ನವದೆಹಲಿ: ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (VVPAT) ಮೂಲಕ ವಿದ್ಯುನ್ಮಾನ ಮತಯಂತ್ರ (EVM)ಗಳನ್ನು ಬಳಸಿ ಚಲಾವಣೆಯಾದ ಎಲ್ಲ ಮತಗಳನ್ನು ಪರಿಶೀಲಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಬುಧವಾರ (ಇಂದು) ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ನ್ಯಾಯಾಲಯವು ಈ ವಿಷಯದಲ್ಲಿ ಭಾರತ ಚುನಾವಣಾ ಆಯೋಗದಿಂದ ಕೆಲವು ಸ್ಪಷ್ಟೀಕರಣ ಕೇಳಿದ್ದು ಇಂದು ಮಧ್ಯಾಹ್ನ 2 ಗಂಟೆಗೆ ಉತ್ತರ ನೀಡುವಂತೆ ಚುನಾವಣಾ ಆಯೋಗದ ಅಧಿಕಾರಿಗೆ ಸೂಚಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಕೆಲ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್ ಕೇಳಿದ್ದು, ಕಂಟ್ರೋಲ್ ಯೂನಿಟ್‌ನಲ್ಲಿ ಮೈಕ್ರೋ ಕಂಟ್ರೋಲರ್ ಅಳವಡಿಸಲಾಗಿದೆಯೇ ಅಥವಾ ವಿವಿಪಿಎಟಿಯಲ್ಲಿ ಅಳವಡಿಸಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಈ ಮೈಕ್ರೋ ಕಂಟ್ರೋಲರ್‌ಗಳನ್ನು ಒಮ್ಮೆ ಮಾತ್ರ ಪ್ರೋಗ್ರಾಮ್ ಮಾಡಲಾಗಿದೆಯೇ ಅಥವಾ ಅವುಗಳಲ್ಲಿ ಬದಲಾವಣೆಗಳನ್ನು ಮಾಡಬಹುದೇ?, ಇವಿಎಂನಲ್ಲಿ ಅಳವಡಿಸಲಾಗಿರುವ ಮೈಕ್ರೋ ಕಂಟ್ರೋಲರ್‌ನ ಕಾರ್ಯ ಪ್ರಕ್ರಿಯೆ ಬಗ್ಗೆ ವಿವರಿಸುವಂತೆ, ಇವಿಎಂ ಯಂತ್ರಗಳನ್ನು ಎಷ್ಟು ದಿನ ಇಟ್ಟುಕೊಳ್ಳಬಹುದಾಗಿದೆ ಎಂಬ ಪ್ರಶ್ನೆಗಳನ್ನು ಕೇಳಿದ್ದು, ಇದಕ್ಕೆ ಮಧ್ಯಾಹ್ನ ಉತ್ತರಿಸುವಂತೆ ತಿಳಿಸಿದೆ.
ಇದಕ್ಕೂ ಮುನ್ನ ಏಪ್ರಿಲ್ 18 ರಂದು ಸುಪ್ರೀಂ ಕೋರ್ಟ್‌ನಲ್ಲಿ ಇವಿಎಂ - ವಿವಿಪ್ಯಾಟ್ ಪ್ರಕರಣದ ವಿಚಾರಣೆ ನಡೆದಿತ್ತು. ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ದ್ವಿಸದಸ್ಯ ಪೀಠ ತೀರ್ಪನ್ನು ಕಾಯ್ದಿರಿಸಿತ್ತು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ವಿವರವಾಗಿ ನ್ಯಾಯಾಲಯಕ್ಕೆ ವಿವರಿಸುವಂತೆ ಚುನಾವಣೆ ಆಯೋಗಕ್ಕೆ ಕೋರ್ಟ್ ತಿಳಿಸಿತ್ತು.
ಏನಿದು ವಿವಿಪ್ಯಾಟ್?: ಚುನಾವಣಾ ಅಕ್ರಮಗಳನ್ನು ತಡೆಯಲು ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸಲು ವಿವಿಪ್ಯಾಟ್ ಪರಿಚಯಿಸಲಾಗಿದೆ. ವಿವಿಪ್ಯಾಟ್ ಎಂದು ಕರೆಯಲ್ಪಡುವ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ ಮತ ಪರಿಶೀಲನಾ ವ್ಯವಸ್ಥೆಯಾಗಿದ್ದು, ಇದರಲ್ಲಿ ಮತದಾರನು ತನ್ನ ಮತವನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದಾಗಿದೆ.
ಇದನ್ನೂ ಓದಿ: VVPATನಲ್ಲಿ ಮತ ಸರಿಯಾಗಿ ಅಚ್ಚಾಗುತ್ತದೆಯೇ?: ಪರಿಶೀಲನಾ ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್ - vvpat