ಮೀರತ್, ಉತ್ತರಪ್ರದೇಶ: ಒಂದೇ ಕುಟುಂಬದ ಐದು ಸದಸ್ಯರನ್ನು ಕೊಲೆ ಮಾಡಿದ ಆರೋಪಿ ನಯೀಮ್ನನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಈತನ ಮೇಲೆ 50,000 ರೂ. ಬಹುಮಾನ ಘೋಷಣೆಯಾಗಿತ್ತು. ಈತನಿಗಾಗಿ ಪೊಲೀಸರು ನಿರಂತರ ಹುಡುಕಾಟ ನಡೆಸುತ್ತಿದ್ದರು. ಗಂಡ ಹೆಂಡತಿ ಹಾಗೂ ಅವರು ಮೂವರು ಹೆಣ್ಣುಮಕ್ಕಳನ್ನು ಕೊಲೆ ಮಾಡಿದ ಆರೋಪಿಯನ್ನು ಕೊನೆಗೂ ಎನ್ಕೌಂಟರ್ ಮಾಡಿದ್ದಾರೆ.
ಎಸ್ಎಸ್ಪಿ ಡಾ.ವಿಪಿನ್ ಟಾಡಾ ಮಾತನಾಡಿ, ಕೊಲೆ ಆರೋಪಿ ನಯೀಮ್ ಮೀರತ್ಗೆ ಬಂದಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಆ ಹಿನ್ನೆಲೆ ಶನಿವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಯೀಮ್ನನ್ನು ಪೊಲೀಸರು ಸುತ್ತುವರೆದಾಗ ಆರೋಪಿ ಪೊಲೀಸರ ಮೇಲೆ ಗುಂಡು ಹಾರಿಸಿದ. ಅದಕ್ಕೆ ಪ್ರತಿಯಾಗಿ ಪೊಲೀಸರು ಸಹ ಗುಂಡು ಹಾರಿಸಿದ್ದು, ಗುಂಡು ನಯೀಮ್ ಎದೆಗೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ ಪೊಲೀಸರು ಆತನನ್ನು ಮೀರತ್ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿ ವೈದ್ಯರು ಆತ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಲಿಸಾಡಿ ಗೇಟ್ ಬಳಿ ಪೊಲೀಸ್ ಎನ್ಕೌಂಟರ್ ನಡೆದಿದೆ ಎಂದು ತಿಳಿಸಿದರು.
ನಯೀಮ್ ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ಕೊಲೆ ಹಾಗೂ ದರೋಡೆ ಮಾಡುತ್ತಿದ್ದನು. ತನ್ನ ಹೆಸರು ಹಾಗೂ ಚಹರೆಯನ್ನು ಬದಲಾಯಿಸಿಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಬದುಕುತ್ತಿದ್ದ. ಆತನ ಮೇಲೆ 50,000 ಬಹುಮಾನವನ್ನೂ ಘೋಷಣೆ ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.
ಮಲಸಹೋದರ, ಆತನ ಪತ್ನಿ, ಮಕ್ಕಳನ್ನೇ ಕೊಂದಿದ್ದ ಆರೋಪಿ: ಕೊಲೆಯಲ್ಲಿ ಭಾಗಿಯಾಗಿದ್ದ ಆತನ ಸಹಚರ ಇನ್ನೂ ತಲೆಮರೆಸಿಕೊಂಡಿದ್ದಾನೆ. ಅವನ ಮೇಲೂ 50,000 ಬಹುಮಾನ ಘೋಷಣೆ ಮಾಡಲಾಗಿದೆ. ಆತ ಕೂಡ ಶೀಘ್ರದಲ್ಲೇ ಸಿಕ್ಕಿಬೀಳುತ್ತಾನೆ ಎಂದು ತಿಳಿಸಿದರು.
