ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಜಂಟಿ ಶೋಧ ಕಾರ್ಯಾಚರಣೆ ವೇಳೆ ಭದ್ರತಾ ಪಡೆ ಸಿಬ್ಬಂದಿ ಮತ್ತು ಜಮ್ಮು ಹಾಗೂ ಕಾಶ್ಮೀರ ಪೊಲೀಸರು ಮೂವರು ಭಯೋತ್ಪಾದಕರನ್ನು ಬಂಧಿಸಿದ್ದಾರೆ.
ಖೈಮೋಹ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 13, 18 ಮತ್ತು 39 ಯುಎಪಿಎ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಹಾಗೂ ಕಾಶ್ಮೀರ ಪೊಲೀಸರು, 1ಆರ್ಆರ್ ಸೇನೆ, ಸಿಆರ್ಪಿಎಫ್ 18 ಬೆಟಾಲಿಯನ್ ಜೊತೆ ಸೇರಿ ಕುಲ್ಗಾಮ್ನಲ್ಲಿ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ನಿಷೇಧಿತ ಭಯೋತ್ಪಾದಕ ಸಂಘಟನೆ 'ಲಷ್ಕರ್-ಎ-ತೋಯ್ಬಾ' (LET) ಮತ್ತು 'ದಿ ರೆಸಿಸ್ಟೆನ್ಸ್ ಫ್ರಂಟ್' (TRF) ಜೊತೆಗೆ ಸಂಬಂಧ ಹೊಂದಿರುವ ಮೂವರು ಭಯೋತ್ಪಾದಕರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತರನ್ನು ಉಬೈದ್ ಖುರ್ಷೀದ್ ಮಿರ್, ಮಕ್ಸೂದ್ ಅಹ್ಮದ್ ಭಟ್ ಹಾಗೂ ಉಮರ್ ಬಶೀರ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಥೋಕರ್ಪೋರಾ ಖೈಮೋಹ್ ನಿವಾಸಿಗಳು.
ಬಂಧಿತರಿಂದ 2 ಎಕೆ ರೈಫಲ್ಗಳು, 8 ಎಕೆ ಮ್ಯಾಗಜಿನ್ಗಳು, 217 ಎಕೆ ರೌಂಡ್ಸ್, 5 ಹ್ಯಾಂಡ್ ಗ್ರೆನೇಡ್‌ಗಳು ಹಾಗೂ 2 ಮ್ಯಾಗಜೀನ್ ಪೌಚ್ಗಳು ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭದ್ರತಾ ಪಡೆಗಳು ನೀಡಿದ ಮಾಹಿತಿ ಪ್ರಕಾರ, ಬಂಧಿತ ಭಯೋತ್ಪಾದಕರರು ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿ ಮತ್ತು ಟಿಆರ್‌ಎಫ್‌ನ ಸಕ್ರಿಯ ಭಯೋತ್ಪಾದಕರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. ಮತ್ತು ಕುಲ್ಗಾಮ್ ಜಿಲ್ಲೆಯಲ್ಲಿ ಪ್ರಮುಖ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಯೋಜಿಸುತ್ತಿದ್ದರು.
ಇದನ್ನೂ ಓದಿ: ಸುಕ್ಮಾ ಎನ್ಕೌಂಟರ್ನಲ್ಲಿ ಮೂವರು ನಕ್ಸಲರು ಹತ; ಡಿಸಿಎಂ ವಿಜಯ್ ಶರ್ಮಾ