ನವದೆಹಲಿ: ರಾಷ್ಟ್ರ ರಾಜಧಾನಿಯತ್ತ ದೆಹಲಿ ಚಲೋ ಕಾಲ್ನಡಿಗೆ ಮೆರವಣಿಗೆ ನಡೆಸುತ್ತಿರುವ ರೈತರನ್ನು ಶಂಭು ಗಡಿ ಬಳಿ ಇಂದು ಪೊಲೀಸರು ತಡೆದಿದ್ದು, ಗಡಿ ದಾಟಲು ಅನುಮತಿ ಇಲ್ಲ ಎಂದು ತಿಳಿಸಿದ್ದಾರೆ.
ಈ ವೇಳೆ ಬ್ಯಾರಿಕೇಡ್ ದಾಟಿ ಬಂದ ರೈತರು ದೆಹಲಿಯತ್ತ ತೆರಳಲು ಮುಂದಾದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಬಳಸಿದರು. ಈ ವೇಳೆ ಅನೇಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.
ಅಂಬಾಲದ ಜಿಲ್ಲಾಡಳಿತ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿ ಸೆಕ್ಷನ್ 163 ಜಾರಿ ಮಾಡಿದೆ. ಈ ವ್ಯಾಪ್ತಿಯಲ್ಲಿ ನಾಲ್ಕೈದು ಜನರಿಗಿಂತ ಹೆಚ್ಚು ಮಂದಿ ಗುಂಪುಗೂಡುವುದನ್ನು ನಿರ್ಬಂಧಿಸಿದೆ. ರೈತರು ಬ್ಯಾರಿಕೇಡ್ ದಾಟಿ ಮುಂದೆ ಹೋಗದಂತೆ ಹರಿಯಾಣ ಪೊಲೀಸರು ಪದೇ ಪದೇ ಸೂಚನೆ ನೀಡುತ್ತಿದ್ದಾರೆ. ಕೆಲವು ರೈತರು, ರೈತ ಸಂಘಟನೆ ಬಾವುಟ ಹಿಡಿದುಕೊಂಡು ಬ್ಯಾರಿಕೇಡ್ ತಳ್ಳಿ ಮುನ್ನುಗ್ಗುವ ಪ್ರಯತ್ನ ನಡೆಸಿದ್ದಾರೆ.
ಸ್ಥಳದಲ್ಲಿದ್ದ ಉಪ ಪೊಲೀಸ್ ಆಯುಕ್ತರು, ಗಡಿಯಲ್ಲಿ ಯಾವುದೇ ಕಾಲ್ನಡಿಗೆ, ವಾಹನ ಅಥವಾ ಇತರೆ ಮಾದರಿಯ ಮೆರವಣಿಗೆಗೆ ಅವಕಾಶವಿಲ್ಲ. ನೀವು ಗಡಿ ದಾಟಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಶಂಭು ಗಡಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ದೆಹಲಿ ಪೊಲೀಸ್ ಅಧಿಕಾರಿ ಮಾತನಾಡಿ, ಪಂಜಾಬ್ ರೈತರು ದೆಹಲಿ ಚಲೋಗೆ ಯಾವುದೇ ಅನುಮತಿ ಪಡೆದಿಲ್ಲ. ಅಂಬಾಲದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹರಿಯಾಣಗೆ ಪ್ರವೇಶ ಪಡೆಯುವ ಯಾವುದೇ ಅನುಮತಿ ಪತ್ರ ಅವರ ಬಳಿ ಇಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ರೈತ ನಾಯಕ ಸರ್ವನ್ ಸಿಂಗ್ ಪಂದೇರ್, ರೈತರಿಗೆ ದೆಹಲಿಯಲ್ಲಿ ಶಾಂತಿಯುತ ಮಾತುಕತೆಗೆ ಅವಕಾಶ ನೀಡಬೇಕು. ನಾವು ನಮ್ಮ ಬೇಡಿಕೆಗಳ ಕುರಿತು ಮಾತನಾಡುತ್ತೇವೆ. ಚರ್ಚೆಗೆ ರೈತರು ಸಿದ್ಧ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಸ್ವೀಕರಿಸಬೇಕು ಎಂದರು.
ಅಂಬಾಲದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ ಮಾಡಲಾಗಿದ್ದು ಬ್ಯಾಂಕಿಂಗ್, ಮೊಬೈಲ್ ರಿಚಾರ್ಜ್ ಸೇವೆ ಮಾತ್ರ ಲಭ್ಯವಿದೆ.
ಇದನ್ನೂ ಓದಿ: ದೆಹಲಿ ಚಲೋ ಪ್ರತಿಭಟನೆ: ಶಂಭು ಗಡಿ ಬಳಿ ಬಿಗಿ ಪೊಲೀಸ್ ಭದ್ರತೆ