ಗೊಂಡಿಯಾ (ಮಹಾರಾಷ್ಟ್ರ): ಗೊಂಡಿಯಾ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾಗಿದ್ದು, 9 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದುರ್ಘಟನೆ ವರದಿಯಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಎಂಎಸ್ಆರ್ಟಿಸಿ ಬಸ್ ಶಿವಶಾಹಿ 36 ಪ್ರಯಾಣಿಕರನ್ನು ಹೊತ್ತು ಭಂಡಾರದಿಂದ ಗೊಂಡಿಯಾ ಜಿಲ್ಲೆ ಕಡೆಗೆ ಸಾಗುತ್ತಿತ್ತು. ಈ ವೇಳೆ, ಸದಕರ್ಜುನಿ ತಾಲೂಕಿನ ದವ್ವು ಗ್ರಾಮದ ಬಳಿ ಎದುರಿಗೆ ಬಂದಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿದ್ದ ಚಾಲಕ ನಿಯಂತ್ರಣ ಕಳೆದುಕೊಂಡು, ಈ ಭೀಕರ ಅಪಘಾತ ಸಂಭವಿಸಿದೆ.
ಮಧ್ಯಾಹ್ನ 12.30ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿ 9 ಮಂದಿ ಸಾವನ್ನಪ್ಪಿದ್ದು, ಗಾಯಗೊಂಡವರನ್ನು ತಕ್ಷಣಕ್ಕೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
10 ಲಕ್ಷ ಪರಿಹಾರ ಘೋಷಣೆ: ಅಪಘಾತ ಸಂತ್ರಸ್ತರ ರಕ್ಷಣಾ ಕಾರ್ಯ ಮತ್ತು ಸಹಾಯಕ್ಕಾಗಿ ತಕ್ಷಣಕ್ಕೆ 10 ಲಕ್ಷ ರೂ ಹಣವನ್ನು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಹಂಗಾಮಿ ಸಿಎಂ ಏಕನಾಥ್ ಶಿಂಧೆ ಸಾರಿಗೆ ಇಲಾಖೆಗೆ ಸೂಚನೆ ನೀಡಿದ್ದಾರೆ.
ಘಟನೆ ಸಂಬಂಧ ಪ್ರಕಟಣೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿಗಳ ಕಚೇರಿ, ರಾಜ್ಯ ಸಾರಿಗೆ ಬಸ್ ಪಲ್ಟಿಯಾಗಿ ಭೀಕರ ಅಪಘಾತಗೊಂಡಿದೆ. ಬಸ್ ಅಡಿಯಲ್ಲಿ ಸಿಲಿಕಿದ್ದ 8 ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದ್ದು, ಮತ್ತಷ್ಟು ಸಾವಿನ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ. ಸ್ಥಳೀಯ ಆಡಳಿತಕ್ಕೆ ತಕ್ಷಣಕ್ಕೆ ಗಾಯಗೊಂಡವರಿಗೆ ಚಿಕಿತ್ಸಾ ಕ್ರಮಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಬಿಜೆಪಿ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್ ಕೂಡ ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಸಾವನ್ನಪ್ಪಿರುವವರಿಗೆ ಸಂತಾಪ ಸೂಚಿಸಿದ್ದಾರೆ. ಗೊಂಡಿಯಾ ಜಿಲ್ಲೆಯ ಸಡಕ್ ಅರ್ಜನಿಯ ಬಳಿ ಬಸ್ ಅಪಘಾತ ಘಟನೆಯು ದುರದೃಷ್ಟಕರ. ಘಟನೆಯಲ್ಲಿ ಸಾವನ್ನಪ್ಪಿರುವ ಪ್ರಯಾಣಿಕರ ಕುಟುಂಬಗಳಿಗೆ ಸಂತಾಪಗಳು ಎಂದು ತಿಳಿಸಿದ್ದಾರೆ.
ಗಾಯಗೊಂಡವರನ್ನು ತಕ್ಷಣಕ್ಕೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗತ್ಯವಿದ್ದಲ್ಲಿ ಗಂಭೀರ ಗಾಯಗೊಂಡವನ್ನು ನಾಗಪುರ ಆಸ್ಪತ್ರೆ ಸ್ಥಳಾಂತರಿಸಲು ಎಲ್ಲಾ ವ್ಯವಸ್ಥೆ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಪ್ರಬಲ ಖಾತೆಗಳಿಗೆ ಮಹಾಯುತಿ ಫೈಟ್; ಗೃಹ ಖಾತೆ ಮೇಲೆ ಶಿಂಧೆ, ಹಣಕಾಸಿನ ಮೇಲೆ ಪವಾರ್ ಕಣ್ಣು