ಲಖಿಸರಾಯ್, ಬಿಹಾರ: ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಜಿಲ್ಲೆಯ ರಾಮ್‌ಗಢ ಪೊಲೀಸ್ ಠಾಣೆ ಚೌಕ್ ವ್ಯಾಪ್ತಿಯ ಝಲೌನಾ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-30ರಲ್ಲಿ ಈ ಅಪಘಾತ ಸಂಭವಿಸಿದೆ. ಟ್ರಕ್ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ 9 ಜನರು ಸಾವನ್ನಪ್ಪಿದ್ದು, ಸುಮಾರು 18ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಲಖಿಸರಾಯ್‌ನಲ್ಲಿ ರಸ್ತೆ ಅಪಘಾತ: ಮಾಹಿತಿ ಪ್ರಕಾರ ಡಿಕ್ಕಿಯ ರಭಸಕ್ಕೆ ಆಟೋ ಹಲವು ಮೀಟರ್ಗಳ ದೂರದಷ್ಟು ಹಾರಿ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಆ ಆಟೋದಲ್ಲಿ 14 ಮಂದಿ ಪ್ರಯಾಣಿಸುತ್ತಿದ್ದು, ಇದರಲ್ಲಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಈ ವೇಳೆ, ಓರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, 18 ಜನ ಗಾಯಗೊಂಡಿದ್ದಾರೆ. 18 ಜನರ ಪೈಕಿ 5 ಜನರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆ ಅವರನ್ನು ಉತ್ತಮ ಚಿಕಿತ್ಸೆಗಾಗಿ ಲಖಿಸರಾಯಿಯಿಂದ ಪಿಎಂಸಿಎಚ್‌ಗೆ ಕಳುಹಿಸಲಾಯಿತು.
ಮೃತರ ಗುರುತು ಪತ್ತೆಗೆ ನಿರತ ಪೊಲೀಸರು: ಮೃತರಲ್ಲಿ ಒಬ್ಬರನ್ನು ಆಟೋ ಚಾಲಕ ಮನೋಜ್ ಕುಮಾರ್ ಎಂದು ಗುರುತಿಸಲಾಗಿದ್ದು, 8 ಜನರು ಮುಂಗೇರ್ ಮತ್ತು ಲಖಿಸರಾಯ್ ನಿವಾಸಿಗಳು ಎಂದು ಹೇಳಲಾಗಿದೆ. ಸದ್ಯ ಜಿಲ್ಲಾ ಎಸ್ಪಿ ಪಂಕಜ್ ಕುಮಾರ್ ಮತ್ತು ನಗರಸಭಾ ಠಾಣಾ ಅಧ್ಯಕ್ಷ ದಲ್ಬಾಲ್ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಮೃತರನ್ನು ಗುರುತಿಸುವ ಕಾರ್ಯ ಆರಂಭಿಸಿದ್ದಾರೆ. ಘಟನೆಯ ನಂತರ ಎಲ್ಲರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗುತ್ತಿದೆ.
"ರಾತ್ರಿ 1:30 ರ ಸುಮಾರಿಗೆ ಘಟನೆ ಸಂಭವಿಸಿದೆ. ವೇಗವಾಗಿ ಬಂದ ವಾಹನ ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿದೆ ಎಂಬ ಮಾಹಿತಿ ಸಿಕ್ಕಿತು, ನಂತರ ನಾವು ತಲುಪಿ ಶವವನ್ನು ಸ್ವಾಧೀನಪಡಿಸಿಕೊಂಡು ಗಾಯಾಳುಗಳನ್ನು ಚಿಕಿತ್ಸೆಗೆ ದಾಖಲಿಸಿದ್ದೇವೆ. ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. ಮೃತರನ್ನು ಗುರುತಿಸುವಲ್ಲಿ ನಾವು ನಿರತರಾಗಿದ್ದೇವೆ. ಎಲ್ಲರೂ ಬೇರೆ ಬೇರೆ ಸ್ಥಳಗಳ ನಿವಾಸಿಗಳು ಎಂದು ನಗರ ಪೊಲೀಸ್ ಠಾಣೆ ಪ್ರಭಾರಿ ಕಮ್ ಇನ್ಸ್‌ಪೆಕ್ಟರ್ ಅಮಿತ್ ಕುಮಾರ್ ತಿಳಿಸಿದರು.
'ಗಾಯಗೊಂಡವರೆಲ್ಲರ ಸ್ಥಿತಿ ಚಿಂತಾಜನಕ': ಈ ಕುರಿತು ಡಾ.ರಾಜ್ ಕುಮಾರ್ ಅವರು, 'ಆಟೋ ಮತ್ತು ಲಾರಿಯಲ್ಲಿ ಜನಸಂದಣಿ ಇತ್ತು. ಇದರಲ್ಲಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ವೇಳೆ ಒಬ್ಬರು ಮೃತಪಟ್ಟಿದ್ದಾರೆ. 5 ಜನರನ್ನು ಚಿಕಿತ್ಸೆಗಾಗಿ ಪಾಟ್ನಾಗೆ ಕಳುಹಿಸಲಾಗಿದೆ. ಗಾಯಗೊಂಡವರೆಲ್ಲರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದರು.
ಓದಿ: ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಕಾರು, ಪ್ರಾಣಾಪಾಯದಿಂದ ಆರು ಮಂದಿ ಪಾರು