ನವದೆಹಲಿ: ಸಂದೇಶ್ ಖಾಲಿಯಲ್ಲಿ ಸಿಬಿಐ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಜನರನ್ನು ಹೆದರಿಸುವ ಮತ್ತು ಬೆದರಿಕೆ ಹಾಕುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಹೊರಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ತಮ್ಮ ಹೇಳಿಕೆಯ ಪ್ರಕಟಣೆ ನೀಡಿರುವ ನಡ್ಡಾ, ರಾಜ್ಯದ 42 ಲೋಕಸಭಾ ಸ್ಥಾನಗಳ ಪೈಕಿ 35ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ತೃಣಮೂಲ ಕಾಂಗ್ರೆಸ್ನ ಮುಖಂಡ ಶಹಜಹಾನ್ ಶೇಖ್ ಮತ್ತು ಅವರ ಸಹಚರರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂದೇಶ್ ಖಾಲಿ ಮಹಿಳೆಯರ ಪರವಾಗಿ ನಿಲ್ಲುವುದಾಗಿ ಅವರು ತಿಳಿಸಿದರು.
ಈಗ ಟಿಎಂಸಿಯಿಂದ ಅಮಾನತುಗೊಂಡಿರುವ ಶೇಖ್ ಸದ್ಯ ಕೇಂದ್ರ ತನಿಖಾ ದಳ (ಸಿಬಿಐ) ವಶದಲ್ಲಿದ್ದಾರೆ. ಶೇಖ್ ವಿರುದ್ಧ ಸ್ಥಳೀಯರು ಭೂಕಬಳಿಕೆಯ ಆರೋಪ ಕೂಡ ಮಾಡಿದ್ದಾರೆ. ಶೇಖ್ ಅವರ ಸಹಚರರೊಬ್ಬರಿಗೆ ಸೇರಿದ ಎರಡು ಸ್ಥಳಗಳಲ್ಲಿ ಶೋಧ ನಡೆಸಿದ ಸಿಬಿಐ ಶುಕ್ರವಾರ ಪೊಲೀಸ್ ಸೇವಾ ರಿವಾಲ್ವರ್ ಮತ್ತು ವಿದೇಶಿ ನಿರ್ಮಿತ ಬಂದೂಕುಗಳು ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.
ಶೇಖ್ ಅವರಿಂದ ಪ್ರಚೋದಿಸಲ್ಪಟ್ಟ ಜನರ ಗುಂಪೊಂದು ಜನವರಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತಂಡದ ಮೇಲೆ ದಾಳಿ ನಡೆಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಲವೆಡೆ ಶೋಧ ನಡೆಸಿದೆ.
ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಡ್ಡಾ, "ಮಮತಾ ಬ್ಯಾನರ್ಜಿ ಜನರನ್ನು ಹೆದರಿಸುವ ಮತ್ತು ಬೆದರಿಕೆ ಹಾಕುವ ಮೂಲಕ ಚುನಾವಣೆಯಲ್ಲಿ ಗೆಲ್ಲುತ್ತಾರೆಯೇ? ಈ ಮೂಲಕ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ಅವರು ಭಾವಿಸಿದರೆ ಅದು ದೊಡ್ಡ ತಪ್ಪು. ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಹೇಳಿದರು.
ಸಂದೇಶ್ ಖಾಲಿ ಸಂತ್ರಸ್ತೆಯನ್ನು ತನ್ನ ಲೋಕಸಭಾ ಅಭ್ಯರ್ಥಿಗಳಲ್ಲಿ ಒಬ್ಬರನ್ನಾಗಿ ಕಣಕ್ಕಿಳಿಸುವ ಮೂಲಕ ಬಿಜೆಪಿ ಮಹಿಳಾ ಸಬಲೀಕರಣಕ್ಕೆ ತನ್ನ ಬೆಂಬಲ ನೀಡಿದೆ ಎಂದು ನಡ್ಡಾ ಹೇಳಿದ್ದಾರೆ. ಸಂದೇಶ್ ಖಾಲಿ ಸಂತ್ರಸ್ತರು ಏಕಾಂಗಿಯಲ್ಲ ಮತ್ತು ಇಡೀ ದೇಶವು ಅವರೊಂದಿಗೆ ಒಗ್ಗಟ್ಟಾಗಿ ನಿಲ್ಲಲಿದೆ ಎಂದು ಅವರು ಹೇಳಿದರು.
ಸಂದೇಶ್ ಖಾಲಿಯಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಬ್ಯಾನರ್ಜಿ ಶನಿವಾರ ಹೇಳಿದ್ದಾರೆ ಮತ್ತು ಸಿಬಿಐ ತಂಡಗಳು ರಾಜ್ಯ ಪೊಲೀಸರನ್ನು ವಿಶ್ವಾಸಕ್ಕೆ ಪಡೆಯದೆ ಶೋಧ ನಡೆಸಿವೆ ಎಂದು ಆರೋಪಿಸಿದ್ದಾರೆ.