ಜಮ್ಮು: ಸಹೋದರ-ಸಹೋದರಿಯರ ಬಾಂಧವ್ಯದ ರಕ್ಷಾ ಬಂಧನ ಹಬ್ಬಕ್ಕೆ ಒಂದೇ ದಿನ ಬಾಕಿಯಿದೆ. ಈ ಹಬ್ಬವು ಒಡಹುಟ್ಟಿದವರ ನಡುವಿನ ಪ್ರೀತಿಯ ಬಂಧವ್ಯದ ಸಂಕೇತವಾಗಿದೆ. ಈಗಾಗಲೇ ಹಲವೆಡೆ ಆಚರಣೆ ಶುರುವಾಗಿದ್ದು, ಜಮ್ಮು ಕಾಶ್ಮೀರದ ಅಖ್ನೂರ್ ಸೆಕ್ಟರ್‌ನಲ್ಲಿಯೂ ಕೂಡ ರಕ್ಷಾ ಬಂಧನ ಸಂಭ್ರಮ ಕಂಡುಬಂದಿದೆ.
ಸ್ಥಳೀಯ ಶಾಲಾ ಬಾಲಕಿಯರು ಯೋಧರಿಗೆ ರಾಖಿಗಳನ್ನು ಕಟ್ಟುವ ಮೂಲಕ ಸೈನಿಕರ ಮುಖದಲ್ಲಿ ನಗು ಮೂಡಿಸಿದರು. ಬಾಲಕಿಯರು ಸೈನಿಕ ಸಹೋದರರ ಹಣೆಗೆ ತಿಲಕವಿಟ್ಟು, ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರು. ಅಖ್ನೂರ್ ಸೆಕ್ಟರ್‌ನಲ್ಲಿ ವಿದ್ಯಾರ್ಥಿನಿಯರು ಹೃದಯಸ್ಪರ್ಶಿ ಕಾರ್ಯದಿಂದ ಗಮನ ಸೆಳೆದರು.
ರಕ್ಷಾ ಬಂಧನದಂದು ದೂರದ ಊರಿನಲ್ಲಿರುವ ಸಹೋದರರೂ ಕೂಡ ತಮ್ಮ ಸಹೋದರಿಯರಿಂದ ರಾಖಿ ಕಟ್ಟಿಸಿಕೊಳ್ಳಲು ಹಂಬಲಿಸುತ್ತಾರೆ. ಅಂದು ತಪ್ಪದೇ ತಮ್ಮ ಹುಟ್ಟೂರಿಗೆ ಆಗಮಿಸುತ್ತಾರೆ. ರಾಖಿಗೆ ಪ್ರತಿಯಾಗಿ, ಪ್ರೀತಿಯ ಒಡಹುಟ್ಟಿದವರಿಗೆ ಆಶೀರ್ವಾದ ಮತ್ತು ಉಡುಗೊರೆಗಳನ್ನು ನೀಡುತ್ತಾರೆ. ಆದರೆ, ಗಡಿ ನಿಯಂತ್ರಣ ರೇಖೆಯಲ್ಲಿ (LOC) ರಾಷ್ಟ್ರದ ಕಾವಲು ಕಾಯುತ್ತಿರುವ ಸೈನಿಕರು ಹಬ್ಬಗಳ ಸಮಯದಲ್ಲಿಯೂ ಮನೆಗೆ ಬರಲಾಗುವುದಿಲ್ಲ. ರಾಖಿಗಳನ್ನು ಕಟ್ಟುವಾಗ ಬಾಲಕಿಯರ ಕಂಗಳಲ್ಲಿ ಹೆಮ್ಮೆಯ ಭಾವನೆ ಮೂಡಿತ್ತು. ಸೈನಿಕರು ತಮ್ಮ ಕುಟುಂಬದ ಜೊತೆಗಿರದಿದ್ದರೂ ಕೂಡ, ಆ ಅನುಪಸ್ಥಿತಿಯನ್ನೆಲ್ಲ ಮರೆತು ರಕ್ಷಾ ಬಂಧನ ಆಚರಣೆಯಲ್ಲಿ ಭಾಗಿಯಾದರು.
ಹಿಂದೂ ಕ್ಯಾಲೆಂಡರ್‌ನಲ್ಲಿ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು (ಪೂರ್ಣಿಮಾ) ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಈ ಹಬ್ಬವು ಸಾಮಾನ್ಯವಾಗಿ ಆಗಸ್ಟ್ ತಿಂಗಳಿನಲ್ಲಿ ಬರುತ್ತದೆ. ಈ ವರ್ಷ, ಹಬ್ಬವನ್ನು ಸೋಮವಾರ, ಆಗಸ್ಟ್ 19, 2024ರಂದು ಆಚರಿಸಲಾಗುತ್ತಿದೆ.
ಹುಣ್ಣಿಮೆಯು ಆಗಸ್ಟ್ 19ರ ಮುಂಜಾನೆ 3.04ಕ್ಕೆ ಪ್ರಾರಂಭವಾಗಿ ಅದೇ ದಿನ ರಾತ್ರಿ 11.55ರ ವೇಳೆಗೆ ಕೊನೆಗೊಳ್ಳುತ್ತದೆ. ಸಹೋದರರ ಹಣೆಗೆ ರೋಲಿ ಅಥವಾ ಕುಂಕುಮ ಇಡುವುದರೊಂದಿಗೆ ಆಚರಣೆ ಪ್ರಾರಂಭವಾಗುತ್ತದೆ. ಬಳಿಕ ಆವರಿಗೆ ಸಹೋದರಿಯರೇ ಆರತಿ ಬೆಳಗುತ್ತಾರೆ. ನಂತರ, ಸಹೋದರಿಯರು ಸಹೋದರರ ಬಲ ಮಣಿಕಟ್ಟಿನ ಸುತ್ತ ರಾಖಿಯನ್ನು ಕಟ್ಟಿ ಆಶೀರ್ವಾದ ಪಡೆಯುತ್ತಾರೆ. ಅಣ್ತಮ್ಮಂದಿರ ಯೋಗಕ್ಷೇಮ, ಮನಃಶಾಂತಿ ಮತ್ತು ಸಮೃದ್ಧಿಗಾಗಿ ಸಹೋದರಿಯರು ದೇವರಲ್ಲಿ ಪ್ರಾರ್ಥಿಸುತ್ತಾರೆ.
ಇದನ್ನೂ ಓದಿ: ದಾನಕ್ಕಾಗಿ ಮಿಡಿಯುತ್ತಿರುವ 283 ಜನರ ಹೃದಯ: ಮರಣದ ನಂತರವೂ ಜೀವಿಸಲು ಇಲ್ಲಿದೆ ಮಾರ್ಗ! - organ donation