ದಾವಣಗೆರೆ : ವೈದ್ಯ ಡಾ. ಸುರೇಶ್ ಹನಗವಾಡಿ ಇಡೀ ಹಿಮೋಫಿಲಿಯಾ, ತಲಸ್ಸೇಮಿಯಾ ಪೀಡಿತರ ಬಾಳಿಗೆ ಆಶಾ ಕಿರಣ. ಅವರು ನಾಲ್ಕು ದಶಕಗಳಿಂದ ಹಿಮೋಫಿಲಿಯಾ ಪೀಡಿತರಿಗಾಗಿ ವಿಶೇಷ ಸೇವೆ ಕೂಡ ಸಲ್ಲಿಸುತ್ತಿದ್ದಾರೆ. ಅಲ್ಲದೇ ಹಿಮೋಫಿಲಿಯಾ, ತಲಸ್ಸೇಮಿಯಾ ಸೇರಿದಂತೆ ವಿರಳ ರಕ್ತಸ್ರಾವ ರೋಗಗಳಿಗೆ ಸಂಬಂಧಿಸಿದಂತೆ ಅತ್ಯುತ್ತಮ ಚಿಕಿತ್ಸಾ ಕೇಂದ್ರವನ್ನು ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ಸ್ಥಾಪಿಸಿ, ರೋಗಿಗಳಿಗೆ ಉಚಿತ ಚಿಕಿತ್ಸೆ ಕೊಟ್ಟು ಆರೈಕೆ ಮಾಡ್ತಿದ್ದಾರೆ.
ಈ ಸೇವೆ ಪರಿಗಣಿಸಿ ಕೇಂದ್ರ ಸರ್ಕಾರದಿಂದ ರಾಷ್ಟ್ರಪತಿ ಅವರು ಇವರಿಗೆ 'ಶ್ರೇಷ್ಠ ದಿವ್ಯಾಂಗನ್ ರಾಷ್ಟ್ರೀಯ ಪ್ರಶಸ್ತಿ' ನೀಡಿ ಇತ್ತೀಚಿಗೆ ಗೌರವಿಸಿದ್ದಾರೆ. ಇದೀಗ ವೈದ್ಯ ಡಾ. ಸುರೇಶ್ ಹನಗವಾಡಿ ಅವರಿಗೆ ರಾಷ್ಟ್ರಪತಿಗಳ ಕಚೇರಿಯಿಂದ ಔತಣಕೂಟಕ್ಕೆ ಆಹ್ವಾನ ಬಂದಿದ್ದು, ಔತಣಕೂಟದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಇಂದು ಸಂಜೆ ಅವರು ಪ್ರಯಾಣ ಬೆಳೆಸಿದ್ದಾರೆ.
ಹಿಮೋಫಿಲಿಯಾ, ತಲಸ್ಸೇಮಿಯಾ ರೋಗಿಗಳಿಗಾಗಿ 44 ವರ್ಷಗಳ ಸೇವೆ : ಹಿಮೋಫಿಲಿಯಾ, ತಲಸ್ಸೇಮಿಯಾ ರೋಗಿಗಳಲ್ಲಿ 44 ವರ್ಷಗಳವರೆಗೆ ಜಾಗೃತಿ ಮೂಡಿಸಿ, ಅವರಿಗಾಗಿ ವಿಶೇಷ ಸೇವೆ ಸಲ್ಲಿಸುತ್ತಿರುವ ಡಾ. ಸುರೇಶ್ ಹನಗವಾಡಿ ಅವರಿಗೆ ರಾಷ್ಟ್ರಪತಿ ಅವರ ಕಡೆಯಿಂದ ಔತಣಕೂಟಕ್ಕೆ ಆಹ್ವಾನ ಪತ್ರಿಕೆ ತಲುಪಿದೆ. ಈ ಔತಣಕೂಟದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸೇರಿ ದೇಶದ 528 ಗಣ್ಯರು ಜನವರಿ 26ರಂದು ಪಾಲ್ಗೊಳ್ಳಲಿದ್ದಾರೆ.
ರಾಷ್ಟ್ರಪತಿ ಭವನದಿಂದ ಕಳುಹಿಸಿದ ಆಹ್ವಾನ ಪತ್ರಿಕೆ ಜೊತೆ ಏನೆಲ್ಲಾ ಕಳುಹಿಸಲಾಗಿದೆ : ವೈದ್ಯ ಡಾ. ಸುರೇಶ್ ಹನಗವಾಡಿ ಅವರಿಗೆ ದೇಶದ ಸಂಸ್ಕೃತಿ ಹಾಗೂ ಸಂಪ್ರದಾಯ ಬಿಂಬಿಸುವ ವಿಶಿಷ್ಟ ರೀತಿಯ ಔತಣಕೂಟದ ಆಹ್ವಾನ ಪತ್ರಿಕೆ ಕಳುಹಿಸಲಾಗಿದೆ. ಅದರೊಂದಿಗೆ ಪ್ರವೇಶ ಪತ್ರ, ಕೋಟ್ಗೆ ವಿಶೇಷ ಬ್ಯಾಡ್ಜ್, ಪುಟ್ಟ ಗ್ರೀಟಿಂಗ್, ಎರಡು ಗೊಂಬೆಗಳು, ಹೀಗೆ ಹತ್ತಾರು ವಿಶೇಷತೆಗಳು ಇವೆ.
ವೈದ್ಯ ಸುರೇಶ್ ಹನಗವಾಡಿ ಹೇಳಿದ್ದಿಷ್ಟು? : "44 ವರ್ಷದ ಸೇವೆ ಗುರುತಿಸಿ ವಿಕಲಚೇತನರ ದಿನಾಚರಣೆ ದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 'ಶ್ರೇಷ್ಠ ದಿವ್ಯಾಂಗನ್ ರಾಷ್ಟ್ರೀಯ ಪ್ರಶಸ್ತಿ' ನೀಡಿ ಗೌರವಿಸಿದ್ದಾರೆ. ಅಲ್ಲದೇ ಇದೀಗ ರಾಷ್ಟ್ರಪತಿ ಭವನದಿಂದ ಔತಣಕೂಟಕ್ಕೆ ಆಹ್ವಾನಿಸಿ ವಿಶೇಷವಾದ ಆಹ್ವಾನ ಪತ್ರಿಕೆ ಕಳುಹಿಸಿದ್ದಾರೆ. ಈ ಭೋಜನ ಕೂಟಕ್ಕೆ ಆಹ್ವಾನ ಬಂದಿರುವುದು ಹಿಮೋಫಿಲಿಯಾ ಸಮುದಾಯಕ್ಕೆ ಗೌರವ ಸಿಕ್ಕಂತಾಗಿದೆ" ಎಂದರು.
ಇದನ್ನೂ ಓದಿ : ಮಾಜಿ ಸಚಿವ ಕಾಗೋಡು ತಿಮ್ಮಪ್ಪಗೆ ಒಂದೇ ದಿನ ಎರಡು ವಿವಿಯಿಂದ 2 ಗೌರವ ಡಾಕ್ಟರೇಟ್ ಪ್ರದಾನ - TWO DOCTORATE FOR KAGODU THIMMAPPA