ಜನವರಿ 9 ರಂದು ಮೀರತ್ನ ಸುಹೇಲ್ ಗಾರ್ಡನ್ನಲ್ಲಿರುವ ಮನೆಯೊಂದರಲ್ಲಿ 5 ಜನರ ಶವಗಳು ಪತ್ತೆಯಾಗಿತ್ತು. ಕಲ್ಲು ಕತ್ತರಿಸುವ ಯಂತ್ರದಿಂದ ಅವರನ್ನು ಕ್ರೂರವಾಗಿ ಕೊಲೆ ಮಾಡಲಾಗಿತ್ತು. ಪೊಲೀಸರು ತನಿಖೆ ನಡೆಸಿದಾಗ ಮಲ ಸಹೋದರ ನಯೀಮ್ ಮತ್ತು ಅವರ ಸಹಚರರು ಮೊಯಿನ್, ಅವನ ಹೆಂಡತಿ ಆಸ್ಮಾ ಮತ್ತು ಮೂವರು ಹೆಣ್ಣು ಮಕ್ಕಳನ್ನು ಕೊಂದಿರುವುದು ತಿಳಿದು ಬಂದಿತ್ತು. ಕೊಲೆ ಮಾಡಿದ ನಂತರ ಆರೋಪಿಗಳು ಮೃತದೇಹಗಳನ್ನು ಹಾಳೆಯಲ್ಲಿ ಸುತ್ತಿಟ್ಟಿದ್ದರು. ಮೂವರು ಹೆಣ್ಣು ಮಕ್ಕಳ ಮೃತದೇಹಗಳನ್ನು ಚೀಲದಲ್ಲಿ ತುಂಬಿ ಪೆಟ್ಟಿಯೊಳಗೆ ಬಚ್ಚಿಟ್ಟಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಮೊಯಿನ್ ಹಾಗೂ ಆಸ್ಮಾ ತಲೆಗೆ ಕಬ್ಬಿಣದ ರಾಡ್ನಿಂದ 10ಕ್ಕೂ ಹೆಚ್ಚು ಬಾರಿ ಹೊಡೆದಿರುವುದು ತಿಳಿದು ಬಂದಿತ್ತು. ಉಳಿದ ಇಬ್ಬರು ಹೆಣ್ಣು ಮಕ್ಕಳ ತಲೆಗೂ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಲಾಗಿತ್ತು. ಮೂರನೇ ಹೆಣ್ಣುಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು ಎಂದು ಘಟನೆ ಬಗ್ಗೆ ವಿವರಿಸಿದರು.
ಆರೋಪಿ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಕೊಲೆ ಮಾಡಿದ ಬಳಿಕ ಆರೋಪಿ ನಯೀಮ್ ತನ್ನ ಸೋದರಮಾವ ಸಲ್ಮಾನ್ ಮನೆಯಲ್ಲಿ ತಂಗಿದ್ದ. ಸಲ್ಮಾನ್ ಜೊತೆಗೆ ನಯೀಮ್ ಸುಹೈಲ್ ಗಾರ್ಡನ್ನಲ್ಲಿ ಓಡಾಡುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿಟವಿ ಕ್ಯಾಮರಾ ದೃಶ್ಯಗಳನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಲು 8 ತಂಡಗಳನ್ನು ರಚಿಸಿದ್ದರು.
ಜನವರಿ 11ರಂದು ಆರೋಪಿಗಳ ಸುಳಿವು ನೀಡಿದವರಿಗೆ ತಲಾ 25,000 ರೂ. ಬಹುಮಾನ ಘೋಷಿಸಿದ್ದರು. ಆ ಮೊತ್ತವನ್ನು ಎಸ್ಎಸ್ಪಿ ಡಾ.ವಿಪಿನ್ ಟಾಡಾ ಇತ್ತೀಚೆಗೆ 50 ಸಾವಿರಕ್ಕೆ ಹೆಚ್ಚಿಸಿದ್ದರು. ಆರೋಪಿಗಳ ಹುಡುಕಾಟಕ್ಕಾಗಿ ಮೀರತ್ ಪೊಲೀಸರು ಮಹಾರಾಷ್ಟ್ರ, ರಾಜಸ್ಥಾನ ಮತ್ತು ಇತರ ರಾಜ್ಯಗಳಲ್ಲಿ ತನಿಖೆ ನಡೆಸಿದ್ದರು. ಈ ಕೊಲೆಯಲ್ಲಿ ಭಾಗಿಯಾಗಿದ್ದ ನಜರಾನ ಹಾಗೂ ತಸ್ಲೀಮ್ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಗ್ಗಿನ ಜಾವ 4 ಗಂಟೆಗೆ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ನಯೀಮ್ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಬಾಗಲೂರು ವ್ಯಾಪ್ತಿಯಲ್ಲಿ ರೌಡಿ ಶೀಟರ್ ಹತ್ಯೆ ಪ್ರಕರಣ : ಅಮೃತಸರದಲ್ಲಿದ್ದ ಆರೋಪಿ ಬಂಧನ