ಮುಂಬೈ: ಮಹಾರಾಷ್ಟ್ರ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಇಂದಿನಿಂದ ರಾಜ್ಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ ಪ್ರಚಾರ ಆರಂಭಿಸಲಿದ್ದು, ನಾಗ್ಪುರ್ ಮತ್ತು ಮುಂಬೈನಲ್ಲಿ ಮಹಾ ವಿಕಾಸ್ ಅಗಡಿಯ ಪಕ್ಷಗಳಾದ ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್ಸಿಪಿ (ಎಸ್ಪಿ) ಬೃಹತ್ ಸಮಾವೇಶ ಆಯೋಜಿಸಿವೆ.
ನಾಗ್ಪುರದಲ್ಲಿ ಆಯೋಜಿಸಿರುವ 'ಸಂವಿಧಾನ್ ಸನ್ಮಾನ್ ಸಮ್ಮೇಳನ್'ನಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಪ್ರಚಾರ ನಡೆಸಲಿದ್ದಾರೆ.
ಇದಕ್ಕೂ ಮುನ್ನ ರಾಹುಲ್ ಗಾಂಧಿ ನಾಗ್ಪುರದಲ್ಲಿನ ದೀಕ್ಷಾಭೂಮಿಗೆ ಆಗಮಿಸಿ ಗೌರವ ನಮನ ಸಲ್ಲಿಸುವರು. ಇದೇ ಸ್ಥಳದಲ್ಲಿ 68 ವರ್ಷದ ಹಿಂದೆ 4 ಲಕ್ಷ ಅನುಯಾಯಿಗಳೊಂದಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬೌದ್ಧಧರ್ಮ ಸ್ವೀಕರಿಸಿದ್ದರು.
ಇದಾದ ಬಳಿಕ ಅವರು, ಕವಿವರ್ಯಾ ಸುರೇಶ್ ಭಟ್ ಸಭಾಂಗಣದಲ್ಲಿ ಗೌರವ ಸಂವಿಧಾನ ಸಭೆಯಲ್ಲಿ ಭಾಗಿಯಾಗಲಿದ್ದು, ಸಭಿಕರೊಂದಿಗೆ ಸಂವಾದ ನಡೆಸಲಿದ್ದಾರೆ.
ಮಧ್ಯಾಹ್ನ ಖರ್ಗೆ ಸೇರಿದಂತೆ ಇತರೆ ಪ್ರಮುಖ ನಾಯಕರ ಜೊತೆಗೆ ರಾಹುಲ್ ಮುಂಬೈಗೆ ಆಗಮಿಸಲಿದ್ದು, ಇಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ 'ಸ್ವಾಭಿಮಾನ ಸಭಾ'ದಲ್ಲಿ ಭಾಗಿಯಾಗುವರು. ಈ ಕಾರ್ಯಕ್ರಮ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ಅತುಲ್ ಲೊಂಧೆ ತಿಳಿಸಿದ್ದಾರೆ.
ಸಂಜೆ ರಾಹುಲ್ ಮಹಾರಾಷ್ಟ್ರ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಕುರಿತು ತಿಳಿಸಲಿದ್ದಾರೆ. ಈ ವೇಳೆ ಆಡಳಿತಾರೂಢ ಮಹಾಯುತಿ ಮೈತ್ರಿ ಸರ್ಕಾರದ ಭ್ರಷ್ಟಾಚಾರವನ್ನು ಪ್ರಸ್ತಾಪಿಸಲಿದ್ದಾರೆ ಎಂದು ಲೋಧೆ ಮಾಹಿತಿ ನೀಡಿದರು.
ಬಿಕೆಸಿ ಮೈದಾನದಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಖರ್ಗೆ, ರಾಹುಲ್ ಗಾಂಧಿ, ಶರದ್ ಪವರ್, ಉದ್ಧವ್ ಠಾಕ್ರೆ, ಜಯಂತ್ ಆರ್.ಪಾಟೀಲ್ ಸೇರಿದಂತೆ ಮೈತ್ರಿ ಪಕ್ಷದ ಇತರೆ ನಾಯಕರು ಭಾಗಿಯಾಗಲಿದ್ದಾರೆ.
ರಾಜ್ಯದಲ್ಲಿ ಎಂವಿಎ-ಇಂಡಿಯಾ ಒಕ್ಕೂಟದ ಮೊದಲ ಚುನಾವಣಾ ಪ್ರಚಾರ ಇಂದಿನಿಂದ ಆರಂಭವಾಗಲಿದ್ದು, ಚುನಾವಣೆ ಸಮೀಪಿಸುತ್ತಿದ್ದಂತೆ ಈ ರೀತಿಯ ಅನೇಕ ಮೈತ್ರಿ ಪ್ರಚಾರ ಕಾರ್ಯಕ್ರಮವನ್ನು ರಾಜ್ಯದ ಇತರೆ ಭಾಗಗಳಲ್ಲೂ ನಡೆಸಲಾಗುವುದು ಎಂದು ಪಕ್ಷದ ನಾಯಕರು ಹೇಳಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಎಲ್ಎಂವಿ ಲೈಸೆನ್ಸ್ ಹೊಂದಿರುವವರು ಸಾರಿಗೆ ವಾಹನ ಓಡಿಸಬಹುದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು