ, ಕೃಷ್ಣಾ ಜಿಲ್ಲೆಯ ಕೋಡೂರುಪಾಡು ಮತ್ತು ಕಾಕಿನಾಡ ಜಿಲ್ಲೆಯ ರಾಯವರಂನಲ್ಲಿ ಸಂಭವಿಸಿದ ಅಪಘಾತಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಮೃತರ ಕುಟುಂಬಕ್ಕೆ ಸರ್ಕಾರ ನೆರವು ನೀಡಬೇಕು ಎಂದು ಮನವಿ ಮಾಡಿದರು. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಓದಿ:ರಾಜ್ಯದಲ್ಲಿ 24 ಗಂಟೆಗಳಲ್ಲಿ 51 ಸಾವು: ಸುರಕ್ಷಿತ ವಾಹನ ಚಾಲನೆಗೆ ಎಡಿಜಿಪಿ ಅಲೋಕ್ ಕುಮಾರ್ ಸಲಹೆ - ADGP Alok Kumar