ನವದೆಹಲಿ: ಸಂದೇಶಖಾಲಿ ಪ್ರಕರಣದಲ್ಲಿ ಕೆಲ ಖಾಸಗಿ ವ್ಯಕ್ತಿಗಳ ಹಿತಾಸಕ್ತಿ ಕಾಪಾಡಲು ಪಶ್ಚಿಮ ಬಂಗಾಳ ಸರ್ಕಾರವೇಕೆ ಅರ್ಜಿದಾರನಾಗಿ ತನ್ನ ಮುಂದೆ ಬಂದಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಆಶ್ಚರ್ಯ ವ್ಯಕ್ತಪಡಿಸಿದೆ. ಸಂದೇಶ ಖಾಲಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಮತ್ತು ಭೂ ಕಬಳಿಕೆ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದ ಕಲ್ಕತ್ತಾ ಹೈಕೋರ್ಟ್ನ ಏಪ್ರಿಲ್ 10 ರ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
"ಕೆಲ ಖಾಸಗಿ ವ್ಯಕ್ತಿಗಳ ಹಿತಾಸಕ್ತಿಯನ್ನು ರಕ್ಷಿಸಲು ರಾಜ್ಯವೇಕೆ ಅರ್ಜಿದಾರರಾಗಿ ಇಲ್ಲಿಗೆ ಬರಬೇಕು?" ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ನ್ಯಾಯಪೀಠ ಪ್ರಶ್ನಿಸಿತು.
ರಾಜ್ಯದ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ ಮನು ಸಿಂಘ್ವಿ, ಹೈಕೋರ್ಟ್ ತನ್ನ ಆದೇಶದಲ್ಲಿ ಮಾಡಿದ ಕೆಲವು ಟಿಪ್ಪಣಿಗಳಿಂದ ರಾಜ್ಯವು ಅಸಮಾಧಾನಗೊಂಡಿದೆ ಎಂದು ಹೇಳಿದರು. "ರಾಜ್ಯ ಸರ್ಕಾರವು ಪ್ರಕರಣದಲ್ಲಿ ಎಲ್ಲ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರೂ ಆ ಬಗ್ಗೆ ಹೈಕೋರ್ಟ್ ಮಾಡಿದ ಕೆಲ ಟಿಪ್ಪಣಿಗಳು ಅನ್ಯಾಯಕರವಾಗಿವೆ" ಎಂದು ವಕೀಲರು ಹೇಳಿದರು.
ರಾಜ್ಯವು ಕೆಲ ಮಾಹಿತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಬಯಸುವುದರಿಂದ ಒಂದೆರಡು ವಾರಗಳ ಕಾಲ ಸಮಯ ನೀಡುವಂತೆ ಕೇಳಿದರು. ನಂತರ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಜುಲೈಗೆ ಮುಂದೂಡಿತು. ಹೈಕೋರ್ಟ್ ಆದೇಶದಿಂದ ಪೊಲೀಸ್ ಇಲಾಖೆ ಸೇರಿದಂತೆ ಇಡೀ ರಾಜ್ಯದ ಆಡಳಿತ ಯಂತ್ರದ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದೆ.
"ಯಾವುದೇ ಷರತ್ತುಗಳಿಲ್ಲದೆ ಸಿಬಿಐಗೆ ಅಗತ್ಯವಾದ ಬೆಂಬಲ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದು ಸಂದೇಶಖಾಲಿ ಪ್ರದೇಶದಲ್ಲಿ ಯಾವುದೇ ಅಪರಾಧ ಪ್ರಕರಣದ ತನಿಖೆ ನಡೆಸುವ ರಾಜ್ಯ ಪೊಲೀಸರ ಅಧಿಕಾರವನ್ನು ಮೊಟಕುಗೊಳಿಸುತ್ತದೆ." ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಂದೇಶಖಾಲಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣದ ತನಿಖೆಯನ್ನು ಸಿಬಿಐ ಈಗಾಗಲೇ ನಡೆಸುತ್ತಿದೆ ಮತ್ತು ಜನವರಿ 5 ರಂದು ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಮೂರು ಎಫ್ಐಆರ್ಗಳನ್ನು ದಾಖಲಿಸಿದೆ. ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಪಡಿತರ ವಿತರಣಾ ಹಗರಣಕ್ಕೆ ಸಂಬಂಧಿಸಿದಂತೆ ಶೇಖ್ ಅವರ ಮನೆಯ ಮೇಲೆ ದಾಳಿ ನಡೆಸಲು ಇಡಿ ಅಧಿಕಾರಿಗಳು ಸಂದೇಶಖಾಲಿಗೆ ಹೋಗಿದ್ದರು.