ನವದೆಹಲಿ: ಲೋಕಸಭೆ ಚುನಾವಣೆ 2024ಕ್ಕೆ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಮತದಾನ ನಡೆಯುತ್ತಿರುವ 9 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 96 ಲೋಕಸಭಾ ಕ್ಷೇತ್ರಗಳಲ್ಲಿ 'ಸಾಮಾನ್ಯಕ್ಕಿಂತ ಸಾಮಾನ್ಯ ತಾಪಮಾನ'ವಿದೆ. ಯಾವುದೇ ಬಿಸಿ ಗಾಳಿಯ ವಾತಾವರಣವಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಹೀಗಾಗಿ ಜನರು ಯಾವುದೇ ಆತಂಕವಿಲ್ಲದೆ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಬಹುದು ಎಂಬ ಸಂದೇಶ ರವಾನಿಸಿದೆ.
"ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ, ನಾಲ್ಕನೇ ಹಂತದ ಮತದಾನ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಯಾವುದೇ ಬಿಸಿ ಗಾಳಿಯ ಪರಿಸ್ಥಿತಿ ಇಲ್ಲ. ಈ ಎಲ್ಲ ಕ್ಷೇತ್ರಗಳಲ್ಲಿ ಸಾಮಾನ್ಯಕ್ಕಿಂತ ಸಾಮಾನ್ಯ (±2 ಡಿಗ್ರಿ) ತಾಪಮಾನ ಇರಲಿದೆ. ಹೀಗಿದ್ದರೂ ಮತದಾರರ ಅನುಕೂಲಕ್ಕೋಸ್ಕರ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಕುಡಿಯುವ ನೀರು, ಶಾಮಿಯಾನ ಮತ್ತು ಫ್ಯಾನ್‌ಗಳನ್ನು ಓದಗಿಸಲಾಗಿದೆ" ಎಂದು ಕೇಂದ್ರ ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ.
ಇಂದು 1,717 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ನಿರ್ಧರಿಸುವರು. ನಾಲ್ಕನೇ ಹಂತದಲ್ಲಿ ಮತದಾನ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಸರಾಸರಿ ಸಂಖ್ಯೆ 18. ಈ ಪೈಕಿ ಪ್ರಮುಖ ಅಭ್ಯರ್ಥಿಗಳಾಗಿ ಸಮಾಜವಾದಿ ಪಕ್ಷದಿಂದ ಅಖಿಲೇಶ್ ಯಾದವ್ (ಕನೌಜ್, ಯುಪಿ), ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್ (ಬೆಗುಸರಾಯ್, ಬಿಹಾರ್), ನಿತ್ಯಾನಂದ ಪಟೇಲ್ (ಉಜಿಯರ್‌ಪುರ್, ಬಿಹಾರ್), ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ (ಬೆಹ್ರಾಂಪುರ್, ಪಶ್ಚಿಮ ಬಂಗಾಳ), ಬಿಜೆಪಿಯಿಂದ ಪಂಕಜ್ ಮುಂಡೆ (ಬೀಡ್, ಮಹಾರಾಷ್ಟ್ರ), ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ (ಹೈದರಾಬಾದ್, ತೆಲಂಗಾಣ), ಆಂಧ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್.ಶರ್ಮಿಳಾ (ಕಡಪಾ) ಕಣದಲ್ಲಿದ್ದಾರೆ.
ಚುನಾವಣಾ ಆಯೋಗವು ತನ್ನ ವೋಟರ್ ಟರ್ನ್‌ಔಟ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದು, ಒಟ್ಟು ಅಂದಾಜು ಮತದಾನದ ಅಂಕಿಅಂಶವನ್ನು ಸೇರಿಸಿದೆ. ಮೂರನೇ ಹಂತದ ಮತದಾನದ ಬಳಿಕ ಆ್ಯಪ್ ನವೀಕರಿಸಿದ್ದು, ಹೊಸ ಫೀಚರ್ ಒಟ್ಟಾರೆ ಅಂದಾಜಿನ ನೇರ ಮಾಹಿತಿಯನ್ನು ಒದಗಿಸುತ್ತಿದೆ ಎಂದು ಆಯೋಗ ಹೇಳಿದೆ.
ಮತದಾರರಿಗೆ ನೀಡಲಾದ ವ್ಯವಸ್ಥೆಗಳು: ಕುಡಿಯುವ ನೀರು, ಶೆಡ್, ಶೌಚಾಲಯ, ಸ್ವಯಂಸೇವಕರು, ವೀಲ್‌ಚೇರ್, ವಿದ್ಯುಚ್ಛಕ್ತಿ ಸೌಕರ್ಯವನ್ನು ಎಲ್ಲ ಮತಗಟ್ಟೆಗಳಲ್ಲಿ ಒದಗಿಸಲಾಗಿದೆ. ಮತದಾರರ ಮಾಹಿತಿ ಚೀಟಿಯನ್ನು ಎಲ್ಲ ಅರ್ಹ ಮತದಾರರಿಗೂ ಒದಗಿಸಲಾಗಿದೆ. ಇದು ಮತಗಟ್ಟೆಗೆ ಆಗಮಿಸಿ ವೋಟ್ ಹಾಕುವಂತೆ ಮತದಾರರನ್ನು ಆಹ್ವಾನಿಸುತ್ತದೆ ಎಂದು ಆಯೋಗ ತಿಳಿಸಿದೆ.