ನವದೆಹಲಿ: ಲೋಕಸಭೆ ಚುನಾವಣೆಯ ಆರನೇ ಹಂತದ ಮತದಾನ ಆರಂಭವಾಗಿದೆ. 7 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 58 ಕ್ಷೇತ್ರಗಳಿಗೆ ಜನರು ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಮತದಾನಕ್ಕೆ ಚುನಾವಣಾ ಆಯೋಗವು ಸಕಲ ಸಿದ್ಧತೆಗಳನ್ನು ಮಾಡಿದ್ದು, ಇಂದು ಸಂಜೆ 7 ಗಂಟೆವರೆಗೂ ವೋಟ್ ಮಾಡುವ ಅವಕಾಶ ಇದೆ.
ದೆಹಲಿಯ ಎಲ್ಲ 7 ಕ್ಷೇತ್ರಗಳು, ಬಿಹಾರದ 8, ಹರಿಯಾಣದ ಎಲ್ಲ 10 ಕ್ಷೇತ್ರ, ಜಾರ್ಖಂಡ್ನ 4, ಒಡಿಶಾದ 6, ಉತ್ತರ ಪ್ರದೇಶದ 14, ಪಶ್ಚಿಮ ಬಂಗಾಳದ 8, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಏಕೈಕ ಲೋಕಸಭಾ ಸ್ಥಾನಕ್ಕೆ ಮತದಾನ ಆರಂಭವಾಗಿದೆ.
ವಿದೇಶಾಂಗ ಸಚಿವ ಎಸ್.ಜೈಶಂಕರ್, ಹರಿಯಾಣ ಸಿಎಂ ನಯಾಬ್ ಸಿಂಗ್, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಹರಿಯಾಣದ ಮಾಜಿ ಸಿಎಂ ಮತ್ತು ಬಿಜೆಪಿ ಅಭ್ಯರ್ಥಿಯಾಗಿರುವ ಮನೋಹರ್ಲಾಲ್ ಖಟ್ಟರ್ ಅವರು ನಿಗದಿತ ಮತಕೇಂದ್ರಕ್ಕೆ ತೆರಳಿ ಮತದಾನ ಮಾಡಿದರು.
ಮತದಾನ ಮಾಡಿದ ನಂತರ ಮಾತನಾಡಿದ ಕರ್ನಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮನೋಹರ್ ಲಾಲ್ ಖಟ್ಟರ್ ಅವರು, "ನಾನು ಮತವನ್ನು ಚಲಾಯಿಸಿದ್ದೇನೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಲು ಜನರಲ್ಲಿ ಮನವಿ ಮಾಡುತ್ತೇನೆ. ಮೊದಲ ವೋಟರ್ ಆಗಿ ಅವರು ಮತ ನೀಡಿದರು.
ಮತದಾನಕ್ಕಾಗಿ ಪ್ರಧಾನಿ ಮೋದಿ ಮನವಿ: ನಡೆಯುತ್ತಿರುವ 6ನೇ ಹಂತದ ಮತದಾನದಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, 2024ರ ಲೋಕಸಭೆ ಚುನಾವಣೆಯ 6ನೇ ಹಂತದ ಚುನಾವಣೆಯಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ. ಜನರು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ಮತ್ತು ಸಕ್ರಿಯವಾಗಿದ್ದಾಗ ಪ್ರಜಾಪ್ರಭುತ್ವದ ಅಸ್ತಿತ್ವ ಬೆಳಗುತ್ತದೆ. ಮಹಿಳಾ ಮತದಾರರು ಮತ್ತು ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನಾನು ವಿಶೇಷವಾಗಿ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.
ಮೊದಲ ಮತ ನೀಡಿದ ಜೈಶಂಕರ್: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ದೆಹಲಿಯ ಮತಗಟ್ಟೆಯಲ್ಲಿ ಮೊದಲ ಮತದಾರರಾಗಿ ವೋಟ್ ಮಾಡಿದರು. ಬೆರಳಿಗೆ ಹಾಕಿದ ಶಾಯಿಯ ಗುರುತನ್ನು ತೋರಿಸಿ ಮಾತನಾಡಿದ ಅವರು, ನಾನು ಈಗಷ್ಟೇ ಮತ ಚಲಾಯಿಸಿದ್ದೇನೆ. ನಾನು ಈ ಬೂತ್ನಲ್ಲಿ ಮೊದಲ ಪುರುಷ ಮತದಾರನಾಗಿದ್ದೇನೆ. ಮತದಾನ ಮಾಡುವುದು ಪ್ರಜಾಪ್ರಭುತ್ವದಲ್ಲಿ ನಿರ್ಣಾಯಕವಾಗಲಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಬೇಕೆಂದು ನಾವು ಕೋರುತ್ತೇನೆ. ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.